Thursday, 3 April 2025

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ 

ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ 
ಯಾವ ಮಾತಿಲ್ಲದೆ, ಮೌನವೇ ಸಾಗಿದೆ 
ಹೋಗಿ ಬಂದು ನಿಲ್ಲಲಿಲ್ಲ 
ಎಚ್ಚರಿಸಿ ಕೇಳಲಿಲ್ಲ
ನನ್ನಂತೆ ನೀನೂ ಒಂಟಿಯೇ?
ಯಾರ ಕೂಗು ಕೇಳಲಿಲ್ಲ 
ಗದ್ದಲದ ಗೋಜಲಿಲ್ಲ 
ಕೂರೋಣ ಬೆನ್ನಿಗಂಟಿಯೇ 

ಮೂಡಿ ಬಂದಂಥ ಹಾಡಲ್ಲಿ ನೀ 
ತಪ್ಪಿದ ತಾಳ ಆದಂತಿಹೆ 
ಮಧುರ ಗಾಳಿ ಬೀಸಿ ಬಂದಿದೆ 
ಅಸಲು 


ದೂರದಲ್ಲಿ ಒಂದು ದಾರಿ ಕಾಯುವಂತಿದೆ
ಹೆಜ್ಜೆ ಹೆಜ್ಜೆಗೊಂದು ಗುರುತ ನೀ

ಶಬ್ಧಗಳು ಯುದ್ಧವನ್ನು ಶಮನಿಸಲಿ

ಶಬ್ಧಗಳು ಯುದ್ಧವನ್ನು ಶಮನಿಸಲಿ

ದಿಗ್ಬಂಧನದ ಶರಗಳ ಸೀಳಿ ಹೃದಯ 
ಹುರಿದುಂಬಿ ಹಾಡುವಾಗ ಮೌನ
ಮಾತಿನ ವೇಘದಷ್ಟೇ ತೀಕ್ಷ್ಣವಾಗಿ ಮರೆಯಾಗಿ
ಪ್ರೇಮೋಲ್ಲಾಸವ ನೀಡುವ ಗಳಿಗೆ
ಹೂವೊಂದು ಅರಳಿದ ಸದ್ದು ಕಿವಿಯ ತಾಕಿ
ನಿಮಿರಿದ ರೋಮಗಳ ಅಂಚಿಗೆ
ತಂಗಾಳಿ ನವಿರಾಗಿ ಸೋಕಿ ಸೋಲಲಿ

ಏನೋ ತಮಾಷೆಲಿ

ಏನೋ ತಮಾಷೆಲಿ

ನಿನ್ನ ಕೆಣಕೊವಾಗ
ಏಕಿಂತ ಚಂದ ಮುನಿಸು
ಬೇಕಂತಲೇ ನನ್ನ
ಹಿಂದೆ ಬೀಳೋ ನೀನು
ಹೆಂಗಾರ ಮಾಡಿ ನಗಿಸು

ಸಂತೆಯ ತುಂಬ ಮಾತೆಲ್ಲ ನಮ್ಮ ಕುರಿತೆ
ಆಗಿದ್ದಾಗಿ ಹೋಗಲಿ ಎಂದೇ ಎಲ್ಲ ಮರೆತೆ 
ನೆನ್ನೆಗೆ.. ನೆನ್ನೆಗೆ
ಸಿಕ್ಕ ಹಾಗೆ ನೀ ಮತ್ತೆ ಸಿಗಬಾರದೇ?
ಸುಕುಮಾರಿಯೇ, ಸುಕುಮಾರಿಯೇ
ನನ್ನ ಕನಸೆಲ್ಲವ ಕದ್ದ ನಾರಿಯೇ...

ನೀ ತಂಪು ಗಾಳಿ
ಚೂರೇ ಚೂರು ಪೋಲಿ
ಆ ಕಣ್ಣಲ್ಲೇ ನನ್ನ ಕುಣಿಸು 
ಹಾಯಾದ ಸಂಜೆಲಿ
ಒಬ್ಬಂಟಿ ಧ್ಯಾನ 
ತಡವಾದಾಗ ಮುತ್ತನುಣಿಸು 

ಯಾವತ್ತೂ ನಾ ಹೀಗೆಲ್ಲ ಹಿಗ್ಗೇ ಇಲ್ಲವೇ 
ನನ್ನೊಳಗೆನೇ ಮಾತಾಡಿ ನಾಚುತಿರುವೆ 
ನೆನ್ನೆಗೆ.. ನೆನ್ನೆಗೆ
ಸಿಕ್ಕ ಹಾಗೆ ನೀ ಮತ್ತೆ ಸಿಗಬಾರದೇ?
ಸುಕುಮಾರಿಯೇ, ಸುಕುಮಾರಿಯೇ
ನನ್ನ ಕನಸೆಲ್ಲವ ಕದ್ದ ನಾರಿಯೇ..

