Saturday, 18 January 2014

ಕಣ್ಣಂಚಿನ ಕನಸುಗಳು !!

ನಾ ಕಳಚಿಟ್ಟ ಕನಸುಗಳು 
ಹಗುರಿಸಲೇ ಇಲ್ಲ 
ಕಣ್ಣುಗಳನ್ನು, ಮನಸನ್ನು. 
ಬಹುಶಃ ಕನಸುಗಳದ್ದು 
ಗಾಳಿಯ ತೂಕವೋ ಏನೋ?
ಉಸಿರ ಸ್ವಾದವೋ ಏನೋ?
ತನ್ನಿರುವಿಕೆ ಹಗುರ 
ಅನಿವಾರ್ಯದ ಸರಕು 

ನೆನ್ನೆ ಮೊನ್ನೆಗಳವುಗಳಿಗೆ 
ತೊಡಿಸಿದ ಉಡುಪಿನಲ್ಲಿ 
ಇಂದು ತೊಡಿಸಿದವುಗಳಲ್ಲೊಂದು 
ಬಣ್ಣ ಇಲ್ಲವಾದಾಗ 
ಕಣ್ಣಂಚಿಗೆ ಕಾಡಿಗೆ ತೀಡಿ 
ಚೆದುರಿಸಿಕೊಂಡವುಗಳ 
ಸಂತೈಸುವಿಕೆ, ಅದು 
ಕಣ್ಣುಗಳಿಗೇ ಪ್ರೀತಿ 

ಕುಸುರಿಯಾಗಿ ಕಟ್ಟಿದವುಗಳ 
ಗುಜರಿಗೆ ಮಾರಲು 
ಕೊಳ್ಳುವವರಾರು?
ಮೊದಲೇ ತೂಕದ ಹುರುಳಿಲ್ಲ 
ಬಟ್ಟು ಕಲ್ಲುಗಳಿನ್ನೆಷ್ಟು ಕಾದಾವು 
ತಕ್ಕಡಿಯ ಒಂದು ಕೈಯ್ಯ ಜಗ್ಗಿ 
ಮತ್ತೊಂದೆಡೆ ತುಂಬಿದ ಕನಸುಗಳು 
ಮುಳ್ಳ ಎಚ್ಚರಿಸುತ್ತಲೇ ಇಲ್ಲ 

ಗುಡಾಣದಲ್ಲಿ ಕೊಳೆತು 
ಉಳಿದವುಗಳ ಕೆದಕುವಂತಿಲ್ಲ 
ರಟ್ಟು ಕಟ್ಟಿದವುಗಳಡಿಯಲ್ಲಿ 
ಉಸಿರುಗಟ್ಟಿ ಸತ್ತವುಗಳ ಲೆಕ್ಕವಿಲ್ಲ 
ಭಯ ಮೂಡಿಸಿದವುಗಳ 
ಅಂದೇ ಹೊರ ದೂಡಿದರೂ 
ಕಂಪಿಸುವುದ ನಿಲ್ಲಿಸಿಲ್ಲ 
ಮತ್ತೆ, ಮತ್ತೆ ಮೂಡಿ 

ಕಣ್ಣಂಚಲಿ ಉಳಿದು 
ಜಾರುವ ಹನಿಗಳಿಂದ 
ಪಾಠ ಕಲಿಯದೇ  
ತನ್ನಿಷ್ಟಕೆ ಮೈ ಚಾಚಿ 
ಹರಡಿದ ಮೊಂಡು ಕನಸುಗಳ 
ದ್ವೇಷಿಸುತ್ತಲೇ 
ಕನವರಿಸುತ್ತಿದ್ದೇನೆ 
ಅನವರತ ..... 

               -- ರತ್ನಸುತ  

1 comment:

  1. ಮೊಂಡು ಕನಸುಗಳು ಮಾತು ಕೇಳುವುದೇ ಇಲ್ಲ ಗೆಳೆಯ! ನಮ್ಮಂತಹ ಭಾವ ಜೀವಿಗಳಿಗೆ ಇವೇ ಅಂತರ್ಗತ ಶತ್ರುಗಳು!

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...