Saturday, 25 January 2014

ಒಂದಿರುಳ ಕನಸಿನಲಿ !!

ಬಾಗಿಲಲಿ ಸೇರಿಟ್ಟು 
ಬೆಲ್ಲದಚ್ಚನೂ ಇಟ್ಟೆ
ಬೇಗ ಒದ್ದು ಬಂದು
ಒಲೆಯ ಹಚ್ಚೆ 

ಅಕ್ಕಿ ಬೇಯಿಸಿ ಗಂಜಿ-
-ಯೊಟ್ಟಿಗೆ ಬೆಲ್ಲವನು
ಬೆರೆಸಿ ಉಣಿಸು
ಬಳಿಕ ನಮಗೆ ಸ್ವೇಚ್ಛೆ 

ಹಚ್ಚು ದೀಪಕೆ ಏಕೆ
ಅಷ್ಟು ಏರಿದ ಬತ್ತಿ
ಕಷ್ಟವಾಗಲುಬಹುದು
ನಿರ್ಲಕ್ಷಕೆ 

ನೆರಳು ನಾಚಲು ನಾವೂ
ನಾಚದೆ ವಿಧಿಯಿಲ್ಲ 
ಒಮ್ಮತವಿದೆ 
ಕತ್ತಲ ಪಕ್ಷಕೆ 

ಕಂಬಳಿಯು ನೆಲಕಚ್ಚಿ 
ದಿಂಬುಗಳು ತುಸು ಬೆಚ್ಚಿ
ಮಂಗಳಕೆ ನಾಂದಿಯ 
ಹಾಡಬೇಕು 

ಒಂದಿರುಳು ಹೀಗಿತ್ತು
ಮರೆಯಲಾರದ ಹಾಗೆ 
ಅನಿಸುವಷ್ಟರ ಮಟ್ಟ 
ತಲುಪಬೇಕು

ಹೊಸತಾದ ಅಲೆಯನ್ನು
ಎಬ್ಬಿಸಿದ ಕಡಲಲ್ಲಿ 
ಮಿಂದು ಏಳುವ ಒಮ್ಮೆ 
ಮಿಲನದಲ್ಲಿ 

ನೂರೆಂಟು ವಿಷಯಗಳ 
ವಿನಿಮಯ ನಡೆಸೋಣ
ಪರಸ್ಪರ ಮೌನದ
ಸ್ಖಲನದಲ್ಲಿ 

                   -- ರತ್ನಸುತ 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...