ಕೈಗೊಂಬೆಯು ನಾನಾಗುವೆ

 ಓ 

ಕೈಗೊಂಬೆಯು ನಾನಾಗುವೆ
ನೀ ಕುಣಿಸಲಾದರೆ
ಆಮಂತ್ರಣ ನಿನಗಾಗಿಯೇ
ಈ ತೋಳಿಗಾಸರೆ
ಬೇಕಂತಲೇ ನೀ ನಿಂತರೆ
ಈ ದೂರ ತಾಳೆನು
ನೀ ನುಡಿಯದೆ ಏನೊಂದನೂ
ನಾನೆಲ್ಲ ಬಲ್ಲೆನು

ತಾರಾಗಣ ಇದೋ ಸಮೀಪದಲ್ಲೇ ಮಿಂಚುವಂತಿದೆ 
ಆರೋಹಣ ಈ ರಾಗವೀಗ ಏಕೋ ತುಂಬ ಕಾಡಿದೆ 

ಮಳೆಗಾಲವೀಗ ಮನದೊಳಗೆ
ಮನದಾಳ ಮಾತು ತುಟಿ ಮರೆಗೆ
ಮನಸಾರೆ ಹೇಳಬೇಕು ಈಗ ಸಾವಿಗಳಿಗೆ 

ಸಂಗಾತಿ, ಸಂಗಾತಿ 
ನಿನ್ನಿಂದ ನಾನಾದೆ ಈ ರೀತಿ 
ತಂಗಾಳಿ, ತಂಗಾಳಿ 
ನೀ ಬೀಸಿ ಹೋದಂತೆ ಬಾಳಲಿ 
ಯಾರಿಲ್ಲಿ, ಯಾರಿಲ್ಲಿ 
ನಿನಗಿಂತ ಸರಿಸಾಟಿ ಪ್ರೀತಿಲಿ 
ಈಗಾಗಲೇ ಈ ಜೀವ ನಿನ್ನದೆಂದು ಮಾತು ನೀಡಿದೆ 
ಆಗಾಗ ನಾನೂ ಕೂಡ ನಿನ್ನ ಹಾಗೆ ಸೋಲ ಬೇಕದೆ 

ಮಳೆಗಾಲವೀಗ ಮನದೊಳಗೆ
ಮನದಾಳ ಮಾತು ತುಟಿ ಮರೆಗೆ
ಮನಸಾರೆ ಹೇಳಬೇಕು ಈಗ ಸಾವಿಗಳಿಗೆ 

ಉಸಿರು ಕೈ ಜಾರಿ ಹೋದರೂ

ಉಸಿರು ಕೈ ಜಾರಿ ಹೋದರೂ

ಕೈಯ್ಯಲಿ ನಿನ್ನ ಕೈ ಇರಲಿ
ಹೆಸರೇ ಮರೆಯುವೆ ಆದರೆ
ನಿನ್ನುಸರ ನೆನಪು ಜೊತೆಗಿರಲಿ

ಬರಿದೆ ಬದುಕಲಿ ಘಮಿಸುತಿರು 
ಬಿರಿದ ಮಲ್ಲಿಗೆಯಂತೆ ನೀ 
ಕಳೆದ ಸಮಯವು ಮರಳದಿದೋ 
ಉರುಳಿದಂತೆ ಕಣ್ಣ ಹನಿ 

ಮುಗಿಲ ಅಂಚಿಗೆ ಬೆಳ್ಳಿ ರೇಖೆ 
ನೀನು ಬಿಡಿಸುವುದಾದರೆಕೆ?
ಕರಗೋ ವೇಳೆಗೆ ಬಿಕ್ಕುವುದನು 
ತಡೆದು ಹಿಡಿಯುವ ಬಯಕೆಯೇಕೆ?

ನಿನ್ನ ನೀ ನಂಬಿದರೆ ಮಾತ್ರ 
ನನ್ನನೂ ನಂಬುವುದು ಸಹಜ 
ಇಲ್ಲವೇ ನಾವಿಬ್ಬರು ಬೆರೆತೂ 
ಅನಿಸಬಹುದು ಸೇರೋ ಕ್ಷಿತಿಜ 

ಅಂತೆ ಕಂತೆಗಳು ಸಾವಿರ 
ನಾವಿರುವ ಇನ್ನೂ ಹತ್ತಿರ
ಸೀಮೆಗಿಲ್ಲದ ಪ್ರೇಮವಲ್ಲ 
ನಮ್ಮೊಲವೇ ಇಲ್ಲಕೂ ಉತ್ತರ 

ಅಪ್ಪ, ನೀ....

ನೀನು ಅನಿಸುವಷ್ಟು ಸಾಧಾರಣ 

ಅಲ್ಲವೇ ಅಲ್ಲ, ಅಸಾಮಾನ್ಯ 
ನೋಡಲು ಒರಟು, ಮೃದು ಮನಸು 
ಮೌನದಲ್ಲೂ ಸಾಗರದಾಳ ಗಾಢ ಮಾತು 

ಅಪ್ಪ, ನೀ ಸುಮ್ಮನಿದ್ದರೂ ಅರ್ಥ 
ಒಳರಾರ್ಥಗಳು ನೂರು 

ಎತ್ತಬಾರದಿತ್ತು ಕಯ್ಯ

ಎತ್ತಬಾರದಿತ್ತು ಕಯ್ಯ 

ಮುತ್ತು ಕೊಟ್ಟ ಕೆನ್ನೆಗೆ 
ನೆವವು ಅಷ್ಟೇ ಸಾಕಿತ್ತು 
ಜಾರಲು ಕಣ್ಣೀರಿಗೆ 
ಅತ್ತ ಮೇಲೆ ಎಷ್ಟು ಕಾಲ
ಬೇಕು ಮೊಗವು ಅರಳಲು?
ತಪ್ಪು ಸಾರಿಗಳನ್ನು ಕೂತು 
ಚರ್ಚಿಸೋಣ ಒಟ್ಟಿಗೆ 

