Wednesday, 1 April 2020

ಪ್ರೀತಿ ಮತ್ತು ಕೋಪ

ತಯಾರಿಯಿಲ್ಲದೆ ಕಲ್ಮಶರಹಿತವಾಗಿ ಹುಟ್ಟುವುದು
ಪ್ರೀತಿ ಮತ್ತು ಕೋಪ
ಎರಡರಲ್ಲಿ ಯಾವುದಾದರೂ ಸರಿ 
ನೀ ನನ್ನೆಡೆ ಬೀರುವುದನ್ನೇ ಕಾದಿರುತ್ತೇನೆ
ಇತಿ-ಮಿತಿಗಳ ಗೋಜಿಗೆ ಸಿಲುಕದೆ
ಇಷ್ಟಾನುಸಾರ ನನ್ನತ್ತ ಪ್ರಹರಿಸು
ಕಲ್ಲಿನ ಮೂರ್ತಿಯಂತೆ ನಗುತ್ತಲೇ ಸ್ವೀಕರಿಸುವೆ

ಮಾಯೆ ಹೊಸೆವ ಸಾಹಸವೇ ಬೇಡ
ಸ್ಥಿತಿಯಲ್ಲಿ ನಗುವು, ಅನುಪಸ್ಥಿತಿಯ ಕೊರಗು
ಎರಡೂ ಮಾಯೆಯೇ
ನನ್ನಲ್ಲಿ ಅಸಂಖ್ಯ ಭಾವನೆಗಳ ಹುಟ್ಟುಹಾಕುವಲ್ಲಿ
ಎರಡಕ್ಕೂ ಸಮ ಪಾಲು
ಅಷ್ಟಕ್ಕೂ, ನೀ ಇದ್ದೂ ಇರದಂತೆ
ಇರದೆಯೂ ಇದ್ದಂತೆ ಭ್ರಮಿಸಿಕೊಂಡಾಗ
ವಾಸ್ತವಕ್ಕೂ, ಕಲ್ಪನೆಗೂ ನೇರ ಸಮರ
ಗೆಲುವು ಸದಾ ನಮ್ಮಿಬ್ಬರದ್ದೇ

ಮಾತು ತಪ್ಪುವುದು ಸಹಜವಾದ್ದರಿಂದ
ಯಾವ ಮಾತಿಗೆ ಯಾವ ದಂಡನೆಯೆಂದು
ಮುಂಗಡ ತಿಳಿಸಿ ಬಿಡು ಮತ್ತೆ
ಪಾಪ ಪ್ರಜ್ಞೆಗೆ ಕ್ಷಾಮ ಬಾರದ ಹಾಗೆ
ಇತ್ತ ದಂಡನೆಗೆ ತಲೆದೂಗುವೆ
ಕ್ಷಮೆ ಕೋರಿ ನಾ ಕುಗ್ಗುತ್ತಿರುವಂತೆ
ಕ್ಷಮಿಸಿ ನೀ ನನ್ನ ಹಿಗ್ಗು ಹೆಚ್ಚಿಸು

ಹೊತ್ತು ಹಸಿವು ನೀಗುವಲ್ಲಿಗೆ
ಮರು ಹೊತ್ತಿನ ಎಣಿಕೆಗೆ ಬೆರಳುಗಳು ಸಾಲವು
ಇಗೋ ನನ್ನವೂ ನಿನ್ನವೇ
ಕೂಡಿ ಕಳೆದು, ತೂಗಿ ಅಳೆದು
ಕೊನೆಗೆ ಲೆಕ್ಕ ಮುಗಿದ ಮೇಲೆಯೂ
ನಿನ್ನಲ್ಲೇ ಉಳಿದು ಬಿಡಲಿ
ಬಿಗಿ ಹಿಡಿತಕೆ ಬೇಕಾಗಿರುವವು ಇವೇ,
ತೋಳ್ಬಂಧನದ ವೇಳೆ ಬಿಡುಗಡೆಗೊಂಡರಾಯಿತು...

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...