Monday 20 April 2020

ಜಾರುತಿಲ್ಲವೇಕೆ ಸಂಜೆ?

ಜಾರುತಿಲ್ಲವೇಕೆ ಸಂಜೆ
ನಿನ್ನ ನೆನಪ ಹೊತ್ತರೆ?
ಕೆನ್ನೆ ಕೆಂಪಗಾಯಿತೇಕೆ
ಹಾಗೇ ಸೋಕಿ ಬಿಟ್ಟರೆ?
ನಿಂತು ಮಾತನಾಡದಂತೆ
ಹೋದೆ ಈಗ ಎಲ್ಲಿಗೆ
ಎಲ್ಲ ಹೇಳಿ ಮುಗಿಸಬೇಕು
ರಾತ್ರಿ ಮುಗಿವ ವೇಳೆಗೆ

ಕೊಟ್ಟ ಸಾಳುಗಳಲಿ ಸಿಲುಕಿ
ನುಲಿವೆ ಏಕೆ ನಾಚುತ?
ಪ್ರಾಸ ಪದಗಳೆಲ್ಲ ನಿನ್ನ
ನಡುವ ಗಿಲ್ಲಿ ಬಿಟ್ಟಿತಾ?
ಬಳುಕುವಾಗ ಎದ್ದು ಕುಣಿದು
ತೂಗೋ ಜಡೆಯ ಕುಚ್ಚಲಿ
ನನ್ನ ಹೃದಯವನ್ನು ಇಟ್ಟು
ಹೇಗೆ ತಾನೆ ತಾಳಲಿ?

ನಿನ್ನ ಕಣ್ಣಿನಲ್ಲಿ ಒಂದು 
ಚಂದ ಹೂವು ಅರಳಿದೆ 
ರೆಪ್ಪೆ ಮುಚ್ಚಿ ತೆರೆಯುವಾಗ
ಭಿನ್ನ ಬಣ್ಣ ತಾಳಿದೆ 
ತೀಡಿಕೊಂಡ ಕಪ್ಪು ಅಲ್ಲಿ 
ಬೇಲಿಯಂತೆ ಕಾವಲು 
ಹಾರಿ ಬರಲೇ ಕನಸಿನಂತೆ 
ಪ್ರೀತಿಯಿಂದ ಬಾಚಲು?

ಒಂದುಗೂಡಿತೆಲ್ಲ ಮೋಡ 
ಏನೋ ಸಂಚು ಹೂಡುತ 
ನಿನ್ನ ತಾಕಲೇನು ಮಾಡಬೇಕು 
ಎಂದುಕೊಳ್ಳುತಾ 
ಬಾಗಿಲನ್ನು ತೆರೆದು ಹೊರಗೆ 
ಬಂದು ನೋಡು ಈಗಲೇ 
ನಿನ್ನ ಅರಸಿ ಬಂದ ನಾನು 
ತಂದೆ ಮಳೆಯ ಜೊತೆಯಲೇ

ಮಿಂದ ಖುಷಿಗೆ ದಣಿದು 
ಮರವ ತಂಗುದಾಣವಾಗಿಸಿ 
ಬುಡದ ತುಂಬ ಪ್ರೇಮ ನಕ್ಷೆ 
ಉಗುರ ಗೀರಿ ಛಾಪಿಸಿ 
ಹಸಿಯ ನೆಲದ ಹಸಿವು ನೀಗಿ 
ಹಳ್ಳ ಕೊಳ್ಳ ತುಂಬಿದೆ 
ಜೊನ್ನ ಹಾದಿ ಹಿಡಿದು ಬಂದ 
ಚಂದ್ರ ಬಿಂಬ ನಾಚಿದೆ.... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...