ಬೀಳು ಬಿಟ್ಟ ಮರವು 
ನಾನು ಬಾಗುವುದ ಮರೆತೆನು 
ಹಬ್ಬಿಕೊಂಡ ನಿನ್ನ ಹೂವು 
ನನ್ನದೆಂದು ಬಿರಿದೆನು 
ಬೇರು ಇಬ್ಬರದ್ದೂ ಒಂದೇ 
ಎಂಬುದನ್ನೇ ಮರೆತೆವು 
ದೂರವಾಗೋ ಮಾತನಾಡಿ 
ಮಾಡಹೊರಟು ತಪ್ಪನು 

ಏರು ದನಿಯ ಎದುರು
ಮತ್ತೂ ಏರು ದನಿ ನಿನ್ನದು 
ಗದ್ದಲದ ನಡುವೆ ಪ್ರೀತಿ 
ಒಂದು ಕ್ಷಣವೂ ನಿಲ್ಲದು 
ಕಾಲಕೂನು ಕೊಡುವ ಚೂರು 
ಕಾಲಾವಕಾಶವ 
ಸಣ್ಣ ಮುನಿಸು ಒಮ್ಮೆಲೆಗೆ 
ಮನವ ಕದಡಬಾರದು 

ಬಿಟ್ಟ ಮಾತು ಹತ್ತು ದಿವಸ 
ಕಳೆಯಿತಲ್ಲ ಇಂದಿಗೆ 
ಚಿತ್ತ ಸ್ಥಿಮಿತದಲ್ಲಿ ಇರದೆ 
ಸರಿದೂಗುವುದೆಂದಿಗೆ 
ನಿಲುವುಗನ್ನಡಿಯಲಿ 
ಉತ್ತರಿಸಲಾಗದ ಪ್ರಶ್ನೆಗಳು 
ಹಬ್ಬಗಳೆಲ್ಲ ಉಳಿದವು 
ಅವವುಗಳ ಪಾಡಿಗೆ 

ಹೇಳು ಬೇರೆ ಯಾವ ಶಿಕ್ಷೆ
ಬೇಕು ಇನ್ನು ಜೀವಕೆ
ನೆರಳು ತೊರೆದ ದೇಹವಾದೆ
ಹೋಗಲು ನೀ ದೂರಕೆ
ಸಿಹಿಯ ಸಮಯವೊಂದೇ
ಇರಲಿ ಈಗಿನಿಂದಾಚೆಗೆ
ಕಹಿಯ ನೆನಪುಗಳೆಲ್ಲವೂ
ಸರಿಯಲಿ ನೇಪಥ್ಯ...

ಏನೋ ಹೇಳುವ ತಯಾರಿಯಲಿ

ಏನೋ ಹೇಳುವ ತಯಾರಿಯಲಿ

ಏನೂ ಹೇಳದೆ ಸುಮ್ಮನಾದೆ ನಿನ್ನ ಎದುರಲಿ... ಸಖಿ

ನಿನ್ನೊಡನೆ ಸಾಗುವ ದಾರಿ
ನಿನ್ನೊಡನೆ ಆಡದ ಮಾತು
ನಿನ್ನೆದುರಲಿ ಮೂಡುವ ಮುಗುಳು 
ನೀನಾದೆ ಚಂದದ ಅಮಲು 

ನಿನ್ನಲ್ಲಿಯೇ ನಾನು ತಲ್ಲೀನ 
ನಿನ್ನೊಳಗೆ ನನ್ನ ನಿಲ್ದಾಣ
ಏದುಸಿರಲೂ ನಿನ್ನದೇ ಹೆಸರು
ಜೊತೆಲಿ ನೀನಿರೆ ನವಿರು

ತಿಳಿಯದಂತೆ ಇಷ್ಟು ದೂರ
ಹೊತ್ತು ತಂದ ಪ್ರೇಮಕೆ
ಕೊಡಲೇ ಬೇಕು ನಮ್ಮ ಪ್ರೀತಿ
ಚಿನ್ನದ ಗರಿ ಕಾಣಿಕೆ

ಒಂದು ಸಾವಿರ ಕನಸು ಕಾಣುವ
ಒಂದೇ ದಿಂಬಿಗೆ ತಲೆಯನಿಟ್ಟು
ಎಂದೂ ಮಾಸದ ನೂರು ಬಣ್ಣಕೆ
ದಾಖಲಾತಿಯ ಕೆಲಸ ಕೊಟ್ಟು

ಮಾತು ನೀಡು ನಿನ್ನ ಹಾಡಲಿ
ನನ್ನ ಹಾಡಿರಲಿ... ಸಖಿ

ಕಾಗದ ನಾನಾಗುವೆ
ನೀ ಗೀಚಿಕೋ ಏನಾದರೂ
ಮನದ ಕಾಲು ದಾರಿ ತುಂಬ
ಹೆಜ್ಜೆ ಗುರುತಲಿ ನೀನಿರು

ಈ ರಾತ್ರಿ ಕಳೆಯೋ ಮುನ್ನವೇ
ಕಳೆದುಕೊಳ್ಳುವ ನಮ್ಮನೇ
ಹೋರಾಡಿ ಒಬ್ಬರನೊಬ್ಬರು
ಇಗೋ ಗಳಿಸಿಕೊಂಡೆವು ಮೆಲ್ಲನೆ

