ಚಿಟ್ಟೆ ಹಿಡಿವ ಆಟವ
ಆಡುವ ಜೊತೆಗೆ ಬರುವೆಯಾ?
ಮೊಟ್ಟೆ ಇಟ್ಟ ಜೀರಂಗಿಯ
ಕತೆಯನು ಹೇಳುವೆ ಸಿಗುವೆಯಾ?
ಇನ್ನೂ ಮೆತ್ತಿದೆ ಬೆರಳಿಗೆ
ಕಳೆದ ಭೇಟಿಯ ಬಣ್ಣವು
ದೋಣಿಯಾಗಿ ತೇಲಿವೆ ನೋಡು
ನೆನಪಿನ ಹಾಳೆಗಳೆಲ್ಲವೂ..
ಎಲೆ ಮರೆಗೆ ಬಚ್ಚಿಟ್ಟ
ಸೀಬೆಕಾಯಿ ಹಣ್ಣಾಗುತಿದೆ
ಉಪ್ಪು ಖಾರದ ಪೊಟ್ಟಣ ಕಟ್ಟಿ
ಬಹಳ ದಿನಗಳೇ ಕಳೆದು ಹೋಗಿವೆ
ಮುಂಚೆಯೆಲ್ಲ ನಿಬ್ಬೆರಗಾಗಿಸುತ್ತಿದ್ದ ಬಾನು
ರಂಗು ಮಾಸಿದ ಸಂಜೆಗೆ ಸೋತು
ಹಾರುತಲಿಲ್ಲ ಯಾವುದೇ ಹಕ್ಕಿ
ಗೂಡಲೇ ಕೂತು ಅಳುತಿವೆ ಬಿಕ್ಕಿ
ಬಾ ನೋಡು ರೇಖೆಗಳೆಲ್ಲವೂ
ಅಳಿಸಿಹೋಗಿವೆ ಗೋಡೆಯ ಮೇಲೆ
ತಿದ್ದಲು ಇಟ್ಟಿಗೆ ಚಕ್ಕೆಗಳಿದ್ದೂ
ಇದ್ದಿಲು ಸಿಕ್ಕರೂ ಮನಸೇ ಇಲ್ಲ
ನನ್ನ ಚಿತ್ರಕೆ ಮಾತು ಸತ್ತಿದೆ
ನಿನ್ನವುಗಳಿಗೆ ಕಣ್ಣೇ ಇಲ್ಲ
ರಾತ್ರಿ ಸುರಿದ ಜೋರು ಮಳೆಗೆ
ಗೋಡೆ ಉರುಳಿದ ಸಾಧ್ಯತೆ ಹೆಚ್ಚು
ಅರಳಿ ಮರದ ಕೆಳಗೆ ಕುಳಿತು
ನಾಗರ ಕಲ್ಲಿಗೆ ಸುತ್ತಿದ ಹರಕೆ ದಾರದಲ್ಲಿ
ಮಲ್ಲಿಗೆ ಮಾಲೆ ಕಟ್ಟಲು ಹೋಗಿ
ನಸುಕು ಮೂಡಿ ಮನೆ ತಲುಪಿದಾಗ
ಅಂಟಿದ ಘಮಲು ನಿದ್ದೆ ತರಿಸದೆ
ದಿಂಬು ಸುಕ್ಕಾಗುವಂತೆ ಹೊರಲಾಡಿ
ದಕ್ಕಿಸಿಕೊಂಡ ಕನಸೊಳಗೆ
ಒಮ್ಮೆ ಹೀಗೇ, ನೀ ಬಾರದೆ ಸತಾಯಿಸಿದ್ದೆ
ಚಿಟ್ಟೆ ಹಿಡಿಯುವುದೆಂದರೆ
ಹಿಡಿದೇ ಬಿಡುವುದೆಂದು ಭಾವಿಸಬೇಡ
ಹಿಡಿತಕ್ಕೆ ಸಿಗದೆ ಸೋಲುವುದೂ
ಸೋತು ಮರಳಿ ಯತ್ನಿಸುವುದೂ
ಅಂತೆಯೇ ಜೀರಂಗಿಯ ಹುಡುಕಾಟವೂ
ಅಷ್ಟಕ್ಕೂ, ಅಸಂಖ್ಯ ಬಣ್ಣಗಳ
ಪರಿಚಯಿಸಿಕೊಟ್ಟ ಗುರುಗಳಲ್ಲವೇ ಅವು
ನಂಟಿಗೂ ಹೆಸರು ಕೊಡುತ್ತವೇನೋ ನೋಡೋಣ ಅಂತ...
No comments:
Post a Comment