Wednesday, 1 April 2020

ಹೃದಯ ಕದ್ದವಳು

ಮುಳ್ಳಿಗೆ ಮನಸೆಲ್ಲಿದೆ, ಚುಚ್ಚುವುದೇ ಚಳಿಯೇ
ದಾರಿಗಡ್ಡಿಪಡಿಸಿ ನೋವ ಕೊಡುವ ಆಟ ಸಹ್ಯವೇ?
ಒಂಟಿ ಕಾಲ ನಡಿಗೆಗೆ ಅಧಿಕ ವೇಳೆ ಬೇಕಿದೆ 
ಕಾದು ಕೂರು ಅಲ್ಲೇ ಇಗೋ ಕೊನೆಯ ತಿರುವು ಸಿಕ್ಕಿದೆ 

ಕಿತ್ತು ಎಸೆದೆನಾದರೂ, ನಂಜು ಪಾದಕೇರಿದೆ 
ನೆತ್ತರಲ್ಲಿ ಬೆರೆತು ತಾನು ಮೈಯ್ಯ ಪೂರ ಹಬ್ಬಿದೆ 
ಕಣ್ಣು ಮಂಜು, ಕುರುಡು ದಾರಿ, ಮಾತು ಸತ್ತ ಹಾಗಿದೆ 
ನಿನ್ನ ಎದೆಯ ಬಡಿತಕ್ಕಿಂತ ನೂರು ಪಟ್ಟು ಹೆಚ್ಚಿದೆ 

ತಲೆಗೆ ಏರಿದ ವಿಷ, ಮೆದುಳ ಕದಡಿ ಬಿಟ್ಟಿತು 
ಉರುಳಿ ಬಿಟ್ಟು ಹನಿಗಳ ಹಣೆಯು ಬೆವರಿಕೊಂಡಿತು 
ಹತ್ತಿರ ಆಗುವ ಹಂಬಲವಿದೆ ಓಟಕೆ 
ಅಸಲು ಇಟ್ಟ ಹೆಜ್ಜೆ ಕಿತ್ತು ಇಡಲು ಆಗದಂಜಿಕೆ 

ಸರತಿ ಸಾಲಿನಲ್ಲಿ ನಿಲ್ಲಲೆಂದು ಬಂತು ಸೂಚನೆ 
ನಾನು ಕೆನೆಗೆ ಉಳಿದುಕೊಂಡೆ ಮುಂದೆ ಮಂದೆ ಮಂದೆ 
ಎಲ್ಲರಲ್ಲೂ ನನ್ನ ಹಾಗೇ ತೀರದ ಕುತೂಹಲ 
ಸಮಯ ಮುಳ್ಳು ಚಲಿಸುವಂತೆ ಸಾಗಿ ಹೊರಟೆ ಮುಂದೆ 

ಎಲ್ಲ ಬಗಿದು ನಿಂತರು ತಮ್ಮ ತಮ್ಮ ಎದೆಗಳ 
ಬತ್ತಿ ಹೋದ ಅಂಗದೊಡನೆ ತಾಜಾ ಪುಷ್ಪ ಹಿಡಿದು 
ಬಗಿದು ಸೀಳಿಕೊಂಡೆ ಎದೆಯ ಹುಡುಕಿ ಹುಡುಕಿ ಸೋತೆ 
ಎಂದೋ ತಿಂದು ತೇಗಿದವನಂತೆ ಬೆಚ್ಚಿ ಕೂತೆ 

ಮುಂದೆ ಸಾಗಲು ಸಾಲು ನಾಲ್ಕು ರಾತ್ರಿಯ ಮೀರಿ 
ಸಿಕ್ಕವಳು ಅವಳೇ, ಮುಳ್ಳ ನೆಟ್ಟವಳು 
ಖಾಲಿ ಕೈ ಹೊಂದಿದವನ ಅರಸಿದವಳಂತೆ 
ನಂಜನ್ನು ಹೀರಿ, ಹೃದಯ ಕಸಿ ಮಾಡಿ ಬಿಟ್ಟಳು
ಜೀವ ತುಂಬುವ ಪ್ರೇಮ ಅಮೃತವ ಕೊಟ್ಟಳು... 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...