ಸಾಕು ಮಾಡು ವಿರಸವ
ಆನಂದ ಬಾಷ್ಪವಿದೋ.... ಸಖಿ

ಎಷ್ಟೋ ಬಾರಿ ಬಿದ್ದ ನನ್ನನ್ನು

ಎಷ್ಟೋ ಬಾರಿ

ಬಿದ್ದ ನನ್ನನ್ನು
ಕೈ ಹಿಡಿದು ನೀನೇ ಎತ್ತಬೇಕಿದೆ
ಮತ್ತೆ, ಮತ್ತೆ
ನಿನ್ನ ಮೋಹಕ್ಕೆ ಮರುಳಾಗಿ 
ಸೋಲುಂಡ ಹಾಗೆ ನಾ ಬೀಳಬೇಕಿದೆ

ಹುದುಗಿದಾಸೆಗಳು
ಒಂದೊಂದಾಗಿ ಪುಟಿದು 
ಆರಿಸಿ, ಪೋಣಿಸಿ ಕೊಡಬೇಕಿದೆ
ಹೇಳಲಾಗದ ಮಾತು
ಪತ್ರದಲ್ಲೇ ಉಳಿದು
ಮಡಿಸಿ ಜೇಬಲ್ಲಿರಿಸಿ ನಗಬೇಕಿದೆ

ಶಾಂತ ಕಣ್ಣಲ್ಲಿ ನನ್ನ 
ಪ್ರೇಮ ಗದ್ದಲ ಬೆರೆಸಿ
ಹೊಮ್ಮುವ ಖುಷಿಗೆ ಕಣ್ಣೀರಾಗಬೇಕಿದೆ
ಏಕಾಂತದಲಿ ನೀನು
ನನ್ನ ಮುಂದಿರಿಸಿದ
ಸಾವಿರ ಒಗಟಿಗೆ ಕಂಗಾಲಾಗಬೇಕಿದೆ

ಯಾವ ಕೊಳಲಿಗೂ
ಯಾರ ಕೊರಳಿಗೂ
ಕಿವಿಗೊಡದೆ ನಿನ್ನನ್ನೇ ಕೇಳಬೇಕಿದೆ
ನಿನ್ನ ಅನುಮತಿಯಿರದೆ
ಬಣ್ಣಿಸಿದ ಪದ್ಯಗಳ
ಉಸಿರುಗಟ್ಟುವ ಹಾಗೆ ಹೇಳಬೇಕಿದೆ

ಎಂದೂ ಊಹಿಸದಂಥ
ಹೂ ಬಿರಿದ ರಾಗದಲಿ
ನೀನಾಡೋ ಪಿಸು ಮಾತ ಬೆರೆಸಬೇಕಿದೆ
ಕಂಪಿಸಿದ ಒಡಲಿಗೆ
ಬಿಸಿ ತಾಕುವಂತಹ
ಕನಸುಗಳ ಸಾಲಾಗಿ ಉರಿಸಬೇಕಿದೆ

"ಸಾಕು ನಿಲ್ಲಿಸು" ಎಂದು
ನೀ ಹೇಳಬೇಡ
ಹೆಜ್ಜೆಗಳು ದಾರಿಯ ಸವೆಸಬೇಕಿದೆ
ಚೂರೂ ಉಳಿಸದ ಹಾಗೆ
ಹೀರು ಮಧುವನು ಬೇಗ
ನನ್ನನ್ನು ನಿನ್ನಲ್ಲಿ ಬೆರೆಸಬೇಕಿದೆ!!

ಒಂದು ಖಾಲಿ ಹಾಳೆ

ಒಂದು ಖಾಲಿ ಹಾಳೆ

ಎರಡೇ ತೊಟ್ಟು ಶಾಹಿ
ಆತ್ಮಾವಲೋಕನಕ್ಕೆ
ಆಸೆಗಳ ಗೀಚಿಕೊಳ್ಳೋಕೆ

ಒಂದು ಬದುಕಿನ ಕ್ಯಾನ್ವಾಸು
ಎರಡೇ ಬಣ್ಣದ ಆಯ್ಕೆ
ನೋವುಗಳ ಬಣ್ಣಿಸೋಕೆ
ನಲಿವುಗಳ ಚಿತ್ರಿಸೋಕೆ

ಒಂದು ದಾರಿಯ ಕೊನೆ
ಎರಡೇ ಹೆಜ್ಜೆ ಜಾಗ
ಮುಂದಿಡಲು ಒಂದೆಜ್ಜೆ
ಹಿಂದಿಡಲು ಒಂದು

ಒಂದು ದಟ್ಟ ಕಾಡು
ಎರಡೇ ಕಣ್ಣು
ಮುನ್ನೋಟ, ಬೆನ್ನೋಟಕ್ಕೆ
ನಂದಿದ ಕಂದೀಲು

ಒಂದು ಮಾಯದ ಕನ್ನಡಿ
ಎರಡು ಬಿಂಬ
ಊಹೂಂ, ಒಡೆದಿಲ್ಲ
ಅವೆರಡು ನನ್ನವೂ ಅಲ್ಲ

ಒಂದು ಶಬ್ಧ 
ಒಂದು ಮೌನ
ಎರಡರ ಸಂಘರ್ಷ
ಒಂದರ ನಿರ್ನಾಮ, ಯಾರದ್ದು?

ಒಂದು ರಾತ್ರಿ
ಒಂದು ಹಗಲು
ಎರಡರ ಅನುಸಂಧಾನ
ಮಂಕು ಮುಸ್ಸಂಜೆ
ಒಂಟಿ ನೆರಳು, ಮತ್ತು
ಒಬ್ಬಂಟಿ ನಾನು!

