Tuesday, 21 January 2014

ಶಿಲಾ ಬಾಲಿಕೆ ಸುತ್ತ !!

ಇತಿಹಾಸಗಳ ಕಣ್ಣೀರ
ಕಣ್ಣಾರೆ ಕಂಡು
ವೈಭವಗಳ
ಮನಸಾರೆ ಆಸ್ವಾದಿಸಿ
ಸ್ಮಾರಕಗಳಾಗಿ ಉಳಿದ
ಶಿಲಾ ಬಾಲಿಕೆಗಳು ಇಂದು
ಕ್ಯಾಮೆರಾ ಕಣ್ಣುಗಳಿಗೆ
ಕೋನ, ಕೋನ ಸೆರೆಯಾಗುತ್ತಿವೆ 

ಉಳಿ ಪೆಟ್ಟಿಗೆ ಪಟ್ಟ
ನೋವು ಪ್ರಸವದಂತೆ
ಉಬ್ಬು, ತಗ್ಗು
ಕೈಬಳೆ, ಕಾಲ್ಗೆಜ್ಜೆ
ಬಿಂಕ-ಬಿನ್ನಾಣ
ಅಂತರ್ಗತ ನುಣುಪು
ಬಾಹ್ಯ ದೃಢತೆ
ಎಲ್ಲವೂ ಸಹನೆಗೆ ಪೂರಕ
 
"ನವಿರ ಗಂಟು
ತುಟಿಯ ಅಂಚು 
ನಡುವ ಬಳಸು
ರವಿಕೆ ಬಿಗಿಸು 
ನಾಚುಗಣ್ಣು
ಬಿಚ್ಚು ಬಯಕೆ 
ಬೆರಳ ಹರಳು
ಮರೆಸಲಿಕ್ಕೆ"
 
"ಹಿಡಿಗನ್ನಡಿ ಮುಂಗೈ 
ನಗೆ ನಗ ಶೃಂಗದ ಮೈ 
ನಿಂತ ಭಂಗಿ ಲಾಸ್ಯ 
ಮಾದಕ ರಹಸ್ಯ 
ಷೋಡಶಿ ಶಿರೋಮಣಿ 
ಐಸಿರಿಯ ಮಧು ಗಣಿ 
ದೇವ ಕನ್ಯೆ ಸುಪುತ್ರಿ 
ಶೀಲೆ, ಶೋಭ ಮೈತ್ರಿ" 
 
ಹೀಗನಿಸದೆ ಕೇವಲ 
ಕಲ್ಲು ಕಲ್ಲಿನೊಳಗೆ 
ಕಲ್ಲನಷ್ಟೇ ಕಂಡ ಮನಸು 
ನಿರಾಕಾರ ಕಲ್ಲು 
ಸೌಂದರ್ಯಕೆ 
ಬಾಗದ ತಲೆ 
ನಿರುಪಯುಕ್ತ 
ಮುಗಿಲು 

ಕ್ಯಾಮೆರಾಕ್ಕೆ ಚೌಕಟ್ಟು,
ಕಾಣುವ ಕಣ್ಣಿಗಲ್ಲ 
ಅಂದದೊಳ ಆನಂದ,
ನೋಟದ ಕಣ್ಣಿನಗಲ 
ಕೆತ್ತಿದ ಕೈಗಳಿಗೆ 
ಮುತ್ತಿಡುವ ಭಾಗ್ಯವಿಲ್ಲ 
ಗುಟ್ಟಾಗಿ ಬಾಲಿಕೆಗೇ 
ಚುಂಬಿಸಿವ ಹಂಬಲ 
 
             -- ರತ್ನಸುತ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...