Tuesday, 18 February 2014

ಚೂರು ಚೂರಾಗಿ !!

ನಿಂತು ಬಿಡು ಚೂರು 
ಮಾತು ಕೇಳಿಸುವಂತೆ 
ಕಿವಿಯಗೊಡು ಒಮ್ಮೆ 
ಅಲ್ಪನ ಛೇಡಿಸುತ 
ಕಾಡುವುದು ಸಾಕು 
ವಿರಕ್ತಿಗೊಂಡರೆ ಮನಸ 
ಸರಿ ಪಡಿಸಲಾರೆ 
ಸರಿ ಹೋಗಲಾರೆ 

ಅತ್ತು ಬಿಡು ಚೂರು 
ಬತ್ತಿ ಹೋಗಲಿ ಪೀಡೆ 
ಮತ್ತೆ ಬರದಂತೆ 
ಬಿಕ್ಕಿ ಸಾಯಲಿ ಎದೆಯ 
ದುಃಖದ ಪರ್ವ 
ಹೊತ್ತು ಮುಳುಗುವ ಮುನ್ನ 
ನಕ್ಕು ಬಿಡು ಸಾಕು 
ನಿಟ್ಟುಸಿರನಿಡುವೆ 

ನಂಬಿ ಬಾ ಚೂರು 
ಈ ಎದೆಯ ಬಡಿತಕ್ಕೆ 
ನಿನ್ನೊಲವ ಸೂಸಿ 
ಕಾಣುವ ಕನಸಲ್ಲಿ 
ಬಣ್ಣಗಳ ಬೆರೆಸಿ 
ಮಾಗಿದ ಮನಸಲ್ಲಿ 
ರಂಗೋಲಿ ಬಿಡಿಸಿ 
ನಾ ದಣಿಯುವೆ 

ನಾಚಿ ಬಿಡು ಚೂರು 
ಗಲ್ಲವ ಸಾರಿಸಲು
ಕೆಮ್ಮಣ್ಣ ತಂದು
ಒಂದೊಂದು ಸಿಗ್ಗಲ್ಲಿ 
ಮೊಗ್ಗಂತೆ ಕಂಡು 
ಆಗಾಗ ಮಿಂಚಂತೆ 
ನನ್ನೊಮ್ಮೆ ಕೊಂದು 
ಉಸಿರನ್ನು ಮರೆವೆ 

ಕೆಣಕಿ ಬಿಡು ಚೂರು 
ದಿಕ್ಕು ತಪ್ಪಿದ ಹಡಗು 
ದಡ ಸೇರುವಂತೆ 
ಮಾತು ಮುರಿದ ನಡೆಗೆ 
ಚಾಟಿ ಬಡಿದಂತೆ 
ಮತ್ತೆ ಮತ್ತೆ ನಿನ್ನ 
ನೆನಪಾಗುವಂತೆ 
ನಾ ತಿದ್ದಿಕೊಳುವೆ 

ಮರೆತು ಬಿಡು ನನ್ನ 
ಮತ್ತೊಮ್ಮೆ ಮಗದೊಮ್ಮೆ 
ಒಲವಾಗುವಂತೆ 
ಬರೆಯದ ಕವಿತೆಗಳು 
ನೆನಪಾಗುವಂತೆ 
ಮುಗಿಯದ ಬದುಕೊಂದು 
ಚಿಗುರೊಡೆಯುವಂತೆ 
ನಿನಗೆ ಋಣಿಯಾಗುವೆ !!
 
                  -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...