Monday, 27 January 2014

ಪಂಚಪ್ರಾಣ ತೆಕ್ಕೆಗೆ !!

ಹಾಲಿಗೊಂದು ತೊಟ್ಟು ಮೊಸರು 
ಪೂರ್ತಿ ಹೆಪ್ಪುಗಟ್ಟಲು 
ದಾರಕೊಂದು ಸಣ್ಣ ಸೂಜಿ
ಎರಡ ಕೂಡಿ ಬೆಸೆಯಲು  
ಮಾತಿಗೊಂದು ಚಂದ ರಾಗ 
ಹಾಡು ಮೂಡಿ ಹೊಮ್ಮಲು 
ಕಣಕ ಹೂರಣಕ್ಕೆ ಹೊದಿಸಿ 
ಬಾಳು ಸಿಹಿಯ ಹಂಪಲು

ತೊರೆ  ತೊರೆಯ ಹರಿವುಗಳು 
ಕಡಲ ಸೇರಬೇಕಿದೆ 
ಎಲೆ ಮರೆಯ ಹೂ ಚಿಗುರು 
ವಸಂತಕಾಗಿ ಕಾಯದೆ  
ರೆಕ್ಕೆಗೊಂದು ಎತ್ತರವಿದೆ
ಜೋಡಿ ಹಕ್ಕಿಗಾಗಸ
ಮುದ್ದೆ ಬೆಲ್ಲ ಕರಗಲಿಕ್ಕೆ
ನಾಂದಿಯಾದ ಪಾಯಸ 

ದೂರ ಚುಕ್ಕಿಗೊಂದು ಹೆಸರು 
ದಿನವೂ ಬದಲಿಸುತ್ತಲಿ 
ತಾಜ ಮಹಲ ಕಟ್ಟಿಕೊಂಡು 
ಆಡಿಕೊಂಡ ಮಾತಲಿ 
ಸುತ್ತ ಮುತ್ತ ಮೌನವನ್ನು 
ಸವಿದು ಸುಮ್ಮನಾಗಲು 
ನೋಟವನ್ನು ಪೋಣಿಸೋಣ 
ಒಂದು ಕಾವ್ಯ ಹೊಸೆಯಲು 

ಏಳು ಬಣ್ಣ ಸಾಲದಾಗಿ 
ವರ್ಣ ಕ್ರಾಂತಿ ಆಯಿತು 
ಬಿಳಿಯು ತಾನು ಎದೆಯ ಸೀಳಿ 
ಸಾಲು ಸಾಲು ಕಟ್ಟಿತು 
ಕೋಪಗೊಂಡ ಕೆನ್ನೆ ರಂಗು 
ಯಾವ ಮೂಲ ಅದರದು?
ನಾಚುಗಣ್ಣಿನೊಳಗೆ ರಂಗವಲ್ಲಿ
ಅಳಿಸಲಾಗದು 

ಹೊಸತು ಎಲ್ಲ ಮೊದಲ ಬಾರಿ 
ಅಪರಿಚಿತ ಎಲ್ಲವೂ 
ಸಾಗಿ ಬೆಳೆದ ಪರಿಚಯಕ್ಕೆ 
ಹೀಗ್ಯಾವೂ ಅನಿಸವು 
ಕಿರು ಬೆರಳ ಕೊಕ್ಕಿ ಹಿಡಿದು 
ಸಿಕ್ಕಿ ಬಿದ್ದ ಕೊಕ್ಕಿಗೆ 
ಹಂಚಿ ತಿಂದ ಗುಟುಕ ಜೊತೆಗೆ 
ಪಂಚಪ್ರಾಣ ತೆಕ್ಕೆಗೆ !!

                   -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...