Monday, 17 February 2014

ಇನ್ನೂ ಸಿಗದಾಕೆ !!

ಮೌನವ ನಾಚಿಸಿ ಹಾಡಿಸುವೆ 
ನೀನೇ ಮೌನ ವಹಿಸುತಲಿ 
ಧ್ಯಾನದ ಮಧ್ಯೆ ವ್ಯಾಪಿಸುವೆ 
ಇನ್ನೂ ಅಕ್ಕರೆ ತೋರುತಲಿ 
ಕತ್ತಲಿಗೊಂದು ಹೆಸರಿಡುವೆ 
ಅಲ್ಲೇ ಥಟ್ಟನೆ ಕನಸಿನಲಿ 
ಬೀಳುವ ಮುನ್ನ ಕೈ ಹಿಡಿವೆ 
ಆನಂತರಕೆ ದೂಡುತಲಿ 
 
ನಗೆಯ ಬುಗ್ಗೆಯ ಚಿಮ್ಮಿಸುವೆ 
ತಣಿಸಿ ಅದರ ಹನಿಗಳಲಿ 
ಕಾಗೆ ಗುಬ್ಬಿ ಕಥೆ ನುಡಿವೆ 
ನಂಬಿದೆನೆಂದು ಒಪ್ಪುತಲಿ 
ಹಸ್ತದ ಸಾಲನು ಸೆರೆ ಹಿಡಿವೆ 
ನಿನ್ನ ಹಸ್ತಕೆ ಜೋಡಿಸುತ 
ಚಟಗಳನೆಲ್ಲ ಬಿಡಿಸಿರುವೆ 
ಆಣೆಯ ಶೂಲಕೆ ಏರಿಸುತ 
 
ನಂದಾದೀಪದ ಬಳುಕಿನಲ್ಲಿ 
ನನ್ನ ನೆರಳನು ಬಳುಕಿಸಿದೆ 
ಎಂದೋ ಮುಂದಿನ ವಿಷಯಗಳ 
ಇಂದೇ ಕೂತು ಚರ್ಚಿಸುವೆ 
ಚಂದಾಮಾಮಾನ ತೋರಿಸುತ 
ತಾರೆಗಳ ಬೇಡಿಕೆ ಇಡುವೆ 
ದಿನದಂತ್ಯಕೆ ತಪ್ಪಿಸದಂತೆ 
ಮುತ್ತಿನ ಸೂಚನೆಯ ಕೊಡುವೆ 
 
ರಾಜಿ ಆಗುವ ಜಗಳಗಳ 
ಮತ್ತೆ ಮತ್ತೆ ಕೆಣಕಿಸುವೆ 
ಒಪ್ಪಿಗೆಯಾದ ಮಾತಿಗೆ ನೀ 
ಹಾಗೇ ಕಣ್ಣ ಮಿಟುಕಿಸುವೆ 
ನನ್ನಲಿ ಕಾಣದ ಪೌರುಷವ 
ನೀನೇ ತುಂಬಿಸಿ ಬಿಟ್ಟವಳು 
ಹೆಣ್ತನ ಇಣುಕಿನ ಪದ್ಯಗಳ 
ನನಗೇ ತೋಚದೆ ಬರೆಸಿದಳು 
 
ಗುಂಡಿಗೆ ಏಟಿಗೆ ಬೆಚ್ಚುವಲು 
ಎದೆಯ ಆಲಿಸಿ ಮಲಗಿರಲು 
ಚಂಡಿಯ ಹಾಗೆ ಎರಗುವಳು 
ಸುಳ್ಳಿಗೆ ಸಿಕ್ಕಿ ಬಿದ್ದಿರಲು 
ಆಧಾರ ತೋರುವ ಕೈ ಬೆರಳು 
ನೇವರಿಸಲು ನನ್ನ ತಲೆಯ 
ಎಲ್ಲಿ ಪರಿಣಿತಿ ಹೊಂದಿದಳೋ 
ನನ್ನ ಬರಸೆಳೆವ ಕಲೆಯ!!.. 

                     -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...