Wednesday, 15 January 2014

ನಿನ್ನ ದಾರಿ ಕಾಯುತ !!

ಕಾದಿಹ ಕಣ್ಣುಗಳ 
ಕಾರಣವ ಕೇಳದಿರು 
ಕರಗಬಹುದು ನಿನ್ನ ಕರಗಳಲ್ಲಿ 
ಮಾಗಿಹ ಬಯಕೆಗಳ 
ಮಾರಣಕೆ ನೂಕದಿರು 
ಕೊರಗಬಹುದು ಪ್ರಾಣ ಮರಣದಲ್ಲಿ 
 
ನೀನಿರುವ ನಂಬಿಕೆಯ 
ಹುಸಿಯೆಂದು ಸಾರದಿರು 
ಬಾಡಬಹುದು ಅರಳಿ ಕಾದ ಮನಸು 
ನೀ ಮರೆತ ದಾರಿಯಲಿ 
ಮರೆತಂತೆ ಇಣುಕಿದರು 
ಮತ್ತೆ ಹದಿನಾರಕ್ಕೆ ಜಿಗಿವ ವಯಸು 
 
ನೆನ್ನೆ ಕನಸಲಿ ನನ್ನ 
ಎದೆಯ ರಂಗದಿ ನುಗ್ಗಿ 
ಗೆಜ್ಜೆ ಧರಿಸಿ ಕುಣಿದ ನಾಟ್ಯ ಪಟುವೆ 
ಗುರುತು ಸಿಗದೆ ಹೋಗಿ 
ಹೆಸರ ಕೂಗದೆ ಉಳಿದೆ 
ಕ್ಷಮೆಯಾಚಿಸಿಕೊಂಡಮೇಲೂ ಹಠವೇ?
 
ನೀ ಗುನುಗಿದ ಸದ್ದು 
ಗಂಧರ್ವ ಲೋಕಕ್ಕೆ 
ಕರೆದೋಯ್ದ ಕ್ಷಣಗಳಿಗೆ ಕರುಣೆ ಇಲ್ಲ 
ಮತ್ತೆ ಮತ್ತೆ ಅತ್ತು 
ಬೇಡಿಕೊಳ್ಳುತಲಿರುವೆ 
ಇಷ್ಟಾದರೂ ಮರಳಿ ಕೆಣಕುತಿಲ್ಲ 

ಪತ್ರಗಳನು ಮಡಚಿ 
ದೋಣಿಯಾಕಾರದಲಿ 
ಕಣ್ಣೀರ ರಕ್ಷೆಯಲಿ ತೇಲಿ ಬಿಡುವೆ 
ಅಳಿಯದುಳಿದ
ಅಕ್ಷರಗಳನ್ನು ಜೋಡಿಸಿ 
ಉತ್ತರವ ನೀಡು ನೀ ಕಾಯುತಿರುವೆ !!

                                -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...