Tuesday, 28 January 2014

ಚಾತಕ ಪಕ್ಷಿಗಳು !!

ಒಂಟಿ ಕಾಲಿನಲಿ 
ನಿಂತು ಕಾಯುತಿರುವೆ 
ಚಾತಕ ಪಕ್ಷಿಯಾಗಿ 
ಮತ್ತೆಲ್ಲೋ ನನಗಾಗಿ 
ಕಾದಿರುವ 
ಚಾತಕ ಪಕ್ಷಿಗಾಗಿ 

ನಾನಿಲ್ಲೇ;
ಅವಳಲ್ಲೇ;
ಅವೆಳೆಲ್ಲೋ ಎಂದು ನನಗೆ 
ನಾನೆಲ್ಲೋ ಎಂದು ಆಕೆಗೆ
ತೀರದ ಗೊಂದಲ 
ಆದರೂ 
ಬಿಟ್ಟು ಕದಲುವ ಮನಸಿಲ್ಲ 

ನಡುವೆ ಕವಲುಗಳು ನನ್ನ 
ದಿಕ್ಕು ತಪ್ಪಿಸಿ ಬಿಟ್ಟರೆ?
ನಂಬಿಕೆ ಎಂಬ ಬಾಣದ 
ವ್ಯರ್ಥ ಪ್ರಯೋಗ!!
ತೊಟ್ಟ ಬಾಣವ 
ಮತ್ತೆ ತೊಡಲಾರೆ;
ಭಾಷೆ ನೀಡಿರುವೆ ಆಕೆಗೆ 
ಉಳಿಸಿಕೊಳ್ಳುವೆನೆಂದು ನಂಬಿಕೆಯ;
ಹುಸಿಗೊಳಿಸಲಾರೆ !!

ಇಲ್ಲಿ ಹಾವಿಯಾದ ನೀರು 
ಅಲ್ಲಿ ಕರಗಬಹುದು 
ಯಾವುದಕ್ಕೂ ಒಂದು 
ಓಲೆ ಗೀಚಿಬಿಡುವೆ ನೀರ ಮೇಲೆ. 

ಮತ್ತಿಲ್ಲಿ ಕರಗಲಿರುವ ಮುಗಿಲ 
ಸಾರಿ ಸಾರಿ ವಿಚಾರಿಸುವೆ 
ತಲುಪಬೇಕಾದ 
ಪತ್ರಗಳ ಕುರಿತು

ಜೇನು ಮೆತ್ತಿದ ಕೈಗೆ 
ಕಚ್ಚಿದ ಹುಳುವಿನ ಚಿಂತೆಯಿಲ್ಲ 
ಮೆತ್ತದ ಕೈಗೇ 
ಯಮ ಯಾತನೆ 
ಅಂತೆಯೇ 
ಮನಸಿಗೆ  ಅವಳ ನೆಪದ ನೈವೇದ್ಯ 
ಒಡಲಿಗೆ ಒದ್ದಾಟ;
ಇದು ಬಗೆಹರಿಯದ ಪೀಕಲಾಟ 

ಗುರುತಿಗಾಗಿ 
ಇದ್ದ ಕಲ್ಲುಗಳನ್ನೆಲ್ಲವ ಕೆತ್ತಿ,
ಕೊರೆದು ದಿನಗಳುರುಳಿವೆ 
ನನಗೆ ಶಿಲ್ಪಿ ಪಟ್ಟ ಕಟ್ಟಿ. 
ಅವಳಿದ್ದೆಡೆಯಲ್ಲೂ
ಶಿಲ್ಪ ಕಲಾಕೃತಿಗಳು 
ರಾರಾಜಿಸುತ್ತಿರಬೇಕು
ಐಕ್ಯಕ್ಕಾಗಿ ಹಪ ಹಪಿಸಿ

ದಿನವೂ 
ವಿನೂತನ ಕನಸುಗಳಲ್ಲಿ 
ಇಬ್ಬರೂ ಒಂದಾದ 
ಸಂಗತಿಗಳ ಬಿಚ್ಚಿಡುವ ಆಸೆಯಲ್ಲೆ 
ಎಷ್ಟೋ ಕನಸುಗಳು 
ಬಂಗವಾಗಿದ್ದುಂಟು 
ಆಕೆಗೂ ಆಗಿರಬೇಕು 
ಹೀಗೆಯೇ?

ಏನಾದರೇನಂತೆ 
ಕೈಗೂಡದ ಆ ಕ್ಷಣದಿಂದ 
ನಮ್ಮ ನಡುವೆ 
ಈ ಅಂತರ 
ನಾನಿನ್ನೂ ಇಲ್ಲೇ 
ಆಕೆಯಿನ್ನೂ ಅಲ್ಲೇ 
ಇಬ್ಬರೂ ಒಬ್ಬರಿಗೊಬ್ಬರು 
ಚಾತಕ ಪಕ್ಷಿಗಳೇ !!

                      -- ರತ್ನಸುತ

1 comment:

  1. ಬದುಕಿನಲಿ ಎಲ್ಲರೂ ಒಂದಲ್ಲ ಒಂದು ತರಹ ಚಾತಕ ಪಕ್ಷಿಗಳೇ!

    ReplyDelete

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...