Tuesday, 28 January 2014

ಪಾಪಾತ್ಮ !!

ಶಾಂತಿ ಕಾಯ್ದುಕೊಂಡ ಆತ್ಮದೊಳಗೆ 
ನಿಲ್ಲದ ಸಮರ 
ತನ್ನ ವಿರುದ್ಧ ತಾನೇ 
ದಂಡೆತ್ತಿ ಕೊಲ್ಲುವುದ ತಡೆಯದ ತಾನು 
ಒಂದೆಡೆ ಇನ್ನೂ ಕಣ್ಣು ಬಿಡದ ಶಿಶು 
ಮತ್ತೊಂದೆಡೆ ಕಪಟ ತುಂಬಿದ ಅತಿಶಯ ಶಕ್ತಿ

ಗೆದ್ದರೂ ಸೋತಂತೆ 
ಸೋತರೂ ಗೆದ್ದಂತೆ 
ಮಾನದಂಡಗಳ ಗಾಳಿಗೆ ತೂರಿದರೂ 
ತನ್ನ ಮೇಲೆ ತಾನೇ ದೂರುವ ಅಸಹಾಯಕತೆ 

ಹೊರಗೆ ಪ್ರಶಾಂತ ಕೊಳದಲ್ಲಿ 
ವಿಹರಿಸಿದ ಹಂಸ 
ಒಳಗೊಳಗೆ ಯಾರೋ
ಅದರ ಕಾಲೆಳೆಯುತ್ತಿರುವ ಕಿರಾತಕರು;
ಆದರೂ ಮಾಸದ ನಗೆಯ ಹೊತ್ತು 
ಎಬ್ಬಿಸಿ ಸಾಗಿತ್ತು 
ಏನೂ ಸೂಚಿಸದ 
ಸಣ್ಣ ಪ್ರಮಾಣದ ರಿಂಗಣಗಳ

ಆತ್ಮ ವಂಚನೆ,
ಆತ್ಮ ಸಂತೃಪ್ತಿ,
ಆತ್ಮಾವಲೋಕನ,
ಆತ್ಮಾನುಸಂಧಾನ
ನಿಜದಿ ಆತ್ಮವೆಲ್ಲಿ?
ತನ್ನ ತಾನೇ ಬಂಧಿಸಿಕೊಂಡಿದೆ 
ಕಣ್ಣು, ಕಿವಿ, ಬಾಯಿ 
ಎಲ್ಲವನ್ನೂ ಮುಚ್ಚಿಕೊಂಡು 
ಥೇಟು ಮುಕ್ಕೋತಿಗಳಂತೆ !!

ಸಿಡಿ ಗುಂಡಿನ ಸದ್ದ 
ಒಳಗೇ ಅದಿಮಿಟ್ಟು 
ಕ್ಷಿಪಣಿಗಳ ಒಂದೊಂದೇ 
ಸಾಲಾಗಿ ಗುರಿಯಿಟ್ಟು 
ಸತ್ತ ಆತ್ಮಕೆ ಮುಕುತಿ 
ದೇಹ ತೊರೆದಾಗಲೇ 

ಅಲ್ಲಿ ವರೆಗೆ ರಂಗ 
ರಣ ಕಹಳೆ ಹೊರತಾಗಿ 
ಮೌನವನು ಸವಿವುದು 
ಬಯಲ ದೀಪ ತಾನು 
ಬೆಳಕ ಹೊರ ಸೂಸಿ 
ಕತ್ತಲ ಗೆದ್ದಂತೆ !!

            -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...