Thursday, 2 January 2014

ಅಮಾವಾಸ್ಯೆ ಮೂರ್ದಾರಿ !!

ನೆನ್ನೆ ಅಮಾವಾಸ್ಯೆ 
ಹಿತ್ತಲ ನಿಂಬೆ ಗಿಡ ಬೋಳು 
ಕೊಟ್ಟಿಗೆ ಕೋಳಿ, ಮೊಟ್ಟೆ ಸೀಳು 
ಕುಂಕುಮ, ಹರಿಶಿಣ
ಎಲೆ, ಅಡಿಕೆ, ಕರ್ಪೂರ 
ಏನು ಬೇಕೋ ಸಿಗುವುದು 
ಬೆರಳು ಗುರಿ ಮಾಡಿದೊಡೆ  
ಮೂರ್ದಾರಿಯೆಡೆಗೆ 
 
ದಾಟಿದರೆ, ಮೆಟ್ಟಿದರೆ 
ಜನ್ಮಕ್ಕಾಗುವಷ್ಟು ದರಿದ್ರ 
ನೋಡಿಯೂ ಕಡೆಗಣಿಸಿದರೆ 
ಮೂರು ಬಾರಿ ಉಗುಳದಿರೆ 
ಅನಿಷ್ಟ ಬೆನ್ನು ಹತ್ತಿ 
ಮನೆವರೆಗೂ ಹಿಂಬಾಲಿಸಿ
ಕೇಡು ಖಚಿತ, 
ಪೀಡೆ ಉಚಿತ. 

ಅಲ್ಲದ ದಾರಿಯೂ ದಾರಿ 
ಮೂರ್ದಾರಿಯ ಲೆಕ್ಕಕ್ಕೆ 
ಕೆರೆ ಕಟ್ಟೆ, ತಿಪ್ಪೆ ಜಾಡು 
ಮನೆ ಸಂದಿ, ತೊರೆ ಕಾಡು 
ಆಡು ಮುಟ್ಟದ ಎಡೆಯಲ್ಲಿ 
ಅನ್ನದ ಹಿಡಿ ತುತ್ತುಗಳು 
ಬಗೆ-ಬಗೆಯ ಬಣ್ಣ
ಕಪ್ಪು, ಬಿಳಿ, ಹಳದಿ, ಕೆಂಪು.... ಇತ್ಯಾದಿ 

ಊಳಿಕ್ಕುವ ನಾಯಿಗಳು 
ಇನ್ನಷು ಭೀಕರ ಸ್ಮಶಾಣಗಳು
ಗೋರಿಯೊಳ ಆತ್ಮಗಳೂ 
ಹುಣಸೆ ಮರ ಏರುತ್ತಾವಂತೆ!!
ದೆವ್ವ ಮೈಯ್ಯೇರಿ ಕುಣಿವವರು
ಬೇವಿನ ಹೊಡೆತಕೆ ಮಣಿವವರು 
ಯಂತ್ರ, ತಂತ್ರ, ತಾಯಿತಿ
ಶಕ್ತಿ ಪಡೆಯುತ್ತಾವಂತೆ!! 

ಮನೆ ಹೊರಾಂಗಣದ
ಕಗ್ಗತ್ತಲ ಅಂಗಳದಿ 
ಬಿಡಿಸಿದ ರಂಗೋಲಿ 
ಮುಂಜಾನೆ ಹೊತ್ತಿಗೆ
ಕರಗಿರಲುಬಹುದು 
೨೦೧೪ರ ಶುಭಾಷಯ ಲಿಖಿತ 
ಅಳಿಸಿ ಹೋಗಿರಬಹುದು 
//ರಾತ್ರಿಯ ಭ್ರಮೆ//

ಇಂದು ಬೆಳಿಗ್ಗೆ ತಿಂಡಿಗೆ 
ನೆನ್ನೆ ಮಿಕ್ಕ ಅನ್ನಕ್ಕೆ 
ಹಿಂಡಿದ ನಿಂಬೆ ಹುಳಿ ಗೊಜ್ಜು 
ನಿಂಬೆ!! ಎಲ್ಲಿಯ ನಿಂಬೆ?!!
ಎಲ್ಲವೂ ಮೂರ್ದಾರಿ ಪಾಲಾಗಿರೆ!!
ಅಮ್ಮ ಭಾರಿ ಚತುರೆ
ಮೊನ್ನೆಯೇ ಕೊಂಡಿದ್ದಳು ನಾಲ್ಕು 
ಎರಡು ದೃಷ್ಟಿಗೆ, ಇನ್ನೆರಡು ಪುಷ್ಟಿಗೆ.... 

                              --ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...