Monday, 20 January 2014

ಹೃದಯ ಬಯಸಿದ ಹೃದಯ

ಹುಡುಕಾಟ ಇನ್ನೂ ಜಾರಿಯಲ್ಲಿದೆ 
ಎತ್ತಲೋ ಹೊರಟ ಹೃದಯದ ಕುರಿತು 
ಸುಳುವು, ಸೂಚನೆ ಏನೂ ನೀಡದ 
ಗೊಡ್ಡು ನಂಬಿಕೆಯ ಹೊತ್ತು 

ಸೋತ ಅಷ್ಟೂ ಬಾರಿ 
ಬೆನ್ನ ತಟ್ಟಿಕೊಂಡ ಕೈಗಳ 
ಕಡಿದು ಹಾಕಿದ್ದು ಅದೆಷ್ಟೋ ಬಾರಿ 
ಆದರೂ ಬೆನ್ನಿಗೆ ತೀರದ ವ್ಯಾಮೋಹ 

ಬತ್ತಿ ಹೋದ ಕಣ್ಣುಗಳಲ್ಲಿ 
ಹೊಳಪಿನ ಗಾಳಿ ಗಂಧವೂ ಇಲ್ಲ 
ಚಿತ್ತು ಹೊಡೆದ ಹಾಳೆಗಳೆಷ್ಟೋ 
ಅದರಡಿಯ ತಪ್ಪು ಸಾಲುಗಳೆಷ್ಟೋ 

ಸೋತ ದಾರಿಗಳಿಗೆ
ಗುರುತಿಡುತ್ತಾ ಹೋದಂತೆ 
ಗುರುತುಗಳೇ ಉಳಿದು ಬಿಡಬಹುದು 
ಬಾಳ ದಾರಿಯ ತುಂಬ

ಹೃದಯ ಹುಡುಕಾಟದ ನಡುವೆ 
ಸಿಕ್ಕ ಸಿಕ್ತ ಶಿಲೆಗಳ ಸವರಿ 
ಅಳಿಸಿ ಹೋದ ರೇಖೆಗಳು 
ಈಗ ಬೇರೆಯದ್ದೇ ಭವಿಷ್ಯ ನುಡಿಯುತ್ತಿವೆ 

ಎಲ್ಲ ಋತುಗಳ ಹಾದು 
ಮತ್ತೆ ಹೇಮಂತನ ಸಹವಾಸದಲ್ಲಿ 
ಗ್ರೀಷ್ಮದಲಿ ಬೆವೆತು, ವರುಣನಲಿ ತೊಯ್ದು   
ವಸಂತನ ಮೀರಿ, ಒಡ್ಡಿದ ಶರತ್ತನು 
ದಾಟಿ ಬಂದ ಬೇಸರ 

ಇನ್ನೂ ಸಿಗುತ್ತಿಲ್ಲ ಹೃದಯ 
ಅಸಲಿಗೆ ಹುಡುಕಾಟವೇ ಬೆಳೆಸಿಲ್ಲ, 
ಇನ್ನು ಸಿಗುವ ಮಾತೆಲ್ಲಿ?
ಮರಳಿ ಯತ್ನದ ಮೊದಲು ಮತ್ತೊಂದು ಸರತಿ 

ನನ್ನೊಳಗಿನ ಹೃದಯ 
ಬಡಿದುಕೊಳ್ಳುತ್ತಲೇ ಇದೆ ಎಡಬಿಡದೆ 
ಆದರೂ, ಇದ್ದುದ ಬಿಟ್ಟು ಇರದುದರೆಡೆಗೇ ತುಡಿತ
ಇದ್ದ ಹೃದಯದ ಒತ್ತಾಸೆಯ ಸಹಿತ... 

                                         -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...