Wednesday 15 April 2020

ಚೂರಾದ ನಿನ್ನ ಗಾಜಿನ ಬಳೆಗಳ

ಚೂರಾದ ನಿನ್ನ ಗಾಜಿನ ಬಳೆಗಳ
ಕೊಟ್ಟು ಹೋಗು ಓ ನಲ್ಲೆ
ಬಣ್ಣ ಬೆರೆಸುವ ಆಟವಾಡುತ
ಕೂರುವೆನು ಕಣ್ಣಲ್ಲೇ

ಕೆಂಪು, ಹಸಿರೆನದೆ ಬೇರೆ ಏನಿದೆ?
ಮುಡಿಸಲು ಬಾನಿಗೀಗ
ಬಂದ ದಾರಿಗೆ ಸುಂಕವಿಲ್ಲದೆ
ತೇಲಿ ಸಾಗಿದೆ ಮೇಘ

ಮಳೆ ಬಿಲ್ಲಿಗೂ ಜಡೆ ಬಿಲ್ಲೆಯ 
ನೀಡು ಬೈತಲೆ ಬೊಟ್ಟು
ಹಗಲೇ ಚಂದಿರ ಮೂಡಿ ಬಂದನು
ನಾಚಿಕೆಯನ್ನು ಬಿಟ್ಟು

ಚಳಿಗಾಲಕೆ ಕಾಯದೆ ಹಣ್ಣಾದವು
ಎಲೆಗಳು ಉದುರಲು ಕೆಳಗೆ
ಮಿಂಚಲು ಹಿಂಜರಿದ ನಕ್ಷತ್ರವ
ಕಾಲೆಳೆಯಿತು ಕಾಲ್ನಡಿಗೆ

ಕೆನ್ನೆಯ ಬಟ್ಟಲು, ಮೂಗಿನ ಮೆಟ್ಟಿಲು
ಪಿಸು ಮಾತಿಗೆ ಕರೆವಾಗ
ತುಟಿಯ ಸಣ್ಣ ಬಿರುಕಲಿ ಸಿಲುಕಿ
ಮುಂಗುರುಳಿಗೂ ತುಸು ಜಾಗ

ಎಲ್ಲವೂ ನಿನ್ನ ನೆಚ್ಚಿವೆ ಆದರೆ
ಕರಗದಿರು ನೀ ಸೋತು
ಹೊರಗಿಡು ಹುದುಗಿಹ ಭಾವಗಳ
ಮನದನ್ನೆ ನನ್ನನು ಬಿಟ್ಟು..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...