Wednesday 15 April 2020

ಈ ದಾರಿ, ಈ ತಿರುವು, ಏಕಾಂಗಿ ಪಯಣ

ಈ ದಾರಿ, ಈ ತಿರುವು, ಏಕಾಂಗಿ ಪಯಣ
ನಿನ್ನ ಊರಿಗೆ
ಗುರುತು ಚೀಟಿ ಎಲ್ಲೋ ಬಂದ ದಾರಿಯಲಿ
ಕಳೆದು ಹೋಗಿದೆ
ಹುಸಿ ಕಾರಣಗಳು ಸಲೀಸಾಗಿ ಸಿಗಲು ತಡ ಮಾಡುವೆ
ಇಗೋ ಕಣ್ಣ ಮುಗಿಲು ಹನಿ ಜಾರಿ ಬಿಡಲು ತಯಾರಾಗಿವೆ...

"ಸುಖಾಸುಮ್ಮನೆ ಹೊಮ್ಮುವ ತಂಪು ಗಾಳಿ
ಸಮಾಚಾರ ಕೇಳುತ್ತ ಹೊರೆಯಾಗಿದೆ"
ಹುಸಿ ಅಲ್ಲ ನಲ್ಲೆ, ತಡಿ ಬಂದೆ ಇಲ್ಲೇ
ಇದೇ ಸಂಜೆ ಕೊನೆ ನಿನ್ನ ಏಕಾಂತಕೆ!

"ನಿರಾತಂಕವಾಗಿ ನಗು ಮೂಡದೇಕೋ?
ಬಿಗಿ ತೋಳು ಬೇಕೀಗ ಸಾಂತ್ವನಕೆ"
ಕಿಸೆ ತುಂಬ ಪ್ರೀತಿ, ತುಂಬಿ ತಂದೆ ತಾಳು
ಮೂರೇ ಗೇಣಿನ ಅಂತರ ದೂರಕೆ!

"ಈ ಹಾಳಾದ ಸಂತೆಲಿ ಹುಡುಕಾಡಿ ಸೋತೂ
ನಗೆ ಹೊತ್ತ ಮುಖವಾಡ ಸಿಗಬಾರದೇ?"
ಅದೇ ಪಾಡು ಇಲ್ಲೂ, ನಗು ದೂರವಾಗಿ
ಸಿಗೋ ಕನ್ನಡಿ ಜಾರಿ ಚೂರಾಗಿದೆ!

"ಕಿರು ದೀಪ ಹಚ್ಚಿಟ್ಟ ಬೆನ್ನಲ್ಲೇ ಇರುಳು
ಅತಿ ಸಣ್ಣ ಸುಳುವನ್ನು ಕೊಡಬಾರದೇ?"
ಎದೆ ಗೂಡಿನಲ್ಲಿ, ಬರಿ ನೋವ ಕಂತೆ
ವಿನೋದಕ್ಕೆ ನೀ ಬೇಗ ಬರಬೇಕಿದೆ !

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...