ಕನ್ನಡಿಯ ಮುಖವನ್ನೇ ಬೇಡುವ ನಿನಗೆ
ಅಸಲಿ ಚಹರೆಯ ಕುರಿತು ನೂರು ತಕರಾರು
ಬಿಂಬ ನಗುತಿಲ್ಲವೆಂದು ಅಳಲು ತೋಡುವೆ
ಸಂತೈಸಲು ನಿನಗೆ ನೀನೇ, ಮತ್ತಾರು?
ತುತ್ತು ತುತ್ತಿಗೂ ತೊಟ್ಟು ಕಣ್ಣೀರ ಬೆರೆಸಿ
ಉಪ್ಪು ಉಪ್ಪೆಂದರದು ಯಾರ ತಪ್ಪಾದೀತು
ಮುನಿಸಲ್ಲೇ ಎಲ್ಲವ ಗೆಲ್ಲ ಹೊರಟು ನಿಂತೆ
ತೇಲಿಸದೆ ವಿಷಯ ದಡ ಹೇಗೆ ತಲುಪೀತು?
ಅಂಟಿ ಕೂತರೂ ನಡುವೆ ಗೋಡೆ ಕಟ್ಟಿರುವೆ
ನಿಂತು ಕಾದರೂ ದಾಟಿ ಮುಂದೆ ಸಾಗಿರುವೆ
ಅಲೆಯಂತೆ ನಿನ್ನ ತಲುಪಲು ಕಷ್ಟವೇನಲ್ಲ
ಹೊತ್ತು ತರಲಾರೆ ಪ್ರತಿ ಬಾರಿ ಮುತ್ತನ್ನು!
ಹೇಳಿಕೊಡಬೇಕಾದ ಪ್ರಾಯವಲ್ಲ ನಿನದು
ಹೇಳಿಕೊಟ್ಟವರಿಗಿದ ತಿಳಿಸಿಬಿಡು ಮುಂದೊಮ್ಮೆ
ತಡವಾಗಿ ಮುದ ನೀಡಬಹುದು ನೆನೆ ಮಾತುಗಳ
ಮರೆತರೆ ಕರೆ ನೀಡು ಬರುವೆ ಮತ್ತೊಮ್ಮೆ
ಏಕಾಂತವೂ ಅಪೂರ್ಣವಾಗುವುದು ಕೆಲವೊಮ್ಮೆ
ವಿರಹ ಪ್ರಾಭಲ್ಯ ಕ್ಷೀಣಿಸಿದಂತೆ ಚೂರು
ಅತಿಯಾದ ಪ್ರೀತಿ ಕೊಟ್ಟು ಜೊತೆಗೆ ಇದ್ದುಬಿಡು
ಅಥವ ಅಷ್ಟೇ ಆಳದ ನೋವನುಣಿಸು...
No comments:
Post a Comment