Wednesday, 1 April 2020

ಪೊರೆಯನ್ನು ಕಳಚಿದ ಮರುಕ್ಷಣ

ನಿನ್ನಿಷ್ಟಗಳಲಿ ನಾನಿಲ್ಲದ ನಿಜವ
ನಿಷ್ಠುರವಾಗಿ ನುಡಿವ ನೀನು
ನನ್ನ ನೆಚ್ಚಿಕೊಂಡಿರುವುದಕ್ಕೆ ನಿದರ್ಶನವೆಂದು
ನಾ ಬಲವಾಗಿ ನಂಬಿರುವೆ

ನೀ ತಾಳುವ ನಿಲುವು
ನನ್ನತ್ತ ಧಿಕ್ಕಾರ ಭಾವ ಸೂಸುತ್ತಲೇ
ಸೆಳೆಯಲು ಚಡಪಡಿಸಿದಂತೆಲ್ಲ
ಅದು ನನ್ನ ಸ್ವೀಕಾರವೆಂಬಂತೆ ಭಾವಿಸುವೆ

ನನ್ನ ನಿರ್ಗಮನಕೆ ಆಗಮಿಸುವ ಖುಷಿ
ನನ್ನನ್ನೇ ಕೇಂದ್ರೀಕರಿಸಿಕೊಂಡಿತ್ತೆಂಬ ಕಾರಣ
ಮುನಿದು ನೀ ನನ್ನ ಅಮಾನತ್ತಿನಲ್ಲಿಟ್ಟಾಗ 
ಅನುಪಸ್ಥಿತಿಯಲ್ಲಾದರೂ ಒಂದಿಷ್ಟು ಕಾಡುವೆ

ವಿಸ್ತರಿಸಿದ ನಿನ್ನ ಕನಸುಗಳ ಪಾಲಿಗೆ
ನಾ ಅಪ್ರಸ್ತುತ ಅನಿಸುವಷ್ಟಾದರೂ
ತಿರಸ್ಕಾರಕ್ಕೆ ನನ್ನ ನೆನಪಿಸಿಕೊಂಡಾಗ 
ಕೃತಜ್ಞನಾಗಿ ನಮಸ್ಕರಿಸಿ ಉಳಿದುಬಿಡುವೆ

ಯಾರದ್ದೋ ಮುಲಾಜಿಗೆ ಅಂಜಿ
ಹತ್ತಿರ ಬಂದಷ್ಟೇ ದೂರ ಉಳಿದು
ಧರಿಸಿದ ಕೃತಕ ನಗುವಿನ ಪೊರೆಯನ್ನು 
ಕಳಚಿದ ಮರುಕ್ಷಣ ಸಣ್ಣ ಮಾತಿಗೆ ಸಿಗುವೆ!

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...