ಎಷ್ಟು ಕಂಗಳನು ದಾಟಿ ಬಂದು

ಎಷ್ಟು ಕಂಗಳನು ದಾಟಿ ಬಂದು 

ಮಿಂದೆ ನನ್ನ ಎದೆಯೊಳಗೆ 
ಇಷ್ಟು ದಿವಸ ಕಾದ ಹೃದಯ 
ಸೋಲಬೇಕೇ ಪ್ರತಿ ಗಳಿಗೆ 
ಒಮ್ಮೆ ನಿಂತು ಮಾತನಾಡಿಸು 
ಮೂಖನಾಗೇ ಉಳಿದಿರುವೆ 
ಇಷ್ಟವಾದುದ್ದೆಲ್ಲವನ್ನು 
ನಿನ್ನ ಹೆಸರಿಗೇ ಬರೆದಿಡುವೆ 

ಹೇಳಲೇನು ಆಸೆಯನ್ನು

ಹೇಳಲೇನು ಆಸೆಯನ್ನು

ಒಂದೇ ಬಾರಿ ಎಲ್ಲವನ್ನೂ
ಕೇಳಬೇಡ ಬೇರೆ ಏನೂ
ಆಲಿಸೋಣ ಮೌನವನ್ನು
ತೀರದ ನಿನ್ನ ಸ್ವಪ್ನವು
ಕಣ್ಣಿಗೆ ರೂಢಿಯಾದವು
ಆಗಿದೆ ಇನ್ನು ನನ್ನ ಬಾಳು ಸಾಕಾರ

ಶರಣಾಗಿ ಹೋದ ಮೇಲೆ ಹೃದಯಕ್ಕೆ
ಗೆಲುವೆನ್ನುವಂತೆ ನೀಡು ಸಹಕಾರ
ಎದುರಲ್ಲಿ ಕೂತು ಸೋತ ಸಮಯಕ್ಕೆ
ಗಡುವನ್ನು ನೀಡಿತಂತೆ ಗಡಿಯಾರ.. 

ತಿರುಗಿ ನೋಡದೆ, ನಡೆದೆ ಸುಮ್ಮನೆ
ಬೆನ್ನಿಗಂಟಿದೆ ಕಣ್ಣು ಮೆಲ್ಲನೆ
ಎರಡೂ ಗುಂಡಿಗೆ ಹೊತ್ತು ಸೋತೆನು
ನಿನ್ನ ಪಾಲನು ಕೇಳು ಬೇಗನೆ
ಆತುರವಾಗಿದೆ ಆಗಿರೋದೆಲ್ಲವೂ
ಕಾತರ ನಿಲ್ಲದು ಒಂದು ಚೂರಾದರೂ

ಕಣ್ಣಲೇ ಆ ಕಣ್ಣಲೇ

ಕಣ್ಣಲೇ ಆ ಕಣ್ಣಲೇ

ನಾ ಸುಮ್ಮನೆ ಬಿಂಬವೇ ಆಗುತಾ ನಿಲ್ಲಲೇ
ಹೇಳಲೇ ನಾ ಹೇಳಲೇ
ನೀನೆಲ್ಲಿರು ಅಲ್ಲಿಯೇ ಆಗಲಿ ನೆನ್ನೆಲೆ
ಕಾಲವೇ ನಿಂತಿದೆ, ನಮ್ಮನೇ ನೋಡುತಾ
ನಿಂತರೆ ನಿಲ್ಲಲಿ ಅಲ್ಲವೇ ಸಖಿಯೇ
ಹೇಳಲು ಆಗದ ಸಾವಿರ ಮಾತಿದೆ
ಸಿಕ್ಕರೆ ಹೇಳುವೆ ಮೆಲ್ಲನೆ...

ನನ್ನ ಧ್ಯಾನವೆಲ್ಲ ಈಗ ನಿನ್ನ ಕುರಿತು

ನನ್ನ ಧ್ಯಾನವೆಲ್ಲ ಈಗ ನಿನ್ನ ಕುರಿತು

ಬಿಟ್ಟು ಬಾಳಲಾರೆ ನಾನು ನಿನ್ನ ಹೊರತು
ಎತ್ತ ಹೋಗುವೆ, ನೀ ಎತ್ತ ಹೋಗುವೆ 
ಕತ್ತಲಲ್ಲಿ ಮಿಂಚಿನಂತೆ ನಿನ್ನ ಹೊಳಪು 
ಚಿತ್ತದಲ್ಲಿ ಚಿತ್ರವಾಗಿ ಹೋದೆ ಬೆರೆತು 
ಎತ್ತ ಹೋಗುವೆ, ನೀ ಎತ್ತ ಹೋಗುವೆ 
ಮಾತಿಗೊಂದು ಮಾತು ಆಡ ಬಾರದೇ 
ಒಮ್ಮೆ ನೀನೂ ಸೋತು ಬೀಗಬಾರದೇ 
ಸಿಗೋಣ ಸುಮ್ಮನೆ ಸುಮ್ಮನೆ ಬಾ 
ಸಾಗೋಣ ಮೆಲ್ಲನೆ ಮೆಲ್ಲನೆ ಬಾ

ಒಂದೇ ಒಂದು ನೋಟದಲ್ಲೇ ಗೆದ್ದೆ ನೀ ಚೆಲುವ 
ಸಂಜೆ ಬೀಸೋ ಗಾಳಿಯಂತೆ ಸೆಳೆದೆ ಕಣ್ಮನವ 
ಮನೆಯಂಗಳ ಹೂವು ನೋಡಿ ನಾಚಿಕೊಂತಾ 
ನಿನ್ನಿಂದಿಲೇ ಅವಕೆ ಹೊಸ ಬಣ್ಣ ಬಂತಾ?

