ಪ್ರಣವ ಪ್ರಾಣವ ಕಾಯೋ
ಆತ್ಮ ಪ್ರಣತಿ ನೀನು
ಪ್ರಾರ್ಥಿಸಲು ಪವಡಿಸುವೆ ಭಕುತರಲ್ಲಿ
ನಿನ್ನ ಪಾದದ ಧೂಳ
ಲೆಕ್ಕಿಸದೆ ಹೋದರೆ
ನಂಬಿದವರಿಗೆ ಸೋಲು ಖಚಿತ ಇಲ್ಲಿ
ಹಸಿವು ಒಬ್ಬರ ಆಸ್ತಿ
ಅನ್ನ ಮತ್ತೊಬ್ಬರದು
ಇಬ್ಬರ ಜೂಟಾಟ ಮುಗಿಸು ಬೇಗ
ಢಮರುಗದ ಗದ್ದಲವ
ಕಣ್ಣೀರು ಮೀರಿಸಿದೆ
ನಿನ್ನ ಕರಗಳ ಒಡ್ಡಿ ಕ್ರಮಿಸು ಈಗ
ವಾಯುಭಾರದ ಕುಸಿತ
ಎದೆಯಲ್ಲಿ ಅನವರತ
ಸಾವಲ್ಲೂ ಮೂಡದ ಮಂದಹಾಸ
ನಿನ್ನ ಸ್ಮರಣೆಗಳೆಲ್ಲ
ವ್ಯರ್ಥವೆಂದು ಅನಿಸಿ
ನಾಲಿಗೆ ಮರೆತಿದೆ ಸುಪ್ರಭಾತ
ನೀರು ಅಮೃತವಲ್ಲ
ಮಣ್ಣು ಚಿಗುರಿಸುತಿಲ್ಲ
ಪಂಚಭೂತಗಳಲ್ಲಿ ಶಕ್ತಿಯಿಲ್ಲ
ಕಲ್ಪವೃಕ್ಷವೂ ತಾನು
ಮೋಸ ಮಾಡುವ ವೇಳೆ
"ದೇವರೇ" ಅನ್ನುವವರಾರೂ ಇಲ್ಲ
ತಿಲಕವಿಟ್ಟರೆ ತುರಿಕೆ
ಮಂತ್ರ ಪಟಿಸುವ ಮನಕೆ
ಮುಕ್ತಿ ಮಾರ್ಗವು ಇನ್ನು ದೊರೆವುದೆಲ್ಲಿ
ಎದ್ದ ಪ್ರಶ್ನೆಗಳೆಲ್ಲ
ತೆರೆದುಕೊಂಡಿವೆ ಮುಂದೆ
ಉತ್ತರಕೆ ಕಾಯಿಸುವೆ ಮೌನ ತಾಳಿ
-- ರತ್ನಸುತ
No comments:
Post a Comment