Thursday, 16 January 2014

ದೊರೆಸಾನಿ ಹೊಲದಲ್ಲಿ !!

ತೊನೆದಾಡಿದ ತೆನೆಯ
ಹೊಲ ನನ್ನ ಮನಸು 
ನೀ ಚೆಲ್ಲಿ ಹೋದಾಗ 
ಒಲವೆಂಬ ರಾಗಿ 
ನೀ ಹಿಡಿದು ಬೀಸುವ 
ಕುಡುಗೋಲ ಹಲ್ಲಿಗೆ  
ಕಣವಾಗುವೆ ತೂರು 
ಬರುವೆ ತಲೆ ಬಾಗಿ 
 
ಅಳಿದರೆ ಅಳಿಸುವೆ 
ಗೋಪುರದ ರಾಶಿಯ 
ಬಳ್ಳದಲ್ಲೂ ಕೊನೆಗೆ 
ಉಳಿಸು ಚೂರು
ಸೆರಗನ್ನು ಚಾಚಿ 
ಮಡಿಲೆನ್ನ ತುಂಬಿಸಿಕೊ 
ಒಂಟಿ ಆಸೆ ಒಳಗೆ 
ಸಾವಿರಾರು 
 
ಕಣಜಕ್ಕೆ ದೂಡಿ 
ಏನನ್ನು ಪಡೆವೆ 
ಮತ್ತೆ ಚೆಲ್ಲಾಡು 
ಎಲ್ಲವ ಎನ್ನ ಮನದಿ 
ಹೊಸ ಆಸೆಗಳು
ಇನ್ನೂ ಚಿಗುರಲಿ 
ಹಳತವುಗಳ
ತುಂಬು ಬಣದಿ 

ಕಳೆ ಕಿತ್ತು ಸುಟ್ಟು  
ಗೊಬ್ಬರವನಿತ್ತು 
ಎಳೆ ಪಯಿರ ಚಿಗುರಲ್ಲಿ 
ಸಂಭ್ರಮಿಸುವೆ 
ನೆತ್ತಿ ಏರಲು ಸೂರ್ಯ 
ಹೊತ್ತು ತಾ ಬುತ್ತಿಯ 
ನಿನ್ನ ಕೈ ರುಚಿ ಹೀರಿ 
ಮನಸೋಲುವೆ 

ಮುತ್ತಿನ ಮಳೆ ಸುರಿ
ಹೊತ್ತ್ಹೊತ್ತಿಗೆ
ಕಾವಲಿಡು ಎಂಟು 
ದಿಕ್ಕಿಗೂ 
ದೊರೆಸಾನಿ ನೀ 
ಎನ್ನ ಕೈಪಿಡಿ 
-ಕೈಚೆಲ್ಲು  
ನಿನ್ನದೇ ಹಕ್ಕದು 

          -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...