Friday, 7 February 2014

ತಲೆ ನೋವಿನ ಪದ್ಯ !!

ತಲೆ ನೋವು 
ಇದು ಅಂಥಿಂಥ ನೋವಲ್ಲ 
ತಲೆಯ ನೋವು ಅಷ್ಟೇ 

ಕೇಳುವವರೂ ಉಂಟು 
ಹೇಗೆ ಬರುವುದು?
ಹೇಗಿರುವುದು ಈ "ತಲೆ ನೋವು"? ಎಂದು 
ಅದೃಷ್ಟವಂತರೇ ಸರಿ 

ಕೇವಲ ಪ್ರತೀತಿಗೆ ಬಳಸುವ 
"ನಿಂದೊಳ್ಳೆ ತಲೆ ನೋವು!!" 
ಎಂಬ ವ್ಯಾಖ್ಯಾನ
ನಿಜಕ್ಕೂ ನೋವಿನ ಸೂಚಕ ಅಲ್ಲವೇ ಅಲ್ಲ 

ತಲೆ ನೋವನ್ನ 
ವಿಶ್ಲೇಷಿಸಿ ವಿವರಿಸುವುದೇ 
ಒಂದು ತಲೆ ನೋವಿನ ಕೆಲಸ //ಇಲ್ಲಿಯ ತಲೆ ನೋವೂ ನಿಜದಲ್ಲಿ ನೋವಲ್ಲ//

ಅನುಭವಿಸುವವರಿಗೇ ಗೊತ್ತು 
ನೋವಿನ 
ಆಳ, ಎತ್ತರ, ಸುತ್ತಳತೆ, ವಿಸ್ತಾರ ಇತ್ಯಾದಿ 

ಕಬ್ಬನ್ನು ಹಾಲು ತೆಗೆವ ಯಂತ್ರದಲ್ಲಿಟ್ಟು 
ಚಕ್ರ ತಿರುಗಿಸುವಾಗ 
ಅದು ಪಟ್ಟ ನೋವು 
ಚಪ್ಪರಿಸಿ ಸವಿಯುವ ನಾಲಿಗೆಗೇನು ತಿಳಿಯಬೇಕು 

ಕುಲುಮೆಯಲ್ಲಿ ಮಿಂದೆದ್ದು 
ಬಡಿಸುಕೊಳ್ಳುವ ಸಲಾಕೆ,
ಗಂಟೆಯ ಒಳಾಂಗಣ,
ಹಲಗೆಯ ಚರ್ಮ

ಒಲೆಗೆ ಮುಖ ಒಡ್ಡಿದ 
ಅಂಡೆಯ ತಳಹದಿ,
ಗುಂಡೇಟಿಗೆ ಸಿಕ್ಕ ಗುರಿ,
ಬುಲ್ಡೋಜರ್ ಅಡಿಯ ರಸ್ತೆ 

ಬೂಟಿನ ಕಾಲಿಗೆ ಚುಚ್ಚಿದ ಮುಳ್ಳು 
ತುತ್ತೂರಿಯ ಕಿವಿ, ಶಂಖದ ಬಾಲ 
ಸೌಂಡ್ ಸಿಸ್ಟಮ್ಮಿನ ಬಕೆಟ್ಗಳು 
ಮಿಕ್ಸಿ ಬ್ಲೇಡಿಗೆ ಸಿಕ್ಕ ಹಣ್ಣು 

ಮದ್ದು ಸಿಡುಕಿಗೆ ಸಿಕ್ಕ ಬಂಡೆ ಕಲ್ಲು 
ಉಳಿ ಕೆತ್ತಿದ ಶಿಲ್ಪ
ಕೊಳವೆ ಬಾವಿಗೆ ಕೊರೆದ ನೆಲ 
ಗರಗಸದ ಹಲ್ಲು 

ಇನ್ನೂ ಹಲವು 
ಸಹಿಸಲಾಗದ ನೋವಿನೊಡನೆ 
ಬಾಯಿ ಬಿಡದೆ ತೆಪ್ಪಗಿರುವುದು 
ಮಾತುಗಳು ಸಾಲದಾಗಿ 

ಇನ್ನು ಸಾಧಾರಣ ಈ ತಲೆಯ 
ನೆರವಿಗೊಂದಿಷ್ಟು 
ಮುಲಾಮು, ಮದ್ದು ಗುಳಿಗೆ, ನಿದ್ದೆ ಇತ್ಯಾದಿ 

ಇದಾದಮೇಲೂ ವರ್ಣಿಸುವುದೆಂದರೆ 
ಪೆನ್ನಿಗೂ, ಪದಗಳಿಗೂ
ತಲೆ ನೋವು ತರಿಸಿದಂತೆ 
ಇಷ್ಟಕ್ಕೇ ಮುಗಿಸುವೆ ಮುಂದುವರಿಸದಂತೆ !!

                                  -- ರತ್ನಸುತ

1 comment:

  1. ತಲೆ ನೋವಿನ ಬಗ್ಗೆ ಇಂಥ ವರ್ಣನೆ ಎಲ್ಲೂ ನೋಡಿರಲಿಲ್ಲ ಭರತ್... ಸೂಪರ್!!

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...