ಕಾದೆ ಯಾರಿಗಾಗಿ ಹೀಗೆ ನೋಡೆಯಾ ನೀನು

ಕಾದೆ ಯಾರಿಗಾಗಿ ಹೀಗೆ ನೋಡೆಯಾ ನೀನು

ಕೂಡಿ ಸಾಗುವಾಗ ಒಂಟಿಯಲ್ಲ ನೀನಿನ್ನೂ
ಏನು ಹೇಳಬೇಕೋ ಎಲ್ಲ ಹೇಳು ನನ್ನಲಿ
ಈ ಮೌನವೇಕೆ ಅಂಜುವೇಕೆ ಬಾಳಲಿ ಹೋ
ಏಕಾಂಗಿಯಲ್ಲ ನಿನ್ನ ಜೋಡಿ ನಾನಿನ್ನೂ...

ಕಲಿಸಿಕೊಡಲೇನು, ಮುಗುಳುನಗುವನ್ನು
ಮರೆತಂತೆ ನಕ್ಕು ನೋಡು ಸುಮ್ಮನೆ
ಎದೆಯ ಬದಿಯಲ್ಲೇ, ಇರಿಸು ನನ್ನನ್ನು
ನಾನಿರಲು ನಿನಗೆ ಏಕೆ ಯೋಚನೆ
ತೇಲಾಡೋ ಮೋಡ ಕೂಡ ಪ್ರೀತಿ ಹಂಚಿದೆ
*ಮಳೆಯಲ್ಲಿ ಮಿಂದ ಭೂಮಿ ತುಂಬ ಕಂಪಿದೆ*
ಈ ದಾರಿಯಿನ್ನೂ ನಮ್ಮ ಎದುರು ನೋಡಿದೆ.. ಹೋ..
ಎಲ್ಲೆಲ್ಲೂ ನೋಡು ಚಿಗುರಂತೆ ಅನುರಾಗ...

ಎಂದೋ ಗುನುಗಿ ಮರೆತ ಹಾಡೊಂದ ನೆನಪಿಸುವೆ 
ನಿನ್ನ ನೆರಳ ತೊರೆದು ನೀನಾಗಿ ಹೇಗಿರುವೆ
ನೋಡು ಇರುಳ ಆಗಸ ತುಂಬ ತಾರೆಗಳ 
ವಿವಾದವೇನೂ ಮಾಡದ ಹಾಗೆ ಮಿನುಗುತಿವೆ
ಆಡೋರ ಮಾತು ಎಂದೂ ನೇರ ಮೂಡದು
ನೋಡೋರಿಗೆಲ್ಲ ನಿನ್ನ ಮನಸು ಕಾಣದು ಹೋ
ನಿನ್ನೆಲ್ಲ ಭಾರ ಹೆಗಲೇರಿಸು ಈಗ..

ಹೇಳು ನೀನೇ ಅಲ್ಲವೇ

ಹೇಳು ನೀನೇ ಅಲ್ಲವೇ

ನನ್ನ ಜೀವಕೆ
ರೆಕ್ಕೆ ನೀಡಿದೆ
ಕೇಳು ನನ್ನ ಕುಂಚವೇ
ನಿನ್ನ ಬಣ್ಣವೇ
ಕಣ್ಣ ತುಂಬಿದೆ 
ಮಾತಾಡು, ನೀ ಚೂರು
ಹಾಡಂತೆ ಮೈ ಮರೆತು ಕೇಳುವೆ
ಕಾಪಾಡು, ಕನಸನ್ನು
ನಿನ್ನಲ್ಲೇ ಅಡವಿಟ್ಟು ಕೂರುವೆ

ಪ್ರೀತಿಯ ಗಂಧವಿಲ್ಲದೆ
ಆಗಿತ್ತು ನನ್ನದು ಕಲ್ಲೆದೆ
ಆಳವಾಗಿ ನೀ ಆವರಿಸಿ
ಬೇರೂರಿಕೊಂಡೆ ಸುಳಿವಿಲ್ಲದೆ
ಏನೇನೋ ಬಯಕೆಗಳು
ಚಿಮ್ಮುತಿವೆ ಒಳಗೊಳಗೆ
ಜೊತೆಯಲ್ಲಿ ಇರುವಾಗ
ಕುಣಿಯುವೆನು ಪ್ರತಿ ಗಳಿಗೆ
ಕಾಡಿದಷ್ಟೂ ಇನ್ನೂ ಹೆಚ್ಚು ಬೇಕು ಅನಿಸಿದೆ
ಬೇಡಿಕೆಯನಿಟ್ಟು ಹೃದಯವು ಕಾಯುತಿದೆ
ಅದೃಷ್ಯವಾಗ ಬೇಡ
ಇನ್ನೇನು ಹೇಳ ಬೇಡ
ಸಮೀಪದಲ್ಲೇ ಇದ್ದೂ ಇಲ್ಲದಂತೆ ನಿಲ್ಲಬೇಡ

