Tuesday, 18 February 2014

ನೀಲೋತ್ಪತ್ತಿ !!

ಬಿಳಿ ಹಾಳೆ ಮೇಲೆರಡು 
ನೀಲಿ ಅಕ್ಷರ ಶಾಯಿ 
ಶಾಯಿಯೆಂದನಿಸದೆ 
ವಿಕೃತ ಪಾನಮತ್ತ 
ಕಾಮನೆಯ ಚಿವುಟಿ  
ಎಚ್ಚರಿಸಿದವನೊಳಗೆ 
ಅಂತರಾತ್ಮವು ತಾನು 
ಪೋಲಿ ಗವಾಯಿ 
 
ಶೃಂಗಾರಕೆ ಪೋಲಿ-
-ತನದ ಹೆಸರಿಟ್ಟುದಕೆ 
ಅಶ್ಲೀಲ ಎದೆಯೊಡ್ಡಿ 
ಕಲುಷಿತ ನಡು ಬಾಗಿ 
ನೀಲಿ ಉಟ್ಟಾಗಸ
ಏದುಸಿರ ಬಿಡುತಿತ್ತು 
ಮಳೆ ಸುರಿದರೂ ಅದು 
ಬಚ್ಚಲ ನೀರೇ !!
 
ನವಿಲು ಗರಿ ಮುಚ್ಚಿತು 
ಆಸೆಗಳ ಅದುಮಿಟ್ಟು 
ಹೆಣ್ಣವಿಲು ಹಣ್ಣಾಗಿ 
ಕಣ್ಣುಗಳನರಳಿಸುತ 
ಹೆಣ್ತನವ ಹೊರ ಚಾಚಿ 
ಉಕ್ಕು ನಡೆಯಿಟ್ಟಲ್ಲಿ 
ಹೆಜ್ಜೆ ಗುರುತ ಬಿಡದೆ 
ಬಳಿಸಾರಿ ಬರಲು 
 
ನದಿಯ ತಡೆಗಟ್ಟಿತು 
ಮಿಲನ ಮೈಥುನದಿಂ-
-ದೇಳಬೇಕಿದ್ದ ಸುಳಿ-
-ಯನ್ನು ತಪ್ಪಿಸಿ ಕಡಲು 
ಚಂದಿರನ ಕಂಪನಕೆ 
ಹೊದಿಸಿ ಹಳೆ ಚಾದರವ 
ಬಿದ್ದ ಅಲೆಗಳ ಮತ್ತೆ 
ಹೊಡೆದೆಬ್ಬಿಸಿತ್ತು 
 
ತಬ್ಬಿಬ್ಬುಗೊಂಡು ತಾ 
ತಡವರಿಸಿ ನಾಲಿಗೆಯ 
ಅಳದೆ ಉಳಿದ ಹಸುಳೆ
ಹಸಿದು ಸತ್ತಿತ್ತು 
ಅಮ್ಮಳೆದೆಗೆ ಕನ್ನ 
ಇಟ್ಟವ ತಾನೊಬ್ಬ 
ಕಾಮಾಂಧನೇ? ಎಂಬ 
ಗೊಂದಲವ ಹೊತ್ತು 

ನೀಲಿ ಶುಭ್ರತೆಯಲ್ಲಿ 
ಪೋಲಿ ಗುಣವಾಚಕ 
ಪ್ರಕೃತಿಯ ನೈಜ್ಯ
ಶೃಂಗಾರ ತೋರ್ಗನ್ನಡಿ 
ಬಿಂಬ ಬೆತ್ತಲಗಂಡು 
ಕಣ್ಣು ಮುಚ್ಚುವುದಲ್ಲ 
ಕಣ್ಣ ಬೆತ್ತಲ ಮುಚ್ಚಿ 
ಬಿಂಬ ಮೆಚ್ಚುವುದು 

          -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...