ಖಾಲಿ ತೀರದ ಮೇಲೆ ಮೂಡಿದೆ
ಸಾವಿರಾರು ಹೆಜ್ಜೆ ಗುರುತು
ಗೆಜ್ಜೆ ಕಟ್ಟಿದ ಪಾದ ನನ್ನದು
ಮೌನ ತಾಳಿತೆಲ್ಲವ ಮರೆತು
ಆಸೆ ಬಯಲಿಗೆ ಬೇಲಿ ಹಾಕಲು
ಹಾರಬೇಕಿದೆ ರೆಕ್ಕೆ ಪಡೆದು
ಹುಡುಕಿ ಬರಲೇ ನಿನ್ನ ಮನೆಯ
ಮಿಡಿದ ಎದೆಯ ಸದ್ದ ಹಿಡಿದು
ಬೇರು ಹೊಕ್ಕಿದೆ ಮನಸಿನಾಳ
ಚಿಗುರು ಕಾಲಕೆ ಕ್ಷಣಗಣನೆ
ನೆಟ್ಟು ಹೋದೆ ಅಂದು ಒಲವ
ಬಿಟ್ಟ ಹೂಗಳದೊಂದೇ ಪ್ರಾರ್ಥನೆ
ಆಗು ನೀ ಈ ಬಳ್ಳಿ ಹಬ್ಬಿಗೆ
ಮರದ ಟೊಂಗೆ, ಭವದ ಹಂಗು
ಕಲ್ಪಿಸಿಕೊಳಲು ನಿನ್ನ ಉಸಿರ
ಹೆಚ್ಚಿಕೊಂಡಿತು ಕೆನ್ನೆ ರಂಗು
ಸುತ್ತ ಕತ್ತಲು ಮುರಿದ ಬಾಗಿಲು
ಕಣ್ಣ ತುಂಬ ಬೆಂದ ಕಂಬನಿ
ಬಿಂಬ ಸೂಸುವ ಗಾಜಿನೊಡಲಿಗೂ
ವಿಸ್ತರಿಸಿದೆ ಬಿರಿದ ಮಾರ್ದನಿ
ದಟ್ಟ ನೋವಿನ ಕಾನನದಲಿ
ಕಳೆದ ನಗುವಿನ ಪತ್ತೆ ಹಚ್ಚಿ
ಬಂದು ಮುಡಿಸು ನೊಂದ ತುಟಿಗೆ
ಆದ ಗಾಯಕೆ ಬೆರಳ ಚಾಚಿ..
No comments:
Post a Comment