Wednesday, 22 April 2020

ಬಾಯ್ತಪ್ಪಿ ಅಪ್ಪನ ಬೈಯ್ಯದಿರು ಅಮ್ಮ

ಮುದ್ದು ಮಾತುಗಳಾಡಿ ತಿದ್ದು ತಪ್ಪುಗಳನ್ನು
ಅಪ್ಪಿ ತಪ್ಪಿಯೂ ಬೆತ್ತ ಹಿಡಿಯ ಬೇಡಮ್ಮ
ಮಾತು ಬಂದಿರೆ ಚಂದ ನಿನ್ನನನುಕರಿಸುವೆನು
ಬಾಯ್ತಪ್ಪಿ ಅಪ್ಪನ ಬೈಯ್ಯದಿರು ಅಮ್ಮ

ಹೆಚ್ಚು ಕೇಳಲು ಒಂದು ಇಷ್ಟಾದರೂ ಕೊಡುವೆ
ಬೇಕೆಂದುದೆಲ್ಲವನೂ ಕೊಡುವಾಕೆ ಅಮ್ಮ
ಹೀಗೆ ಹಾಡಿ ಹೊಗಳಿ ಗಳಿಸಬಹುದೆಂಬುದ
ಅಪ್ಪನಾಣೆಗೂ ಅಪ್ಪ ಕಲಿಸಿಲ್ಲವಮ್ಮ

ನಡುರಾತ್ರಿ ಹಸಿವಿಗೆ ಕೂಗುವೆ ನಿನ್ನನ್ನೇ
ನೀ ನೀಗಿಸದ ಹೊರತು ನಿದ್ದೆ ಬರದಮ್ಮ
ಗೊರಕೆ ಹೊಡೆಯುತಲಿರಲಿ ಅಪ್ಪ ಅವನಿಷ್ಟಕೆ
ಭಯವಿಲ್ಲ ಅಭ್ಯಾಸವಾಗಿಹುದು ಅಮ್ಮ

ಇಬ್ಬರ ನಡುವೆ ಯಾರು ಪ್ರಿಯ? ಕೇಳಿದರೆ
ಉತ್ತರಿಸುವೆ "ಅಪ್ಪ" ಎನ್ನುತಲಿ ಅಮ್ಮ
ನಿನ್ನ ಮನವೊಲಿಸಿಕೊಳ್ಳುವುದೆಷ್ಟು ಸುಲಭ
ಅಪ್ಪನ ಸಂಬಾಳಿಸಲು ಬಲು ಕಷ್ಟವಮ್ಮ

ನನ್ನಪ್ಪನೂ ಹೀಗೆ ನಿನ್ನಪ್ಪನ ಹಾಗೆ
ಏಕಿಷ್ಟು ಮುಂಗೋಪಿ? ಯೋಚಿಸುವೆನಮ್ಮ
ಮುಂದೊಮ್ಮೆ ನಾ ಬೆಳೆದು ದೊಡ್ಡವನಾದಾಗ
ಅಪ್ಪನೆದುರು ನಿಂತು ಕೇಳುವೆನು ಅಮ್ಮ...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...