ಎಷ್ಟು ಮುದ್ದು, ನಿನ್ನ ಮಾತು

ಎಷ್ಟು ಮುದ್ದು, ನಿನ್ನ ಮಾತು

ಅದರ ಅರ್ಥ, ನನಗೇ ಗೊತ್ತು
ನಗುವ ಸದ್ದು, ನನ್ನ ಸ್ವತ್ತು
ಮೌನವಂತೂ, ಚಂದ ಗುಟ್ಟು
ಹೇಳದೇನೆ ಮನದ ಎಲ್ಲ ಆಸೆ ತಿಳಿಯಿತೇನು?
ನನ್ನ ಪ್ರೀತಿಯಂತೆ ಚಿಗಿರಿದಂಥ ಹೂವು ನೀನು
ಬೆರಳ ಹಿಡಿದು ಬಾಳ ರೂಪಗೊಳ್ಳಿಸೋಣವೇನು
ನಿನ್ನ ಮೊದಲ ಸಾಲು ನಾನು, ನನ್ನವೆಲ್ಲ ನೀನು

ಏನು ಸೊಬಗ ಕಂಡೆ ನನ್ನ ನೆರಳಿನಂತೆ ಬರುವೆ
ಕಹಿ ಎದೆಯ ಸೀಳಿ ಜೇನ ಜಾಡು ಹಿಡಿದ ಇರುವೆ

ತೋಚಿದಂತೆ ಆಡಿಕೊಂತ ಆಯ ತಪ್ಪಿ ಬೀಳುವೆ
ಎತ್ತಿ ಕುಣಿಸಿದಾಗ ಏನು ಆಗದಂತೆ ಚೀರುವೆ
ಯಾವ ಪುಣ್ಯ ಫಲವೋ ನನಗೆ ಸಿಕ್ಕೆ ನೀನು ಭಾಗ್ಯವೇ
ಏನೇ ಬರಲಿ ನಾನು ನಿನ್ನ ಕಾವಲಾಗಿ ನಿಲ್ಲುವೆ
ಸದ್ದು ಮಾಡಲು. ದೊಡ್ಡ ತಪ್ಪದು
ನಿದ್ದೆಗೆಡಿಸಿದೆ, ಶಿಕ್ಷೆ ತಪ್ಪದು
ಮತ್ತೆ ಆಗಲಿ ಜೋರು ಕಾಳಗ
ಮನದ ಗದ್ದುಗೆ ಎಂದೆಂದೂ ನಿನ್ನದು

ಮಾಯಾವಿಯೇ, ಮಾಯಾವಿಯೇ

ಮಾಯಾವಿಯೇ, ಮಾಯಾವಿಯೇ

ಮಾಯಾವಿಯೇ ಮನ ಮಾತಾಡೆಯಾ?
ಮಾಯಾವಿಯೇ, ಮಾಯಾವಿಯೇ
ಮಾಯಾವಿಯೇ ಮನ ಮಾತಾಡೆಯಾ?
ಈ ದಾರಿ ಕಣ್ಣೆದುರಾಗೋ ಸೋಜಿಗದಂತೆ
ನೀನೊಮ್ಮೆ ನನ್ನೆದುರಲ್ಲಿ ಬಾರೆಯಾ?
ಆಕಾಶ ಅಂಕೆ ಮೀರಿ ಸಾಗುವ ಆಸೆ
ನಿಂತಲ್ಲೇ ನಿಂತು ಮಾಯಾವಿ ನೀ ಸೋತೆಯಾ?
ಸಂಗಾತಿಯೇ, ಒಂದಾಗು ಬಾ
ಸಂಗಾತಿಯೇ ಜೊತೆ ನೀ ಸಾಗು ಬಾ
ಮಾಯಾವಿಯೇ, ಮಾಯಾವಿಯೇ
ಮಾಯಾವಿಯೇ ಮನ ಮಾತಾಡೆಯಾ

ಬರಿದೆ ಕನಸು ಸಾಕಾಗಿದೆ
ಬಿರಿದ ಬದುಕು ನೀನಿಲ್ಲದೆ
ಕೋಮಲೇ.. ಓ ಕೋಮಲೇ
ಗಡಿಯ ಅಳಿಸಿ ನಾ ಕಾದೆನು
ಹೃದಯ ಕೊಡದೆ ನಾ ಹೋಗೆನು
ತಾಕು ಬಾ, ನೀ ಕೂಡಲೇ...

ಯಾರೂ ಇಲ್ಲದ ಊರಲಿ ಸುಮ್ಮನೆ

ಯಾರೂ ಇಲ್ಲದ ಊರಲಿ ಸುಮ್ಮನೆ

ಭೇಟಿ ಆಗೋಣವೇನು ಮೆಲ್ಲನೆ
ಸುತ್ತ ಮುತ್ತಲು ಅರಳಿದ ಹೂಗಳು
ನಾಚಿ ನಿಲ್ಲಲಿ ನೋಡುತ ನಮ್ಮನೇ
ಜರುಗಲಿ ಮಾತು ಕತೆ ಒಂದು ನೂರು ಸಾರಿ
ಸೋತು ನಿಂತ ಹಾಗೆ ಬಾರಿ ಬಾರಿ
ಸತಾಯಿಸಿ ಬರೋ ಮಳೆಯ ಹಾಗೆ
ಮುತ್ತ ಕೊಡು ಒಮ್ಮೆ ಮನಸಾರೆ...

