ಎಲ್ಲ ಹೇಳಿ ಮುಗಿಸಬೇಡ
ಚೂರು ಉಳಿಸು ನಾಳೆಗೆ
ಬಿನ್ನವಾದ ಬಣ್ಣ ಹೊಸೆವ
ಉಳಿಸಿಕೊಂಡ ನೂಲಿಗೆ
ಬಾಗಿಲಲ್ಲಿ ನಿಂತು ತಿರುಗಿ
ಹೋಗಿ ಬರುವೆ ಎನ್ನುವೆ
ತಡೆದು ಹಿಡಿವ ಮನಸಿನಲ್ಲೇ
ಬಿಟ್ಟು ಕೊಡತ ಬಳಲುವೆ
ಮತ್ತೆ ಸಿಗುವ ವೇಳೆಗಾಗಿ
ಹೊತ್ತು ಕಳೆದು ನೋಡುತ
ದಾರಿ ತುಂಬ ನೆರಳ ಹಾಸಿ
ಹೂವ ಚೆಲ್ಲಿ ಕಾಯುವೆ
ಗಮನವಿರಲಿ ನನ್ನ ಕಡೆಗೆ
ಊರ ತುಂಬ ಚೆಲುವರೇ
ಒಂಟಿಯಾಗಿ ನಡೆದು ಬರಲು
ಅಂಕೆಯಲ್ಲಿ ಉಳಿವರೇ?
ಕೊಟ್ಟು ಕಳಿಸಲೇನು ನೆರಳ
ಬೆರಳ ಹಿಡಿದು ನಡೆಸಲು?
ಸಿಟ್ಟಿನಲ್ಲೂ ಚಂದ ನೀನು
ಬಿಕ್ಕಿಯಾಳು ಅಪ್ಸರೆ!
ದೂರ ದೂರ ಕ್ಷಣಿಕ ಮಾತ್ರ
ಕೂಡ ಬಲ್ಲೆ ನಿಮಿಷದಿ
ನೆನೆದು ನೋಡು ಅಲ್ಲೇ ಸಿಗುವೆ
ಕುಂಟೋ ಬಿಲ್ಲೆ ಆಟದಿ
ಕಣ್ಣ ತೇವ ಹೊತ್ತ ನೋವ
ಹಗುರಗೊಳಿಸಿ ಮರಳುವೆ
ನರಳುವಿಕೆಯು ಹೊರಳಿದಾಗ
ಸಿಗುವ ಪುಟವೇ ನೆಮ್ಮದಿ!
ಎಲ್ಲ ಹೇಳಿ ಮುಗಿಸಬೇಡ
ಚೂರು ಉಳಿಸು ನಾಳೆಗೆ
ಮೌನದಲ್ಲಿ ನೂರು ಅರ್ಥ
ಕಂಡುಕೊಳುವ ಬಾಳಿಗೆ
No comments:
Post a Comment