Friday, 3 January 2014

ಮನದ ತೊಟ್ಟಿಯಲಿ

ನವಜಾತ ಶಿಶುವೊಂದು 
ಅಳುತಿದೆ ತೊಟ್ಟಿಯಲಿ 
ತುಂಡು ಬಟ್ಟೆಗಲ್ಲ 
ಹಾಲ ತೊಟ್ಟಿಗಲ್ಲ 
ತೂಗು ತೊಟ್ಟಿಲಿಗಲ್ಲ 
ಸರಿ ಬಟ್ಟಲಿಗಲ್ಲ 
ಅನುಕಂಪದಲೆಗೆ
ಮೊದಲೇ ಅಲ್ಲ
 
ದಿಕ್ಕು ಸಿಕ್ಕಲ್ಲಿ 
ಮೈಯ್ಯೆಲ್ಲ ಹರಿದಾಡಿ 
ಕಚ್ಚಿದಿರುವೆಗಳ 
ಕ್ಷಯಿಸಲಾಗದೆ ಸೋತ
ಎಳೆ ಉಗುರಿನ ಬೆರಳು-
-ಗಳ ಬಾಯಿಗೆ ತುರುಕ- 
-ಲಾಗದೆ ಸೋತ 
ತನ್ನ ಅಸಹಾಯಕತೆಗೆ 
 
ಕಣ್ಣಂಚಿನ ತೇವಕೂ 
ಏನೋ ಅವಸರ 
ಒಂದೇ ಬಡಿತಕೆ 
ಜಾರಿಕೊಳ್ಳುವ ತವಕ 
ಉಳಿದು ಚೂರು 
ಜಾರಿ ಕೆನ್ನೆಯಾಚೆ 
ಹೊಕ್ಕು ಕೆಂದುಟಿಯ  
ಸಂತಾಪ ಸೂಚಿಸಬಾರದೆ?

ಒದ್ದಾಟದ ನಡುವೆ 
ಅಲ್ಲೇ ಮುರಿದು ಬಿದ್ದ 
ಪ್ಲಾಸ್ಟಿಕ್ಕಿನ ಗೊಂಬೆ 
ಹಸು ಕಂದನಿಗೆ ಒಲಿದು 
ಆಕಾಶಕೆ ತಾನು 
ಆದೇಶವ ಹೊರಡಿಸುವ 
ಅಸ್ತ್ರ ತಾನಾಗಿ 
ಮಳೆಗರೆಯಬಾರದೆ?

ದದ್ದುಗಳೆದ್ದ ಅಂಗೈಯ್ಯಿ 
ಸಾರಿ ಸಾರಿ ಸಾರಿದೆ 
ಇನ್ನೂ ಏನನ್ನೂ 
ಗಳಿಸಿಲ್ಲವೆಂಬ ತಾತ್ಪರ್ಯ 
ಇಷ್ಟಾಗಿಯೂ 
ಕಣ್ಣು ಅರಳಿದಂತೆಯೇ 
ಉಳಿದಿಹವಲ್ಲ 
ಏನಾಶ್ಚರ್ಯ?!!

ಕೇಳದಿರಿ ಏನೆಂದು 
ಕೂಸಿನ ಹೆಸರು
ತಡಕಾಡದಿರಿ 
ಆ ಅಮಾನುಷ ಹೆತ್ತವರ 
ಗುರುತು ಹಚ್ಚಲು- 
ಹೊರಟರೆ ತೊಟ್ಟಿ ಸಿಗದು 
ನನ್ನನ್ನೂ ಸೇರಿ 
ಸೋತವರದೆಷ್ಟೋ ಮಂದಿ 

ಇನ್ನೂ ಅಳುತಿದೆ 
ಮೌನದಲಿ ತಾನು 
ಅಂತರಂಗಕೆ ಲಗ್ಗೆ-
-ಯಿಟ್ಟ ದನಿಯಲ್ಲಿ 
ಚಪಲಕೆ ಹುಟ್ಟಿದ 
ಬೇಡವಾದ
ಮನೋರಥದ ಸಾಕ್ಷಿಯಾಗಿ 
ನೋವಿನ ನಕ್ಷೆಯಾಗಿ 

ಎಷ್ಟೋ ತೊಟ್ಟಿಗಳು 
ಅದರೊಳಗೆ 
ಅದೆಷ್ಟೋ ಶಿಶುಗಳು 
ಮನದೊಳಗೆ 
ಹಾಗೆ ಹುಟ್ಟಿ
ಸಾಯುವ ಮುನ್ನ 
ನರಳುತ್ತಾವೆ 
ನರಳಿಸುತ್ತಾವೆ!!

       -- ರತ್ನಸುತ

1 comment:

  1. ಕೆಲವೊಮ್ಮೆ ಭಾಗವಂತನ ಇರುವಿಕೆಯ ಬಗ್ಗೆಯೇ ನನಗೆ ಪ್ರಶ್ನೆಗಳು ಏಳುವಂತಹ ದೀನಾತಿದೀನ ಪರಿಸ್ಥಿಯಿದು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...