Friday, 31 January 2014

ತೀರದಲ್ಲೇ ಉಳಿದು !!

ನಾನಿನ್ನೂ ಕಣ್ಣ್ಬಿಡದೆ 
ಇಡಿ ಲೋಕವನ್ನೇ ನೋಡಿದೆನೆಂಬ 
ಹಮ್ಮು ನನ್ನೊಳಗೆ . 
ತಿದ್ದುವ ತಾಳ್ಮೆಯಿಲ್ಲ 
ತೀಡುವ ಶಕ್ತಿಯಿಲ್ಲ 
ಈ ನನ್ನೊಳಗಿನ "ನಾನು"
ಯಾರ ಮಾತನ್ನೂ ಕೇಳದವನು 
ಅಚ್ಚು ನನ್ನಂತೆಯೇ!!

ತುಕ್ಕು ಹಿಡಿದ ಖಡ್ಗ ಹಿಡಿದು 
ಆಗಷ್ಟೇ ಕುಲುಮೆಯಿಂದ 
ಮಿಂದೆದ್ದು ಬಂದವುಗಳ-
ಮುಂದೆ ಸಮರಕ್ಕೆ ನಿಂತೆ 
ಮೆಲ್ಲಗೆ ಹಣೆಯಿಂದಿಳಿದ 
ಬೆವರು ಕಿವಿಗೆ ಪಿಸುಗುಟ್ಟಿತು 
"ಮತಿಗೇಡಿತನಕೆ ಬಳುವಳಿ 
ಎದುರು ಕಾದಿದೆ" ಎಂದು 

ಬೆಂಬಲಿಸುವೆವೆಂದು ಸವರಿ-
ಬಿಟ್ಟ ತಲೆಗಳುರುಳುತಿವೆ
ಹಿಂದಿರುಗಿ ನೋಡಿದರೆ 
ಸಹಸ್ತ್ರ ಜನರ ನೆರಳು 
ಸೂರ್ಯ ಎದುರು ನಿಂತು 
ನನ್ನೆದೆಗೆ ರಂಪ ಬೀಸಿದ್ದಾನೆ 
ಮುಂದಿನವರ ಹಿಂದಿನೆರಳು 
ನಾನೂ ಒಬ್ಬ ಅವರೊಳು

ಕಣ್ಣ ಹನಿಗಳ ಉಗಮ
ನರಕವೆಂಬುದು ಸುಗಮ 
"ನನ್ನ" ನಂಬಿ ಬಂದ ನನಗೆ,
ನನ್ನವುಗಳ ಪಾಲಿಗೆ
ಹೊತ್ತು ಮೀರಿ ಹೊತ್ತಿಸಿ
ಕತ್ತಲಲ್ಲಿ ನಂದಿಸಿ
ಇದ್ದೂ ಸಹಕರಿಸಲಿಲ್ಲ 
ದುಷ್ಟ ಬುದ್ಧಿ ದೀವಿಗೆ 

ಅಲೆಯ ಜೊತೆಗೆ ಸರಸ 
ಪುಟ್ಟ ತೆಪ್ಪ ಎದುರು ತೇಲಿ 
ಹುಟ್ಟು ಮರೆತೆನೆಂಬ ನೆಪ 
ಇದ್ದಿದ್ದರೂ ಇರದ ಲಾಭ 
ತೀರಕೆ ಪರಿಚಿತ ಅಲೆಗಳು 
ಪದೆ ಪದೆ ನನ್ನ ನೂಕಿ 
ರಂಜಿಸುತ್ತಿವೆ ಅದನು 
ನನ್ನ ಕುರಿತು ಹಾಸ್ಯಗೈದು !!

                -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...