Friday 3 April 2020

ಪುಟ್ಟ ಪುಟ್ಟ ಹೆಜ್ಜೆ ಗುರುತ

ಪುಟ್ಟ ಪುಟ್ಟ ಹೆಜ್ಜೆ ಗುರುತ
ಬಿಟ್ಟು ಸಾಗಿ ಬಹಳ ಕಾಲ
ಮರಳಿ ಬಂದೆ ಮೊರೆಯ ಕೇಳಿ
"ಏನ ಕೊಡುವೆ?" ಎನ್ನುತ
ಪಾದ ರಕ್ಷೆ ಮಾಡಿ ಕಾದೆ
ವೇಳೆ ಮುಗಿದು ಸುಮ್ಮನಾದೆ 
ನೋಡು ಈಗ ಏರುತಿಲ್ಲ 
ಬೆಳೆದು ನಿಂತೆ ಮನ್ಮಥ 

ಸಣ್ಣ ಬೆಣ್ಣೆ ಮುದ್ದೆ ಮಾಡಿ 
ಉಣ್ಣಿಸುತ್ತಲಿದ್ದೆ ಅಂದು 
ಬೆಳ್ಳಿ ಬಟ್ಟಲಲ್ಲಿ ತುಂಬಿ 
ಅತ್ತ ಇತ್ತ ಓಡುತ 
ಬೆಣ್ಣೆ ಗಡಿಗೆ ಎಲ್ಲಿ ಎಂದು 
ಹುಡುಕುತಾವೆ ಕಣ್ಣು ಈಗ 
ಬಟ್ಟಲನ್ನೇ ಬಾಯಿಗಿಳಿಸಿ 
ಒಂದೇ ಸಾರಿ ನುಂಗುತ 

ಭಂಗಿಯನ್ನು ಹೋಲುವಂತೆ 
ನೂಲ ಕೊಟ್ಟು ಮಗ್ಗದಲ್ಲಿ 
ನೇಯ್ದು ಬಟ್ಟೆ ಮಾಡಿ ನಿನಗೆ 
ಅಂಗಿ ಸಿದ್ಧವಾಯಿತು 
ಬಣ್ಣ ಇಷ್ಟವಾಯಿತೆಂದು
ಹಿಗ್ಗಿ ತೊಡಿಸಲೆಂದು ಬಂದೆ 
ತೊಳಿಗೇರಲಿಲ್ಲ ಅದಕೆ 
ಮನಸು ಚೂರು ಬಿಕ್ಕಿತು 

ತೋರು ಬೆರಳ ಹಿಡಿಯಲೆಂದು 
ನಿನಗೆ ನೀನೇ ಅಡ್ಡಲಾಗಿ 
ಎಲ್ಲ ಮೀರಿ ಚೀರಿ ಬಂದು 
ಸೇರುತಿದ್ದೆ ನನ್ನಲಿ 
ಬಲಿತ ನಡಿಗೆ ನೇರ ಈಗ 
ಗುರಿಯೂ ಅಷ್ಟೇ ದಿಟ್ಟವಾಗಿ 
ಏನು ಮೊನಚು ದೃಷ್ಟಿ
ಮತ್ತದೇನು ಸ್ಥೈರ್ಯ ನಿಂತಲಿ 

ಮುಂಚೆ ಕೆನ್ನೆ ಸವರಿದಂತೆ 
ಸವರಿ ಹೋಗು ಒಮ್ಮೆ ಬೇಗ 
ಬೆಚ್ಚಗಿನ ಹಸ್ತಕೊಮ್ಮೆ 
ಕದ್ದು ಮುತ್ತ ನೀಡುವೆ
ಬಿದ್ದ ಕನಸಿನಲ್ಲಿ ತಡವಿ 
ಹೊದ್ದ ಮುನಿಸ ಮೆಲ್ಲಗೆಡವಿ 
ನೀನು ಹಾಕೋ ತಾಳಕೆಂದೂ 
ಇಚ್ಛೆಯಿಂದ ಕುಣಿಯುವೆ... 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...