Monday, 6 April 2020

ಪ್ರೀತಿಯಲಿ ಕೋಪವನು ಸಹಿಸಿಕೊಳ್ಳುವ...

ಪ್ರೀತಿಯಲಿ ಕೋಪವನು ಸಹಿಸಿಕೊಳ್ಳುವ 
ನೋವಿನಲೂ ಪ್ರೀತಿಯನು ಕಂಡುಕೊಳ್ಳುವ 
ಏನೇ ಬರಲಿ ಎಲ್ಲವನ್ನೂ ಹಂಚಿಕೊಳ್ಳುವ 
ಏನೂ ಇರದೆ ಎಲ್ಲ ಇರುವ ಹಾಗೆ ಬಾಳುವ 

ಪ್ರೀತಿಯಲಿ ಕೋಪವನು ಸಹಿಸಿಕೊಳ್ಳುವ... 

ಮುಳ್ಳ ಹೊತ್ತ ಬೇಲಿ ಗಿಡದಿ ನಗುವ ಹೂವು 
ಅಂತೆಯೇ ಇರಲಿ ಬಾಳಿನಲ್ಲಿ ಬೆಲ್ಲ-ಬೇವು 
ಚಿವುಟಿ ಬಿಟ್ಟೆ ನಿನ್ನ ಆಸೆಯ ಹಣ್ಣೆಲೆಯ 
ಉರುಳಿಸಿ ಬಿಟ್ಟೆ ಅಷ್ಟು ಮಾತ್ರಕೆ ಕಂಬನಿಯ 

ಪ್ರೀತಿಯಲಿ ಕೋಪವನು ಸಹಿಸಿಕೊಳ್ಳುವ...

ಬಗೆ ಬಗೆ ಬಣ್ಣಗಳ ನಿನ್ನಲಿ ಕಂಡಿಹೆನು 
ಕೆಂಗಣ್ಣಿಗೆ ಅಂಜಿ ಕದ್ದು ಈಗ ಅಡಗಿಹೆನು 
ಕೇಳಲು ಬರಲಿಲ್ಲ ಶಿಕ್ಷೆಗೆ ವಿನಾಯಿತಿ 
ಆಲಿಸು ಎದೆ ಬಡಿತ ನೀನೂ ಬೆಚ್ಚಿ ಬೀಳುತಿ 

ಪ್ರೀತಿಯಲಿ ಕೋಪವನು ಸಹಿಸಿಕೊಳ್ಳುವ...

ಜಗಳಕೆ ಹುಡುಕಿ ಹುಡುಕಿ ಸಿಕ್ಕುವುದು ಕಾರಣ 
ಸರಸ ವಿನಾಕಾರಣ ಹುಟ್ಟಲು ರೋಮಾಂಚನ 
ಕಡಿದ ಬೆಣ್ಣೆ ಮುದ್ದೆ ಸವಿದಂತೆ ಸಂಸಾರ 
ಏನೇ ನಡೆದರೂ ಒಳಗುಟ್ಟೊಂದೇ ಪರಿಹಾರ 

ಪ್ರೀತಿಯಲಿ ಕೋಪವನು ಸಹಿಸಿಕೊಳ್ಳುವ...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...