Monday, 6 April 2020

ಮರೆತು ಬಿಡಬಹುದಿತ್ತು ಘಟಿಸಿದ ಕ್ಷಣಗಳ

ಮರೆತು ಬಿಡಬಹುದಿತ್ತು ಘಟಿಸಿದ ಕ್ಷಣಗಳ 
ನೆನಪಲ್ಲಿ ಇರಿಸಿಕೊಳ್ಳುವುದರ ಬದಲು 
ಬೆರೆತು ಬಿಡಬೇಕಿತ್ತು ತೆರೆದ ತೋಳುಗಳಲ್ಲಿ 
ಅಂತರ ಕಾದಿರಿಸಿಕೊಳ್ಳೋ ಮೊದಲು 

ಹರಿದು ಹಾಕುವ ಮುನ್ನ ಕೊಟ್ಟುಬಿಡಬೇಕಿತ್ತು 
ಮನಸಿಟ್ಟು ಬರೆದುಕೊಂಡ ಓಲೆಯ 
ನಾಲ್ಕು ಸಾಲುಗಳಲ್ಲಿ ಬಿಡಿಸಿ ಹೇಳಲು ಸುಲಭ 
ಒಗಟಲ್ಲೇ ಹೆಚ್ಚು ಸುಖವಂತು ಪ್ರಣಯ 

ಕಣ್ಣು ಕೂಡುವ ವೇಳೆ ಓಡುವ ಸಮಯವನು
ಲೆಕ್ಕಿಸದೆ ತಡ ಮಾಡಿ ಬಿಟ್ಟೆ 
ಮರಳಿನ ಮೇಲೆ ಜೋಡಿ ಹೆಸರ ಗೀಚುತಲೇ 
ಅಲೆಗಳಿಗೆ ಪರಿಚಯಿಸಿ ಕೊಟ್ಟೆ 

ಬಿಡದೆ ಪ್ರಶ್ನಿಸು ಎಲ್ಲವ ಸಿಗಲು ಮತ್ತೊಮ್ಮೆ 
ಅರ್ಹಳು ನೀ ಎಲ್ಲದಕ್ಕೂ 
ಗೊಂದಲಗಳೇನಿರಲಿ ಪರಿಹರಿಸು ಈ ಪಾಡು 
ಇದ್ದದ್ದೇ ಕಾಲ ಕಾಲಕ್ಕೂ 

ಎಲ್ಲ ಮುಗಿದು ಏನೂ ಆಗದಂತಿರಬೇಕು 
ಪ್ರಳಯವೊಂದು ಬರಲಿ ಬೇಗ 
ಮುಳುಗುವ ವೇಳೆಯಲಿ ಕೂಗಿ ಕರೆಯದಿರು 
ಗೋರಿಯಲಿ ಕೊಡುವಂತೆ ಜಾಗ!

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...