Tuesday, 7 January 2014

ವ್ಯರ್ಥ ಪ್ರವರ !!

ನೀ ತರಿಸುವ ಕೋಪಕ್ಕೆ 
ಇಡಿ ಒಡಲಿಗೆ ಉರಿ 
ಮುಷ್ಠಿ ಬಿಗಿದಾಗ ಎದ್ದು-
ಕಾಣುವ ನರಗಳಲ್ಲಿ 
ಗುದ್ದಿ ಹರಿಯುವ ರಕುತ 
ನೆತ್ತಿ ಏರಿ ಜುಟ್ಟಿನಾಚೆ 
ಚಿಮ್ಮುಷ್ಟು ರಭಸ 
ಕೆಂಗಣ್ಣು ಕುಲುಮೆ
 
ಎದೆಯಲ್ಲಿ ಭೂಕಂಪ 
ಹೊಟ್ಟೆ, ಜ್ವಾಲಾಮುಖಿ 
ಕೊರಳು, ಚಂಡ-
ಮಾರುತಕೆ ತುತ್ತಾಗಿ 
ಅಡಿಗೆ ಸಿಲುಕಿದ ನೀರ-
-ಸ ಮಾತುಗಳ ಸಾಲು. 
ಉಸಿರಲ್ಲಿ ಬುಸುಗುಟ್ಟು 
ನಾಡಿ, ಮೃದಂಗ 

ಕಚ್ಚಿಕೊಂಡ ಹಲ್ಲು 
ಮಡಿಸಿಕೊಂಡ ನಾ-
-ಲಿಗೆಯ ಹಿಂದೆ 
ಅವಿತು ಉಳಿದ
ಘೋರ ಚೀರು 
ಅದರಿದ ದವಡೆ
ಚದುರಿದ ಮುಖ ಭಾವ-
-ನೆಗಳೆಲ್ಲ ಸ್ತಬ್ಧ 

ಬುದ್ಧಿಯೆಂಬುದು ರದ್ದಿ 
ಹಠದ ಜಿದ್ದಾಜಿದ್ದಿ 
ಮುದ್ದೆಗಟ್ಟಿದ ಮನಸು 
ನೆದ್ದೆಗೆಟ್ಟ ರಕ್ಕಸ-
-ನ ಅಟ್ಟಹಾಸ 
ಕಣ-ಕಣಗಳಲ್ಲೂ. 
ಹಿಂದೆಯೇ ಎರಗಿದ 
ಅಗ್ನಿ ಮುಗಿಲು 

ಇಷ್ಟಕ್ಕೆ ಪ್ರತಿಯಾಗಿ 
ನಿನ್ನದೋ ತಿಳಿ ನಗೆ 
ಹಿಂದೆಯೇ ಹಿಂಜರಿಯದ 
ಕಂಬನಿ
ಬಿಕ್ಕಳಿಸಿದ ಉಸಿರು 
ಕಮರಿದ ಅಧರ 
ಕರಗಿದ ಕಣ್ಗಪ್ಪು 
ಮುನಿದ ಮೂಗು 

ಅಷ್ಟಕ್ಕೆ ನಾನು,
ಲಾವಾ ಪ್ರವಾಹಕೆ 
ಅಣೆಕಟ್ಟು ಕಟ್ಟಿ 
ಶಾಂತನಾಗಿ 
ಜಡಿಗೆ ಮೈಯ್ಯೊಡ್ಡಿ 
ತೇವಗೊಂಡ ಶಿಖರ 
ನಿನ್ನೆಡೆಗೆ ಮತ್ತೆ 
ಉನ್ಮತ್ತ ಮಾರ 

        -- ರತ್ನಸುತ 

1 comment:

  1. 5ನೇ ಪ್ಯಾರಾದ ರಾಮ ಬಾಣ, ಅಲ್ಲಲ್ಲ ಸ್ತ್ರೀ ಕುರಿತಾದ ಕವನವಾಗಿರುವಾಗ ಅದು ಸೀತಾ ಬಾಣ, ಪ್ರತಿ ಮನೆಯ ನಿಜವಾದ ಅಂತರಂಗ. ಮದುವೆಗೆ ಮುಂಚಿತವಾಗಿಯೇ ಬದುಕನ್ನು ಓದಲು ಶುರುಮಾಡಿದ್ದೀರಾ. ಮುಂಡಿ ಮದುವೆಯಾದ ಮೇಲೆ best husband ಪ್ರಶಸ್ತಿಗೆ ಭಾಜನರಾಗುತ್ತೀರಾ. :-D

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...