ಹೂವ ಹೊಸಕಿದ ಪಾಪ
ಜೀನ ಹೀರಿದ ಕೋಪ
ತೀರಿಸಿಕೊಳ್ಳಲು ಬಂತು ದುಂಬಿ
ಕತ್ತಲಲಿ ದಾರಿ ತಪ್ಪಿತು ಹಿತ್ತಲಿಗೆ ಹಾರಿ
ರಾಶಿ ಹೂವ ಗೊಂಚಲ ನಶೆಯಬ್ಬರಕೆ
ಎಲ್ಲ ತಪ್ಪಿಗೂ ಊಫಿ, ಎಲ್ಲವೂ ಮಾಫಿ
ಶಾಂತ ಮೌನದ ಕ್ರಾಂತಿ
ತಿಂಗಳ ಮೈ ಕಾಂತಿ ಬಣ್ಣಿಸಿದೆ
ಕಂಡು ಹೋಗಲು ಬಂದ ಚಂದ್ರ
ಕಿಟಕಿಯ ಇಣುಕಿ ನೋಡಲು ಬೆಳ್ಳಿ
ಕೊಳಗದ ಹಾಲ ಬಿಸಿ ಹಬೆಗೆ ಸಿಕ್ಕವನಾಗಿ
ಎಲ್ಲ ತಪ್ಪಿಗೂ ಊಫಿ, ಎಲ್ಲವೂ ಮಾಫಿ
ಕಣ್ಣು ತಾರೆಗಳೆಂದು
ಹೊನ್ನ ಹೂಡಿಹವೆಂದೆ
ತಾರಕೆವೇ ಬಿರಬಿರನೆ ಧರೆಗಿಳಿದು ಬಂತು
ಕಪ್ಪು ಮಸಿ ಬಳಿದವಳ ಗಲ್ಲಕ್ಕೆ ಗುರಿಯಿಟ್ಟು
ಶಿರ ಬಾಗಿ ರಸಗವಳ ಸವಿಯುತ್ತ ಶೃಂಗಾರ
ಎಲ್ಲ ತಪ್ಪಿಗೂ ಊಫಿ, ಎಲ್ಲವೂ ಮಾಫಿ
ಕೊರಳ ಕೊಳಲಿನ ಮೇಲೆ
ಬೆರಳ ಉರುಳಿಸಿದಂತೆ
ಹೊಮ್ಮುವ ನಾದಕ್ಕೆ ಸೋತಂತೆ ತಂಗಾಳಿ
ವಿದ್ವತ್ತನು ಮರೆತು, ಉನ್ಮತ್ತನ ಅರಸಿ
ಸಿಕ್ಕ ಸಾಕ್ಷಿಗೆ ಆರಿಸಿ ದೀಪದ ಕಿಡಿಯ
ಎಲ್ಲ ತಪ್ಪಿಗೂ ಊಫಿ, ಎಲ್ಲವೂ ಮಾಫಿ
ಧೂಪ ರೇಖೆಯ ದಾಟಿ
ಗುಟ್ಟು ಗುಟ್ಟಾಗಿರಿಸಿ
ಒಬ್ಬರೊಬ್ಬರ ಶಕುತಿ ಮುಕುತಿಯಂಚಲ್ಲಿ
ಅಲ್ಪ ವಿರಾಮದ ಯೋಗ ಸಮಾಪ್ತಿಗೆ
ಸಿಕ್ಕಲ್ಲಿ ನುಸುಳಿ ನಸುಕು ಬೆಳಕು ಹರಿದಂತೆ
ಎಲ್ಲ ತಪ್ಪಿಗೂ ಊಫಿ, ಎಲ್ಲವೂ ಮಾಫಿ...
No comments:
Post a Comment