Friday 15 March 2013

ಗುಳ್ಳೆ ಪಟಾಕಿ (ಮೌನ ಮುರಿದ ಪುಟಾಣಿ ಸದ್ದು)






ಹಾಲ ಬಟ್ಟಲ ತುಂಬು ಅದ್ದಿಗೆ, ಮಿಂದು ಎದ್ದ ಮುದ್ದು ಕೂಸೇ
ಎತ್ತಿ ನಿನ್ನ ಅಪ್ಪಿಕೊಂಡು ಬಿಡದೆ ಹಾಗೆ ಮುದ್ದಾಡುವಾಸೆ
ಕತ್ತಲಲ್ಲಿ ತುಂಬು ಚಂದಿರ, ಬೆಳಕಿಗೆ ನೀ ನೆರಳ ಮಿತ್ರ
ಕಲಾರಾಧಕ ತಪಿಸಿ ಬಿಡಿಸಿದ ವರದ ರೂಪಕ ನಿನ್ನ ಚಿತ್ರ  ।೧।

ಹೆಣೆದ ಸಾಲಿಗೆ ಒಲಿದ ಭಾವನೆ, ನಿನ್ನ ಪುಟ್ಟ ಕಣ್ಣುಗಳ ಕಂಡು
ನಾನೂ ಮಗುವಾಗುವಾಸೆ ನಿನ್ನ ಮೂಖ ಭಾಷೆಯ ಕಲಿತುಕೊಂಡು
ಅತ್ತು ಜಾರಿಸಬೇಡ ಕಂಬನಿ ಮುತ್ತುಗಳು ಮುನಿದಾವು ಪಾಪ
ಮಲಗೋ ಮುನ್ನ ಹಠವ ಮಾಡಿ ತರಿಸು ಜನನಿಗೆ ಕೊಂಚ ಕೋಪ  ।೨।

ಬೇಗ ಬಲಿತು, ಮಾತು ಕಲಿತು, ಕರೆಯೋ ನನ್ನ "ಮಾಮಾ" ಎಂದು
ಖಾಲಿ ಪುಟಗಳು ತೆರೆಯುವುದು ಆಗ ಅಮೃತಾಪದ ರಚಿತಗೊಂಡು
ನಿನ್ನ ಕಾಂತಿ ಹೆಚ್ಚಿಸಲಿ ವಾತಾವರಣದ ಮಂದ ಹೊಳಪ
ಕಿಸೆಯ ತುಂಬಲಿ ನಿನ್ನ ಬಾಳನು ಚಂದಗೊಳಿಸೋ ಹೊನ್ನ ಬಳಪ  ।೩।

ಪುಟ್ಟ ಹೆಜ್ಜೆಯನಿಟ್ಟೆಡೆ ನೀ ಬಿಟ್ಟ ಪಾದ ಗುರುತುಗಳೂ ಕೂಡ
ನಿನ್ನ ಹಿಂದೆಯೇ ಬರುವುದೇನೋ, ಹಿಂಬಾಲಿಸುವಂತೆ ಮೋಡ
ಕೊಟ್ಟ ಆಟಿಕೆ ಕೆಡವಿ ಮತ್ತೆ ಹೊಸ ಬೇಡಿಕೆ ಇಟ್ಟು ನೋಡು
ಮೌನವಹಿಸಿಯೂ ಸ್ಪೂರ್ತಿಯಾಗು ಹೊಮ್ಮಿಸಲು ಅನನ್ಯ ಹಾಡು  ।೪।

ಶಿಳ್ಳೆ ಹಾಕಿ ಚೀರು ಸಿಡಿಸಿ ಮನೆಯ ತುಂಬ ಗುಳ್ಳೆ ಪಟಾಕಿ
ಪ್ರಶಾಂತತೆಯ ನಡುವೆ ಪರಿಚೆಯಿಸು ರಮಿಸುವ ನಗೆ ಚಟಾಕಿ
ಕೊಟ್ಟ ಉತ್ತರ ನನ್ನದು, ಕೂಡಿಟ್ಟ ಪ್ರಶ್ನೆ ನಿನ್ನದು
ನಿನ್ನ ಗೆಲ್ಲಿಸುವ ಸಲುವೇ ಬೇಡಿ ಪಡೆಯುವೆ ಸೋಲಿದು.......... ।೫।


                                                                      -ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...