Thursday, 16 October 2025

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ನೀ ಖಂಡಿತ ಈ ಗ್ರಹದವಳಲ್ಲ
ನಕ್ಷತ್ರಗಳ ಊರು? ಬಂಗಾರದ ಸೂರು?
ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ

ಆಗೋ ಆ ಹಣೆಯಲ್ಲಿ ಬೆವರು ಜಿನುಗೆ
ಎಷ್ಟು ನಳನಳಿಸುತ್ತಿದೆ
ತಂಗಾಳಿ ನಿನ್ನತ್ತ ಬೀಸಿ ಬಂದಿದೆ ತಾಳು
ನೀ ಒರೆಸುವ ಪ್ರಯಾಸ ಪಡಬೇಕಿಲ್ಲ

ಕಣ್ಣಂಚಿಗೆ ತೀಡಿದ ಕಾಡಿಗೆಯಿದೆಯಲ್ಲ
ಅದರ ಒಂದಂಶ ಇನ್ನೂ ಕಿರುಬೆರಳ ಅಂಚಿನಲಿ 
ಪಾಲು ಕೇಳುತ ಮಿಕ್ಕ ಬೆರಳುಗಳು
ತಹತಹಿಸಿದಂತೆ ಕುಣಿದಿವೆಯಲ್ಲ!

ಎಲ್ಲಿ, ಒಮ್ಮೆ ನಗದಂತೆ ಮೊಗವೊಡ್ಡು
ಇಲ್ಲ, ಅದು ಸಾಧ್ಯವೇ ಇಲ್ಲ
ನೀನೇ ಬೇಕೆಂದು ಕೇಳಿ ಪಡೆದಂತಿದೆ
ನಗುವು ನಿನ್ನ ಸಹಜ ನಗ, ಹೌದಲ್ಲ?!

ಬಿಡು, ನಿನ್ನ ಹೊಗಳದ ದಿನವಿಲ್ಲ
ಶುರುವಾಗಿಸಲು ಕೊನೆಯಿಲ್ಲ
ಹಸಿವಿಲ್ಲ, ಕಸುವಿಲ್ಲ, ಕಸುಬಿಲ್ಲ
ಮತ್ತೇನಿಲ್ಲ, ನೀನಿರದೆ ನಾನಿಲ್ಲ!

ಏನನ್ನೂ ಹೇಳದೆಲೆ

ಏನನ್ನೂ ಹೇಳದೆಲೆ 

ಯಾವ ಮಾತು ಆಡದೆಲೆ
ನೋಡುತ್ತ ನಿಲ್ಲುತಲೇ
ಹಾಡಲೇನು ನಿನ್ನ ಮೇಲೆ
ಆ ನಿನ್ನ ನೋಟದಲೇ
ಮಾಯ ಬಲೆ ಬೀಸುತಲೇ 
ಗೀಚಿಟ್ಟೆ ಒಂದು ಓಲೆ
ಪ್ರೀತಿಯಲ್ಲಿ ಬೀಳೋ ವೇಳೆ
ಇದ್ದ ಕಡೆಯೇ ಮನಸು ಕೋಟ್ಟೆ ನಾ.. ಆ ಆ ಆ
ಹಾದು ಹೋದೆ ನೀನು ಸೋಕುತ್ತ ನನ್ನನೇ
ನೀ ಬೀಸಿ ಹೋದ ಗಾಳಿಯಲ್ಲೇ
ತೇಲಿ ಹಾರೋ ಆಸೆ ಬಂತು
ಏನು ಮಾಡಲಿ, ಹೇಗೆ ತಾಳಲಿ
ನೀ ಬೀಸಿ ಹೋದ ಗಾಳಿಯಲ್ಲೇ
ತೇಲಿ ಹಾರೋ ಆಸೆ ಬಂತು
ಹಾರ ಬೇಕು ನಾ, ನಿನ್ನ ಜೊತೆಯಲಿ...

ಏನೋ ಹೇಳ ಬಂದೆ ನೀನು ನನ್ನಲಿ

ಏನೋ ಹೇಳ ಬಂದೆ ನೀನು ನನ್ನಲಿ 

ಎಲ್ಲ ಬಿಡಿಸಿ ಹೇಳು ಅರ್ಥವಾಗಲಿ 
ಇದೇ ಹೊಸ ಥರ, ಎದೆ ಸುಡೋ ಜ್ವರ 
ನೀನಾಗೇ ಹೇಳು ಹೇಗೆ ಎಲ್ಲ ತಾಳಲಿ 
ಊರಿನೊಂದಿಗೆ ಎದುರಾಗುವೆ 
ನಿನ್ನ ಗೆಲ್ಲಲು ಹೋರಾಡುವೆ 
ಏನಾದರೇನು ನಾ ನಿನ್ನ ಕಾಪಾಡುವೆ 

ಮೇಣದಂತೆ ಕರಗಿ ಹೋಗಲೇನು 
ಕೋಪದಿ ನೀ ನೋಡುವಾಗ 
ತ್ರಾಣವನ್ನೇ ಕಳೆದುಕೊಂಡ ಹಾಗೆ 
ಮೆಲ್ಲನೆ ನೀ ಸೋಕಿದಾಗ 
ಬರಿ ಸನ್ನೆಯಲ್ಲೆ ಕರೆವಾಗ ಬಾಲೆ 
ವಾಲಬೇಕು ತೋಳಿನಲ್ಲಿ ಕೂಡಲೇ 
ಕೂಡು ಬಾ ಕೂಡಲೇ 
ಯಾರೇ ಬಂದರೂ ನಿನ್ನ ಸಮ 
ಆಗಲಾರರು ನೀನೇ ರಮಾ 
ಕೊಂಡಾಡಲೇನು ನಾ ನಿನ್ನನು ಓ ಸುಮ..

