ಊದಿ ಬಿಟ್ಟ ನೀರ್ಗುಳ್ಳೆಯೊಳ ಉಸಿರು
ಡೋಲಾಯಮಾನವಾಗಿ ತೇಲಿ
ಅಸಾಧ್ಯ ಎತ್ತರವ ತಲುಪಿ
ಆಗಸವ ಮುಟ್ಟುವ ತವಕದಲಿ ಒಡೆದು
ಆಗಸವ ಮುಟ್ಟುವ ತವಕದಲಿ ಒಡೆದು
ಗಾಳಿಯಲಿ ಹಂಚಿ ವಿಲೀನವಾದಂತೆ
ಒಂದು ಆಕಾರಕ್ಕೆ ವಿಮುಕ್ತಿ
ಎದೆಯ ಆವರಣದಿ ಭಾರವಾಗಿ
ಬಿಟ್ಟುಗೊಡುತ್ತಲೇ ಹಗುರಾಗುವ
ಮತ್ತೆ ಒಳ ಸೆಳೆವಾಗ
ಹೊರ ನಡೆಯಲು ತುದಿಗಾಲಲುಳಿವುದನು
ಗಂಟು ಕಟ್ಟಿ ಇರಿಸಿ
ಬೇಕೆಂಬಲ್ಲಿಗೆ ಸಾಗಿಸಲಾಗದು..
ಇದ್ದಷ್ಟು ಹೊತ್ತು, ಹೊತ್ತು ತಾಳಿ
ಪಡೆದಲ್ಲಿಗೇ ಮರಳಿ ಕೊಡತಕ್ಕದ್ದು
ಹನಿ ಬಿದ್ದ ಸದ್ದಿಗೆ
ನೊರೆ ಹಾಲ ಹಬ್ಬಿಗೆ
ಕುದಿ ಬಂದ ಕಾಲಕೆ
ಸಿಂಬಳದ ಸಾಕ್ಷಿಗೆ
ಬಂದಂತೆ ಬಂದು
ಮತ್ತೆ ಬರುವೆನು ಎಂದು
ಸಂದಿಸಿದ ಸುಳುವೊಂದ ಬಿಟ್ಟು
ಪತ್ತೆ ಇಲ್ಲದೆ ಕಳೆದದು
ಬಿಡಿಸಿಯೂ ಒಳ ಗುಟ್ಟು
ಮಳೆಬಿಲ್ಲ ಬಣ್ಣಗಳ ತನ್ನಲಿರಿಸಿಕೊಂಡು
ಏರು-ಏರುತ ಹಾಗೆ
ತಾರೆಯಾಯಿತೇ ಇಂದು?
ತುಟಿಯಿಂದ ನಡೆದು
ಪುಟಿದು ಅನಂತಕೆ
ಯಾವ ತಟ ತಲುಪಿತೋ?
ಯಾರ ಪುಟ ಸೇರಿತೋ?
ಮುಗಿದಲ್ಲಿಗೆ ಎಲ್ಲ ಮುಗಿದಂತಲ್ಲ
ಉಳಿದ ಖಾಲಿತನವೂ ಅಸ್ತಿತ್ವವೇ
ಬಿಟ್ಟು ಹೊರಟವುಗಳು ನೆನಪಲ್ಲಿ ಉಳಿವಾಗ
ಅದು ಕೂಡ ಹಿತವಾದ ಸಾಂಗತ್ಯವೇ!
No comments:
Post a Comment