Thursday, 30 January 2014

ಭಾವನೆಗಳು ಚೂರಾದಾಗ !!

ಒಡೆದ ಕನ್ನಡಿಯ ಚೂರುಗಳಲ್ಲಿ
ನನ್ನ ಬಿಂಬ ಯಾವುದೆಂದು ನಂಬಲಿ?
ಎಲ್ಲವೂ ನನ್ನಂತೆಯೇ, 
ನನ್ನ ಪ್ರತಿನಿಧಿಸುತಿದ್ದವುಗಳೇ 
ಹೆಚ್ಚು ಕಮ್ಮಿ ಎಲ್ಲವೂ ಸ್ಪಷ
ನನ್ನ ನಾ ಆಯ್ದುಕೊಳ್ಳುವ 
ತೀರದ ಗೊಂದಲದಲ್ಲಿ ದಿಟ್ಟಿಸಿದೆ ಒಂದರೆಡೆಗೆ 
ಮಿಕ್ಕೆಲ್ಲವುಗಳ ತಿರಸ್ಕರಿಸಿ 

ದೊಡ್ಡವರು ಇದಕ್ಕೇ ಅಂದಿರಬೇಕು 
ಒಡೆದ ಕನ್ನಡಿಗೆ 
ಮುಖ ಒಡ್ದಬಾರದೆಂದು 
ಚೂರುಗಳೆಲ್ಲವ ತಿಪ್ಪೆಗೆಸೆಯುತ್ತಿದ್ದರು.  
ಈಗ ತಿಪ್ಪೆಯ ಎಲ್ಲೆಂದು ಹುಡುಕಲಿ?
ಅಸಲಿಗೆ ಚೂರುಗಳ ಆಯ್ವುದಾದರು ಹೇಗೆ ?
ಒಡೆದಿರುವುದು ನನ್ನ ಮನಸು 
ಅದರೊಳಗಿನ ಭಾವನೆಗಳು!!

ಇನ್ನೂ ನೆನಪಿದೆ 
ಭಾವನೆಗಳ ನವೀಕರಿಸಿಕೊಂಡಾಗ 
ಅವೆಷ್ಟು ಖುಷಿ ಪಟ್ಟಿದ್ದವು!!
ಒಂದೊಂದೂ ತಂತಮ್ಮ 
ಹೊಸ ಉಡುಗೆ-ತೊಡುಗೆಯಲ್ಲಿ 
ನಾಚುತ್ತಲೇ ಬಂದು ಎದುರು ನಿಂತಾಗ 
ಕಂಗಳ ಎಷ್ಟು ತಡವಿಕೊಂಡರೂ 
ಸಾಲದಾಗಿತ್ತು ಅಂದು 

ಒಂದು ಸಣ್ಣ ಕೆಡುಕಿಗೆ 
ಯೋಜಿತ ಇರುವೆ ಸಾಲು 
ದಿಕ್ಕಾ ಪಾಲಾಗುವ ಹಾಗೆ 
ಮನದ ತಲ್ಲಣದ ಕಾರಣ 
ಉದುಗಿದ್ದ ಭಾವನೆಗಳೆಲ್ಲ 
ಚೆಲ್ಲಾಪಿಲ್ಲಿ ಆಗುವುದಲ್ಲದೆ 
ಒಡೆದ ಮನದ ಅವಶೇಷಗಳಡಿ 
ಸಿಲಿಕಿದ್ದಾವೆ, ಅಸಹಾಕ ಸ್ಥಿತಿಯಲ್ಲಿ

ಇಷ್ಟಕ್ಕೂ ನನ್ನ ಚಂಚಲತೆಯೇ ಹೊಣೆ
ಯಾವುದನ್ನೂ ಅಷ್ಟು ಗಾಢವಾಗಿ 
ಗಣನೆಗೆ ಸ್ವೀಕರಿಸ ಬಾರದಿತ್ತು 
ಹೌದು, ನಾನೇ ಎಲ್ಲಾಕ್ಕೂ ಹೊಣೆ!!
ಅಂದು ಮಿಡಿಯದ ಮನಸಿಗೆ 
ಬೇಕೆಂದೇ ತುರುಕಿದ ಬಯಕೆಗಳು 
ಇಂದು ಅಟ್ಟಹಾಸ ಮೆರೆಯುತ್ತಿವೆ 
ನನ್ನ ಮಾತುಗಳನ್ನೂ ಧಿಕ್ಕರಿಸಿ 

ನಾ ಕ್ಷಮೆಗೆ ಅನರ್ಹ ಅಪರಾಧಿ!!

                         -- ರತ್ನಸುತ

1 comment:

  1. "ಅಸಲಿಗೆ ಚೂರುಗಳ ಆಯ್ವುದಾದರು ಹೇಗೆ ?
    ಒಡೆದಿರುವುದು ನನ್ನ ಮನಸು
    ಅದರೊಳಗಿನ ಭಾವನೆಗಳು!!" ultimate ಗೆಳೆಯ ನಮ್ಮ ಮನಸ್ಸುಗಳ ನೋವುಗಳನ್ನು ನೀವು ಬರೆದುಕೊಟ್ಟಿದ್ದೀರಿ.

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...