ಒಮ್ಮೆ ನಿನ್ನ ಹೆಸರ ಕೂಗಿದಾಗ 
ದೊರೆಯಿತು ಹಗುರಾದ ಭಾವ 
ನಗೆಯ ಬಲೆಗೆ ನಾ ಜಾರಿದಾಗ 
ಖುಷಿಯಲಿ ಹೋದಂತೆ ಜೀವ 
ಬೆರಗಾಗುವಂತೆ ಪ್ರತಿಯೊಂದು ವೇಳೆ 
ಕಣ್ಣ ಮುಂದೆ ನಿನ್ನ ರೂಪ ತಾಳಲು 
ಮರೆತೆ ಮಾತಾಡಲು 
ನಿನ್ನ ಧ್ಯಾನವೇ ಎಲ್ಲ ಕ್ಷಣ 
ಎದುರುಗೊಳ್ಳುತ ನೀ ತಕ್ಷಣ 
ಬಾ ಪಟ್ಟವೇರಿಕೋ, ನಿನದೇ ಜೀವನ..

ನನ್ನ ತುಂಬೆಲ್ಲಾ ಬರಿ ನೀನೇ ನೀನು

ನನ್ನ ತುಂಬೆಲ್ಲಾ ಬರಿ ನೀನೇ ನೀನು 

ನನ್ನ ತುಂಬೆಲ್ಲಾ ಬರಿ ನೀನೇ ನೀನು 
ಹೀಗೆ ಬಂದು ಹಾಗೆ ಹೋಗೋ ಆಟ ಬೇಡ (೨)
ನನ್ನ ತುಂಬಾ.. ನನ್ನ ತುಂಬಾ 
ನಿನ್ನ ಬಿಂಬ.. ಓ..

ನಿದ್ದೆಗಣ್ಣಲ್ಲೂ ನಿನ್ನದೇನೇ ಧ್ಯಾನ 
ಬಿಟ್ಟು ಹೋದಾಗ ತಾಳೋದಿಲ್ಲ ಪ್ರಾಣ 
ನಿನ್ನ ಮಾತಲ್ಲಿ ನನ್ನದೊಂದು ಮೌನ 
ಕೇಳಬೇಕು ನೀನು ಮಾಯವಾಗೋ ಮುನ್ನ 

ಒಂದು ಮಾಡೋದು ದೂರವಾಗಿಸೋಕಾ?
ಕಾಲ ನೀನಿಷ್ಟು ಕ್ರೂರಿಯಾಗಬೇಕಾ?
ಪ್ರೀತಿ ಮಾಡೋಕೆ ಒಂದೇ ಜನ್ಮ ಸಾಕಾ?
ಇನ್ನೂ ಒಂದು ನೂರು ಜನ್ಮವಾದ್ರೂ ಬೇಕಾ?

ಹುಡುಕಿ ನಾ ಹುಡುಕಿ

ಹುಡುಕಿ ನಾ ಹುಡುಕಿ 

ಬಂದಿರುವೆ ನಿನ್ನುಡುಕುತ್ತಾ 
ಏನೂ ಹೇಳದೆ ಹೋದೆ 
ಮಾಯವಾಗುತ್ತಾ 
ಬುದ್ಧಿ ಇಲ್ಲದ ಹಾಗೆ 
ನಾ ನಿಂತೇ ಹೀಗೆ 
ಹೃದಯಕ್ಕೆ ಗಾಯಾನಾ 
ಮಾಡಬೇಕಿತ್ತಾ?
ಬೇಕಾ ಬೇಕಾ ಈ ಪ್ರೀತಿ ಬೇಕಾ?
ಸಾಕಾ ಸಾಕಾ ಈ ಪಾಡು ಸಾಕಾ?

ಇದ್ದೆ ಹೇಗೋ ನನ್ನಷ್ಟಕ್ಕೆ ನಾ ನೆನ್ನೆ 
ಭೇಟಿಯಾಗಿ ದೋಚಿದೆ ಮನಸನ್ನೇ 
ಒಂದು ಬಾರಿ ಬಂದು ನೋಡೆ, ಮಾತನಾಡೆ 
ಮುತ್ತನೊಮ್ಮೆ ನೀಡಿ ನೋಡೆ 
ಒಂದುಗೂಡಿ 
ನಾವೆಲ್ಲ ಕಡೆ ಸುತ್ತಿ ಬರುವ 
ಸಂತೆಯಲ್ಲೂ ಕೈಯ್ಯ ಹಿಡಿವ 
ಯಾರು ನೋಡಿದರೆ ಏನು ಪ್ರೀತಿಸುವ..

