Tuesday, 25 February 2014

ದೂರವ ದೂರುತ!!

ಬಿಟ್ಟು ಹೋಗುವ ಮುನ್ನ 
ಉದುರಿ ಬಿಟ್ಟಿತು ಮರವು 
ಹಣ್ಣೆಲೆಯ ನೆಪದಲ್ಲಿ 
ಒಂದೆರಡು ಕಂಬನಿ 
ದೇಹ ದೂರಾದರೂ 
ನಂಟು ಬಿಕ್ಕುತ್ತಿದೆ 
ದುಃಖ ಹೆಚ್ಚಿದೆ ನೋಡು 
ನೆರಳಿಗೂ ಯಾತನೆ 

ಹತ್ತು ಸಾವಿರ ಸಾವ
ಸತ್ತು ಬದುಕಿದೆ ಕನಸು 
ಮತ್ತೆ ಸಾಯುವುದಕ್ಕೆ 
ಹೇಳಿದರೂ ಸರಿಯೇ 
ಇತ್ತ ಕಾಡ್ಗಿಚ್ಚಿನಲಿ 
ಅತ್ತ ಮರುಭೂಮಿಯಲಿ 
ನಡುವೆ ಸಿಕ್ಕವನವನೇ 
ಅಪರಿಚಿತ ವಿಧಿಯೇ?

ಚೂರುಗಲ್ಲಿಗೆ ಸಿಕ್ಕಿ 
ಭಾರವಾಯಿತು ಹೃದಯ 
ನೋವು ಕಾಣದೆ ಇದ್ದೂ 
ಎತ್ತರವೇ ಜೋರು 
ಒಂದರೊಂದಿಗೆ ಒಂದು 
ಸೇರಿ ಪೂರ್ಣತೆ ಅಂದು 
ದೂರಗೊಂಡಿರಲೀಗ 
ಪೂರ್ಣಿಸುವರಾರು?!!

ಬಾಯಿ ಬಂದಿದೆ ಈಗ 
ಆದ ಗಾಯಕೆ ಇಲ್ಲಿ 
ನಿಲ್ಲದಾಗಿದೆ ಅದರ 
ವಿರಹದ ಗೀತ
ಒಂದು ಕಂಬನಿ ತೊಟ್ಟು 
ಭೂಮಿ ಸೇರುವ ಮುನ್ನ 
ಸಾರಿ ಹೇಳಿದೆ ಮತ್ತೆ 
ಮತ್ತದೇ ಗಾಥೆ 

ಬಿಟ್ಟು ಬಾಳುವುದಕ್ಕೆ 
ಸಿಕ್ಕ ಉತ್ತರ ಹಿಂದೆ 
ಸಾಲುಗಟ್ಟಿದ ಪ್ರಶ್ನೆ 
ಇಲ್ಲ ಜವಾಬು 
ಸತ್ತ ದೇಹದ ಒಳಗೆ 
ಸಪ್ತ ಸಾಗರ ಉಸಿರು 
ಮೊರೆಯಿಕ್ಕುತಿದೆ ಅಲ್ಲಿ 
ನೆನಪೇ ಸಬೂಬು 

ಮತ್ತೊಂದು ಚಿಗುರಲ್ಲಿ 
ಸಂಭ್ರಮಿಸಿದೆ ಮರ 
ಮತ್ತೊಮ್ಮೆ ನೆರಳನ್ನು 
ಕೂಡಿ ನೋಡೋಣ 
ದೂರವಿದ್ದು ಆದ 
ಲಾಭ ನಷ್ಟದ ಕುರಿತು 
ಹೊತ್ತು ಮೀರುವ ಹಾಗೆ 
ಮಾತನಾಡೋಣ !!

               -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...