Thursday, 2 January 2014

ಹೇಮಂತ ಋತುವಿನಲಿ !!

ಹೇಮಂತ ಋತುವಿನ ನಿನ್ನ ನಾಲಿಗೆ
ಅದೆಷ್ಟು ತಡವುತಿದೆ ಆ ತುಟಿಗಳ!!
ಅಲ್ಲಿ ಅವು ತೇವಗೊಂಡಾಗ 
ಇಲ್ಲಿ ಒಣಗಿವೆ ನನ್ನ ತುಟಿ!!

ಆ ಕುರಿ ತೊಗಲಿಗೆ ಅದೆಂಥ ಯೋಗ 
ಎಣ್ಣೆಯಿಂದ ಬೇರಾಗಿ 
ಸಕ್ಕರೆ ಪಾಕಕೆ ಸಿಕ್ಕ ಜಾಮೂನಿನಂತೆ 
ಬಿಗಿದಪ್ಪಿದೆ ನಿನ್ನೊಡಲ 
 
ಬಸಿದ ಅಂಗೈಯ್ಯ ನಡುವೆ
ಹೊತ್ತ ಕಿಚ್ಚ ನೆಚ್ಚಿ ಹಚ್ಚುವಾಗ
ಗಲ್ಲದ ಮೇಲೊಂದು ನಗು 
ಬೊಗಸೆಯಲ್ಲಿ ಮುದ್ದು ಮೊಗದ ಮಗು 
 
ಅದರಿದಧರದೊಳಗೆ ಉದುರ-
-ಬಹುದು ಹವಳದ ಹಲ್ಲು 
ಬಿಸಿ ಕಾಫಿ ಗುಟುಕು ಚೂರು 
ತಡೆದು ನೆಲ್ಲಿಸಲಿ ಅವನು
 
ಗೂಡಿನಿಂದ ಆಗಾಗ ಹೊರ- 
ಇಣುಕುವ ಕಣ್ಣೋಟ 
ಅದ ಬಡಿದು ಸುಮ್ಮನಾಗಿಸುವ
ಚಾದರ, ಕಣ್ರೆಪ್ಪೆ 
 
ಮೂಗಿನಂಚು, ಕಿವಿಯ ಆಲೆ 
ಉಗುರ ಸಾಲು, ಕೆನ್ನೆ ಮೇಲೆ 
ಕೆಂಪು ಸವರಿ ಹೋದ ಆ ಕುಂಚವೆಲ್ಲಿ?
ಕಲೆಯ ಕಲಿಯ ಹೊರಟ ನಾ ಕಲಾವಿದನಿಲ್ಲಿ 
 
ರೋಮ ರೋಮವನ್ನೂ ಪುಳಕ-
-ದುತ್ತುಂಗಕೆ ಕೊಂಡೊಯ್ಯಲು 
ಸತ್ತೊಣಗಿದ ಮರದ ತೊಗಟಾಗಲೇ
ಸುಟ್ಟು ಕಾವೊದಗಲು ಕಾರಣವಾಗಿ?!!

ಧ್ವನಿ ಏಳುವುದು ಬೇಡ 
ಕಣ್ಣಲ್ಲೇ ಕರೆ ನೀಡು,
ಉರಿವುದೆನ್ನೊಡಲು ತಾನಾಗಿ!!

                         -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...