Wednesday, 5 February 2014

ಮನಸಿನಲಿ ಇದೇನಿದು !!

ಮನಸು ಹಸಿಯಾಗಿದೆ 
ವಿಷಕಾರಿ ಅಣಬೆಗಳು
ಚಿಗುರಿವೆ ಅಲ್ಲಿ 
 
ಬೇಕಿದೆ ಬೆಳಕು 
ಚೂರಾದರೂ ಸರಿಯೇ 
ಪಾಚಿಗಟ್ಟಿದ ನೆಲವ 
ಹೀರಿ ಒಣಗಿಸಲು;
ಕೈಚಾಚಿ ಮೇಲೆಳೆಯ-
-ಬೇಕಿದೆ ತಾ ಇಂದು 
ಕಾಲು ಜಾರಿ ಬಿದ್ದ
ಒಂದೊಂದೇ ಭಾವನೆಗಳ
 
ನುಂಗಿದ ವಿಷ ಬೀಜ 
ಬಿತ್ತಿಕೊಂಡಿದೆ ಮನದಿ
ಗೊಬ್ಬರಕೆ ಗೋಗರೆಯದೆ,
ಬೆಳಕಿಗೆ ಕೈಚಾಚದೆ 
ಮೊಳೆದು ಮೈ ಮುರಿದಿದೆ 
ಸಾಂತೈಸಲು ಬಂದ 
ತಿಳಿಗಾಳಿಯ ಬೆನ್ನು ಹತ್ತಿ 
ಹಬ್ಬಿದೆ ಎಲ್ಲೆಡೆ 
 
ಸಣ್ಣ ಕುಟೀರದಲಿ 
ಕಾಪಾಡಿಕೊಂಡಿರುವೆ 
ನಲುಮೆಯ ಕೂಸನು 
ವಿಷ ಗಾಳಿ ಸೇವಿಸದಂತೆ;
ಕೂಸೀಗ ಅಂಬೆಗಾಲಿಡುತಿದೆ 
ಲೋಕ ಕಾಣುವ ಉಮ್ಮಸ್ಸಿನಲಿ 
ಹೊರಗೆ ಜಟಿಲ ಬೇಲಿ
ಹಾರಲು ತರಚ ಬಹುದು 
 
ಜೋಗುಳದ ಬತ್ತಳಿಕೆ 
ಖಾಲಿಯಾಗಿದೆ ಇಂದು 
ಇನ್ನು ಕೂಸನು ಮಲಗಿಸಲು 
ನಾನು ತರವಲ್ಲ. 
ಮಡಿಲ ತೊಲಗಿಸಿ
ಅತ್ತು ದಾಟಿತು ಹೊಸ್ತಿಲ 
ತಡೆವ ಸಾಹಸಕಿನ್ನೂ 
ಕಾರಣ ಉಳಿದಿಲ್ಲ 

ಮನಸು ಒಂದಿತ್ತು 
ಈಗಲೂ ಇದೆ, ಇರದಂತೆ 
ಭಾವುಕತೆ ಅತೀವವಾದಾಗ 
ಕಂಪಿಸಿ
ಎಲ್ಲವ ನೆಲಸಮಗೊಳಿಸಿ 
ಮತ್ತೊಂದು ಸೃಷ್ಟಿಗೆ ಸಾಕ್ಷಿಯಾಗಿ 

ಈಗ ಬೇಕಿರುವುದೂ ಅದೇ 
ಭಾವುಕ ಮರುಕ 
ಈಗಿರುವ ಮನಸು ಚೂರಾಗಲಿ 
ಮತ್ತೊಂದು ಮನಸು ಚಿಗುರೊಡೆಯಲಿ !!

                                  -- ರತ್ನಸುತ 

2 comments:

  1. ಯಾವತ್ತಿಗೂ ಮನಸನ್ನು ರಿಪೇರಿ ಮಾಡಿಯೋ ಅಥವ ಹೊಸ ಮನಸನ್ನು ಹಂಬಲಿಸಿಯೋ ಆಶಾಭಾವನೆ ಬೆಳೆಸಿಕೊಳ್ಳುವುದು ಸಕಾರಾತ್ಮಕ ಬದುಕು.

    ReplyDelete
  2. joguada battalike
    matte odisikonditu...
    vandanegalu sundadra salugaligagi:)

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...