Thursday, 23 January 2014

ನಾನು ಮತ್ತು ಎಂ.ಆರ್.ಐ

ಡವ್, ಡವ್, ಡವ್, ಡವ್
ವಟರ್, ವಟರ್, ವಟರ್, ವಟರ್
ರಂಗ, ರಂಗ, ರಂಗ, ರಂಗ 
ಬೀಪ್, ಬೀಪ್, ಬೀಪ್, ಬೀಪ್ 

ಹಾಗೆ ತೂಕಡಿಸುವಷ್ಟರಲ್ಲಿ 
ಡವ್, ಡವ್........ ಬೀಪ್, ಬೀಪ್

ಕಣ್ಣ ನೇರಕ್ಕೆ ಎಳೆದ ಗೆರೆ
ತುಂಡಾಗಿ ಎರಡು
ಎರಡು, ನಾಲ್ಕು ಹಾಗೇ-
ಲೆಕ್ಕ ತಪ್ಪುತ್ತಿತ್ತು....ಮತ್ತೆ ತೂಕಡಿಕೆ !!

ಅಲುಗಾಡುವಂತಿಲ್ಲವಾದರೂ
ಎರಡು, ಮೂರು ಬಾರಿ 
ಬೆರಳುಗಳ ಅಲುಗಾಡಿಸಿಯೇ ಬಿಟ್ಟೆ
ಮೌನದ ನಂತರದ ಸದ್ದಿಗೆ ಬೆಚ್ಚಿ 

ವಂಡರ್ ಲಾ ದ ಒಂದು ಆಟ 
ಥೇಟು ಹೀಗೆಯೇ 
ಯಾವಾಗ ಏನು ಆಗುವುದೋ ಎಂಬ
ಭಯ, ಕುತೂಹಲ
ಸಹಜತೆಯಿಂದ ಅಸಹಜತೆಯೆಡೆಗೆ !!

ಹೊದ್ದಿಸಿದ್ದ ಕಂಬಳಿಯೂ ಚುಚ್ಚುತ್ತಿತ್ತು 
ಆದರೆ ಕೆರೆದುಕೊಳ್ಳುವಂತಿಲ್ಲ 
ಅಪ್ಪಣೆ ಮಾಡಿ ಹೊರಟಳು ಅಕ್ಕ 
ಇಟ್ಟು ಸ್ಪಾಂಜುಗಳ ಎರಡೂ ಕಿವಿಗಳ ಪಕ್ಕ 

ಹಿಂದೆ, ಮುಂದೆ ಮತ್ತೆ ಹಿಂದೆ 
ಅದೆಷ್ಟೋ ಬಾರಿ ಸಾಗಿ ಬಂದದ್ದು 
ಆ ಸಣ್ಣ ಕಿಂಡಿಯೊಳಗೆ 
ಮಲಗಿದ್ದ ಗೊಂಮ್ಮಟನಂತೆ ನಾನಲ್ಲಿ 

ಬರೋಬ್ಬರಿ ಇಪ್ಪತ್ತು ನಿಮಿಷ 
ಮಲಗಲಾರದೆ ಮಲಗಿ
ಇದ್ದ ಅಷ್ಟೂ ತಾಳ್ಮೆಯ ಧಾರೆಯೆರೆದೆ 
ಆ ಮಷೀನಿನ ಪಾಲಿಗೆ 

ಬಂಧಿಸಿ ಹೋದವಳು ಅಕ್ಕ 
ಬಿಡುಗಡೆ ನೀಡಿದ್ದು ಅಣ್ಣ 
ಅಕ್ಕಳ ಶಿಫ್ಟು ಮುಗಿದಿರ ಬೇಕು?!!
ಅದರಿಂದ ನನಗೇನಾಗಬೇಕು?!!

ಮಂಪರುಗಣ್ಣ ಉಜ್ಜಿಕೊಂಡೇ 
ಹೊರ ನಡೆದೆ
ಧರಿಸಿದ್ದ ವಿಚಿತ್ರ ವಸ್ತ್ರಗಳ ಬದಲಾಯಿಸಿ 
ಮತ್ತೆ ನಾನು ನಾನನಿಸುವಂತೆ ಕಾಣಲು 

ಅಲ್ಲಿಗೆ ಎಂ.ಆರ್.ಐ ರಿಪೊರ್ಟು 
ಕೈ ಸೇರಿತ್ತು
ಬೆನ್ನ ಮೂಳೆಗಳ ಬಿಡಿ ಬಿಡಿ ಚಿತ್ರಣ 
ಸಣ್ಣ ಚೌಕಟ್ಟುಗಳೊಳಗೆ ಸೆರೆಯಾಗಿತ್ತು 

ಡಾಕ್ಟರ್ಗೆ ಕಾಣಿಸಿ 
ತಲೆಕೆಡಿಸಿಕೊಂಡರಾಯಿತೆಂದು 
ತಲೆ ಕೆಡಿಸಿಕೊಂಡೇ 
ಮನೆಯತ್ತ ಸಾಗಿದೆ ...

                              -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...