Thursday, 16 January 2014

ಶಿವ ನಿನ್ನ ಸ್ಮರಣೆಯಲಿ

ಕೈಲಾಸದಲಿ ಕಾಲು 
ಮುರಿದು ಬಿದ್ದವ ನಿನ್ನ 
ಕೈಲಾಗದವನೆಂದು 
ಶಪಿಸಲೇನು?
ಶತಮಾನಗಳ ಸೋಲು 
ಇನ್ನೆಷ್ಟು ಸಹನೀಯ 
ನಿನ್ನ ದಾರಿಯ
ಕಾಯಬೇಕೆ ಇನ್ನೂ?

ರುದ್ರನೆಂಬ ಹೆಸರ
ಭದ್ರಗೊಳಿಸಿ ಉಳಿದೆ 
ಛಿದ್ರಗೊಂಡಿಹ ಭಕುತ-
-ರಿಲ್ಲಿ ಕೋಟಿ 
ಬುಡು ಬುಡಿಕೆ ಮಂತ್ರಗಳು 
ಸಾವಿರ ನಾಮಗಳು 
ಕೈ ಮುಗಿದವರೇ ಎಲ್ಲ 
ಗುಡಿಯ ಕಟ್ಟಿ 

ನೀಲ ಕಂಠನು ನೀನು 
ನಂಜು ತುಂಬಿದ "ನಾನು" 
ನನ್ನೊಳಗೆ ಪರರೊಳಗೆ 
ಕಾಣದಾದೆ 
ಬಿಡಿಸೈಯ್ಯ ಜಡೆ ಮುಕುಟ 
ತಾಂಡವಿಸು ಅನವರತ 
ನಾಥರೊಳ ನಾಥನೇ 
ಅಮೂರ್ತ ತಂದೆ 

ಕಣ್ಣು ಕಿತ್ತರೆ ಅಳುವೆ 
ಬಾಣ ಬಿಟ್ಟರೆ ಮುನಿವೆ 
ಮಾನ ಪ್ರಾಣಕೆ ಲೆಕ್ಕ-
-ವಿಲ್ಲವೇನೋ 
ನೋಡು ರಕ್ಷೆಗೆ ಕಾದು 
ಒದ್ದಾಡಿವೆ ಜೀವ 
ನೀರಿಂದ ಬೇರಾದವೆಷ್ಟೋ 
ಮೀನು 

ಜಡ ಕಲ್ಲಿನೊಳ ಹೊಕ್ಕ 
ಭಕ್ತಿ ಭಾವದ ರೂಪಿ 
ಎನ್ನೆದೆಯ ಕದ ತಟ್ಟಿ 
ಸೆಳೆದೆಯಲ್ಲೋ?
ಮಲಗಿಹುದು ಲೋಕವಿದು 
ಅಂಧಕಾರವು ಕವಿದು 
ಎಚ್ಚರಿಸಲು ಭುವಿಗೆ 
ಇಳಿದು ಬಾರೋ 

ಧೂಪವಿದು ಹಣೆಯಲ್ಲಿ 
ದೀಪವಿದು ಎದುರಲ್ಲಿ 
ಏನು ಸೂಚನೆ ನೀಡಿ 
ನಗುತ ಕೂತೆ?
ಕೋಪ ವೇಷವ ತಾಳಿ 
ಮುಕ್ಕಣ್ಣ ರೋಷದಲಿ 
ತೆರೆದು ಎಲ್ಲವ 
ತಿದ್ದಿ ಬಿಡಬಾರದೇ?

ಎಲ್ಲೋ ಹಸಿವಿನ ಕೂಗು 
ಇನ್ನೆಲ್ಲೋ ಅನ್ನವನು 
ಇಟ್ಟು ಆಡಿಸುವೆ 
ಕಣ್ಣ ಮುಚ್ಚಾಲೆ 
ಕಣ್ಣೀರು ಉಚಿತವಿದೆ 
ಬೇಡದವರಿಗೆ ಇಲ್ಲಿ 
ಭವ ಬಂಧನವು ಕೊರಳ 
ಮುಳ್ಳ ಮಾಲೆ 

ಮಸಣದಲಿ ನೀನಿದ್ದು 
ವ್ಯಸನವನು ಹೊರಗಿಟ್ಟೆ 
ಆಟ ಮುಗಿಯುವ ವೇಳೆ 
ನಗುವ ತಾರೋ 
ವದನವಿದು ನೆಪಮಾತ್ರ 
ಉಸಿರದರ ಕರಪತ್ರ 
ಹರ ನೀನು ಹೊರೆ ನಾನು 
ಕಳೆಯ ಬೇರೋ 

ಶಿವ ನಿನ್ನ ಸ್ಮರಣೆಯಲಿ 
ಅಸುರ ಸಂಹಾರವಿದೆ 
ಶಾಂತನಾಗಲು ಇನ್ನು 
ಸಮಯವಲ್ಲ 
ಸೋತರಿಲ್ಲಿಗೆ ಇದಕೆ 
ಕೊನೆಯುಸಿರ ಕಾಣಿಸಲು 
ಬಾಳು ನಿಯಮಾವಳಿಯ 
ಸಮರವಲ್ಲ

ಜಟಿಲ ಗೋಜಲ ಬಿಡಿಸಿ 
ಶಿಥಿಲಗೊಳಿಸೋ ಶಂಭು 
ಸಂಭವಿಸು ಎಂದವರ 
ಮೊರೆಯ ಕೇಳಿ 
ಬಾರೈಯ್ಯ ಮಲ್ಲಿಕಾರ್ಜುನ-
ದೇವ ಧಾವಿಸಿ 
ಎಲ್ಲರೊಳಗೊಂದಾಗು 
ಮನಗಳಲ್ಲಿ

                -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...