Friday, 31 January 2014

ಆಟ

ಆಟ ಮುಗಿಸುವ ಹುರುಪು 
ಕಾಯಿ ಜರುಗಿಸಲು ಹಿಂಜರಿಕೆ 
ಮೇಲಿಂದ ಮೇಲೆ 
ಎದುರಾಳಿಯಿಂದ ಒತ್ತಡ 
ಜರುಗಿಸಲೇ ಬೇಕಾದ 
ಅಸಹಾಯಕತೆ 

ಗೆಲ್ಲುವ ಆಶಯ,
ತೋರಿಕೊಳ್ಳುವಂತಿಲ್ಲ 
ನಿಲ್ಲುವ ಮನಸು,
ತಡೆಯುವಂತಿಲ್ಲ 
ಗೆದ್ದ ಕಾಯಿಗಳು ಕೆಲವು 
ಸೋತು ಉರುಳಿದವು ಹಲವು

ನೇರ ಸಾಗುತ್ತಲೇ 
ಎಡ, ಬಲ ಪಂಕ್ತಿಗಳ ಕಂಡು 
ವಿಚಲಿತಗೊಂಡು 
ಸತ್ತವುಗಳ ಲೆಕ್ಕ-
ಹಾಕುತ್ತಾ, ಹಾಕುತ್ತಾ 
ಮುಗಿಯುತ್ತಲೇ ಇಲ್ಲ

ನನಗಿದು ಜೀವನ 
ಇನ್ಯಾರಿಗೋ ಕದನ 
ನನ್ನ ಮುನ್ನಡೆ 
ಮತ್ತಾರಿಗೋ ಹಿಂಸೆ 
ನನ್ನ ತಡಬಡಿಕೆ 
ಅವರಾರಿಗೋ ಪ್ರಶಂಸೆ 

ಕರತಾಡನ ಕೇಳಿದೊಡನೆ 
ಒಮ್ಮೆಲೆ ಎಚ್ಚೆತ್ತು 
ಕಣ್ಣ ದಿಟ್ಟಿಸಿದಂತೆ 
ಎಲ್ಲವೂ ಮಂಜು ಮಂಜು 
ಯಾರೋ ನಡೆಸಿರುವರು ಮೋಸ.
ತೀರ್ಪುಗಾರರ ಪ್ರಕಾರ 
ಎಲ್ಲವೂ ಪಾರದರ್ಶಕ?

ನೋಡು ನೋಡುತ್ತಿದ್ದಂತೆ 
ಮೇಲುಗೈ ಸಾಧಿಸಿದ ಎದುರಾಳಿ 
ನಾನು ಖಿನ್ನ
ಕಳೆದುಕೊಂಡು ಬೆಂಬಲಿಗರನ್ನ 
ಒಬ್ಬಂಟಿ ನಾನು 
ಎದುರಾಳಿಯೂ ಒಬ್"ಬಂಟ"

ರಾಜನಾರೋ? ರಾಣಿಯಾರೋ?
ಆನೆ, ಕುದುರೆಗಲಂತೂ 
ಬಡಕಲಾಗಿ ಬಿದ್ದಿವೆ 
ಎದುರಾಳಿಯ ಮುಷ್ಟಿಯಲ್ಲಿ
ಸೈನ್ಯ ಕುಸಿಯುತ್ತಿದೆ 
ಈಗ ಉಳಿಸಿಕೊಳ್ಳಬೇಕಾದ್ದು ನನ್ನನ್ನ
ನಾನಾರು?

ಇನ್ನೂ ಅಖಾಡಕ್ಕಿಳಿಯದೆ 
ಶಸ್ತ್ರಾಸ್ತ್ರಕೆ ಪಳಗುತಿರುವೆ
ಸಮರವ ಮಾರು ದೂರ 
ನಿಂತು ನೋಡುತಿರುವೆ 
ಅನ್ಯರ ಸೋಲಲ್ಲಿ ಸೋತು 
ಗೆಲುವಲ್ಲಿ ಗೆದ್ದು 

ಆಟ ಇನ್ನೂ ಮುಗಿದಿಲ್ಲ 
ಮೊದಲಾಗಬೇಕಷ್ಟೆ 
ಅಭ್ಯಾಸಕ್ಕೆ ಹರಿಸಿದ ಬೆವರ
ಆಟಕ್ಕೂ ಉಳಿಸಬೇಕು 
ಹುಸಿಯಾದರೂ ಸರಿಯೇ 
ಆಡಿದಂತಸಿಸಬೇಕು 
ನನಗೂ, ನನ್ನವರಿಗೂ ..... 

               -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...