ಏನೆಂದು ಹೇಳಲಿ ಈಗ

ಏನೆಂದು ಹೇಳಲಿ ಈಗ

ಮಾತೆಲ್ಲ ಮಾಯವಾದಂತೆ 
ಹೀಗೆಂದೂ ಆಗಿಯೇ ಇಲ್ಲ 
ಈಗೀಗ ಎಲ್ಲ ನಿನ್ನಂತೆ 
ನಿನ್ನಿಂದ ಆದೆ ಬಲಹೀನ 
ಹೃದಯಕ್ಕೆ ಗಾಯವಾದಂತೆ 

ಇರುವ ಕಡೆಯಲ್ಲೇ ನಾ ಮೈಯ್ಯ ಮರೆಯುವೆ 
ಯಾಕೆಂದು ತಿಳಿಯದೆ
ನಾ ತಿಳಿಯದೆ ನಿಲ್ಲುವೆ 
ಇರುವ ಕಡೆಯಲ್ಲೇ ನಾ ಮೈಯ್ಯ ಮರೆಯುವೆ 
ಆ ಅರಳಿದ ಕೆಂದಾವರೆ ನಗುವಲಿ 
ಹುಡುಕೋಕೂ ಮುನ್ನ ನೀನಿರು..

ನದಿಗಳನು ಯಾರೂ ತಡೆಯೋಕೆ ಆಗದು 
ಹಾಗೆ ಈ ಒಲವಿದು
ನಮ್ಮೋಲವಿದು ಸೋಲದು 
ನದಿಗಳನು ಯಾರೂ ತಡೆಯೋಕೆ ಆಗದು 
ಬಾ ಮುಗಿಲಾಚೆ ಹಾರೋಣ ಈ ಕ್ಷಣದಲ್ಲಿ 
ಮರಳೋದು ಬೇಡ ಎಂದಿಗೂ…

ಮರೆಯಲಿ ಹೇಗೆ ಪ್ರಿಯೆ

ಮರೆಯಲಿ ಹೇಗೆ ಪ್ರಿಯೆ 

ಮನದಾಳ ನಿನ್ನ 
ರೂಪ ತಾಳಿರುವೆ 
ಬರೆಯುವ ಬಾ ಬೇಗನೆ 
ಹೊಸ ಸಂಚಿಕೆ 
ಏಕೆ ಕಾಯಿಸುವೆ?
ಮನದನ್ನೆ.. ಬಿಟ್ಟಿರಲಾರೆನು ನಾನು 
ಕ್ಷಣವೂ ನಿನ್ನನು 
ಒಲವನ್ನೇ.. ಬೇಡಿದೆ ಜೀವವು ಬೇರೆ 
ಬಯಸದೇನನೂ 
ಕಳುವಾಗಿ ಹೋಗಿರುವೆ 
ನೀನಾಗೇ ದಾರಿ ತೋರು…

ಹೆಚ್ಚಾಗಿದೆ ಹಂಬಲ 
ಹೇಳು ಏನು ಮಾಡಲಿ ನಾನೀಗ 
ನಿವಾರಿಸು ಗೊಂದಲ 
ನೇರ ನೇರ ಭೇಟಿ ಯಾವಾಗ?
ಆಸೆಗೆ ರೆಕ್ಕೆ ಬಂದು 
ಹಾರುವುದ ಕಲಿತೆ ನೋಡು 
ನಿನ್ನಾಸೆಗೂ ಹಾರಾಡಲು 
ಅನುಮತಿ ಬೇಗನೆ ಕೊಡು.. ಕೊಡು..

ನಿರಂತರ ಓಡುವ 
ಕಾಲವನ್ನು ಒಮ್ಮೆ ಕೇಳೋಣ
ಈ ದೂರವು ಇನ್ನಾದರೂ 
ದೂರ ಮಾಡದಂತೆ ಕೋರೋಣ 
ಲೋಕದ ನಿಯಮವ 
ಮುರಿವುದೇ ಪ್ರೀತಿಯ ನೇಮ 
ಅನುಗಾಲಕೂ ಅರಳಲಿ 
ನಮ್ಮ ಪಾಲಿಗೊಲಿದ ಪ್ರೇಮ.. ಪ್ರೇಮ..

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ

ಈ ಬಿರು ಬಿಸಿಲಲ್ಲೂ ಕಂಗೊಳಿಸುವೆಯಲ್ಲ ನೀ ಖಂಡಿತ ಈ ಗ್ರಹದವಳಲ್ಲ ನಕ್ಷತ್ರಗಳ ಊರು? ಬಂಗಾರದ ಸೂರು? ಅಷ್ಟಲ್ಲದೆ ನಿನ್ನ ಹಾಗೆ ಕಾಣುವವರಿಲ್ಲ ಆಗೋ ಆ ಹಣೆಯಲ್ಲಿ ಬೆವರು ಜಿನು...