ನದಿಯ ದಂಡೆಯ ಮೇಲೋ

ನದಿಯ ದಂಡೆಯ ಮೇಲೋ

ಚಹದ ಅಂಗಡಿಯಲ್ಲೋ
ನಾವೆಲ್ಲಿ ಎದುರಾಗುವ?
ಕಂದೀಲು ಹಚ್ಚಿದೆ
ಲೋಕ ಎಚ್ಚೆತ್ತಿದೆ 
ಹೃದಯಕ್ಕೆ ಬಿಡುವಿಲ್ಲವಾ?
ಇಳಿ ಸಂಜೆ ವೇಳೆ
ಕಿಟಕಿಗೆ ವಾಲಿ
ಅರೆಗಣ್ಣು ಮುಚ್ಚುತ್ತಿರೆ
ಪುಟಿದಂತೆ ಸಣ್ಣ
ಕನಸೆಂಬ ಮಾಯೆ
ಬೆರಗಂತೆ ನೀ ಕಂಡರೆ

ಸುತ್ತಲೂ ಕೊನೆಗಾಣದ ಗದ್ದಲ
ನಿನ್ನನೇ ಸದಾ ಆಲಿಸೋ ಹಂಬಲ

ನಮ್ಮುಸಿರ ನಡುವೆ
ಬೆಸೆದು ರಾಗವ
ಹೊಸ ಬಾಳನ್ನು ಹೊಸೆಯೋಣವೇ


ಬೇಡ ಮುಡಿಗೆ ಹಣಿಗೆ
ರಂಗೇಕೆ ತುಟಿಗೆ
ಸಿಂಗಾರ ಹೊರೆ ಮಯ್ಯಿಗೆ
ಅನುಮಾನಿಸೋಕೆ
ಅಲ್ಲಾರೂ ಇಲ್ಲ
ನಾವಿಬ್ಬರೇ.. ಇಬ್ಬರೇ...
ಸಖಿಯೇ... ಸಖಿಯೇ...
ಅಲ್ಲೇನೇ ನಮ್ಮ ನೆಲೆ
ಸಲ್ಲದ ಈ ಭೂಮಿಯು
ಸಾಕಾಗಿದೆ ಅಲ್ಲವೆ?

ಸಮಯ ತುಸು ಮೆಲ್ಲ ಈ ಲೋಕದಿ
ಸಾಗಿದೆ ಪ್ರತಿಯೊಂದು ಕ್ಷಣ ಮೋಹದಿ..

ನಮ್ಮುಸಿರ ನಡುವೆ
ಬೆಸೆದು ರಾಗವ
ಹೊಸ ಬಾಳನ್ನು ಹೊಸೆಯೋಣವೇ

ಎಷ್ಟು ಬಣ್ಣಿಸಬಹುದು ನೀ ಹೇಳು?

ಎಷ್ಟು ಬಣ್ಣಿಸಬಹುದು ನೀ ಹೇಳು?

ಕಲ್ಪನೆಗೂ ಮೀರಿದ ಚೆಲುವನ್ನು
ಕೆನೆಗಟ್ಟಿದ ಕನ್ನೆ ಗುಳಿಯಲ್ಲಿ
ಮನ ಸೋಲಿಸೋ ಗುಣದ ಕೆಮ್ಮಣ್ಣು

ಬಳೆಗಿಟ್ಟ ಲೆಕ್ಕವದು ಎಷ್ಟೆಂದು
ಮೊದಲಿಂದ ಎಣಿಸುವ ಉತ್ಸಾಹಿ
ನೋಡುತ್ತಾ ಕುಳಿತರೆ ಜಗವನ್ನೇ
ಮರೆಯುತ್ತ ಆದೆ ನಾ ವ್ಯಾಮೋಹಿ

ಯಾರಿಗೇನಾದರೆ ನಿನಗೇನು
ನಿನ್ನದೇ ಲೋಕದಲಿ ನೀನರಲು
ರಿಂಗಣಿಸಿ ಬಂದಂತೆ ಸಿಹಿ ಗಾಳಿ
ಅಪ್ಪಳಿಸಿ ಕುಣಿದಿವೆ ಮುಂಗುರುಳು

ತಾಳು ಏನಾಯಿತೋ ನೋಡೋಣ
ತುಟಿ ಮೇಲೆ ಚಂದಿರನ ನಗೆ ಜೊನ್ನು?
ಕಣ್ಣು ಮಿಟುಕಿಸಿದಲ್ಲಿ ಮಿಂಚೊಂದು
ಪಾಳಿ ಮುಗಿಸಿ ಮರಳಿ ಬಂತೇನು?

ಮುಂಗುಟವ ಎಳೆ ತಂದು ಕಚ್ಚಿದರೆ
ನಾಚುವುದು ನೆಲವೆಲ್ಲ ನೋಡಿಲ್ಲಿ
ನಿನ್ನುಸಿರ ಬಿಸಿ ತಾಕಿದಾಗೆಲ್ಲ
ಸೂರ್ಯಕಾಂತಿಯ ಸುಗ್ಗಿ ಎದೆಯಲ್ಲಿ

ಬಂಗಾರವ ತೊಟ್ಟ ಬಂಗಾರ
ಸಿಂಗಾರ ಯಾರಿಗಾರು ಹೇಳು?
ನಿನ್ನಾಟಕೆ ಕಾದಿದೆ ಮಗಳೇ
ಮುನಿಯಪ್ಪ ತಾತನ ಊರ್ಗೋಲು!

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...