ಜುಮುಕಿ ಕೊಡಲು ಹೋಗಿ

ಇರುಳ ಸಂತೆಯ ನಡುವೆ
ಕಳೆದೆ ವಜ್ರದ ಜುಮುಕಿ
ಒಂಟಿ ಜುಮುಕಿಯ ಗೋಳು ಕೇಳದೇನೆ ?
ಕುಂಟು ನೆಪಕೆ ನನ್ನ
ಮನದಲ್ಲೇ ನೆನೆದವಳು
ಇಂಥ ಹೊತ್ತಲಿ ನೆನಪು ಬಾರೆನೇನೇ?


ನೆರಳ ಸದ್ದಿಗೆ ಬೆಚ್ಚಿ
ಮನದ ಕಣ್ಣನು ಮುಚ್ಚಿ
ಯಾವ ದೇವರ ಬೇಡಿ ಕೂತೆ ನೀನು;
ನಿನ್ನ ಹೆಜ್ಜೆಯ ಗುರುತು
ಮಾತು ಬಿಟ್ಟಿವೆ ಈಗ
ಯಾರ ಕೇಳಲಿ ನಿನ್ನ ಕುರಿತು ನಾನು?

ತುಂಬು ಹುಣ್ಣಿಮೆಯಲ್ಲ
ಲಾಂದ್ರ ತರಲೂ ಇಲ್ಲ
ಮೌನ ಜಾಡನು ಹಿಡಿದು ಏಷ್ಟು ದೂರ?
ಹೆಸರ ಜಪಿಸಿ ಜಪಿಸಿ
ಮರೆತೆ ಸುಳುವಿನ ತಿರುವು
ಮುಚ್ಚಿ ಹೋದವು ಎಲ್ಲ ದಿಕ್ಕು ದ್ವಾರ!!

ಎಷ್ಟು ಮುತ್ತುಗಳಲ್ಲಿ
ಪೋಲಾಗಿ ಹೋದವೋ
ರೆಪ್ಪೆಗೊಂದು ಲೆಕ್ಕೆ ಇಡಲು ಹೇಳು;
ತಡ ಮಾಡಿ ಬರುವೆ ನಾ
ತಲುಪಿ ಹೇಗಾದರೂ
ತುಟಿಯ ಒತ್ತಿ ನನ್ನ ಮಾತು ಕೇಳು!!

ಕಿಸೆಯಲ್ಲಿ ಬಚ್ಚಿಟ್ಟ
ಕಳೆದ ಜುಮುಕಿಯನು
ಕಿವಿಗೊಟ್ಟು ಏರಿಸಿಕೋ ಗುಟ್ಟಿನಂತೆ;
ಕಚ್ಚುವೆ ಕೆನ್ನೆಯನು
ಸವರಿ ಸಾರಿಸಿ ಹಾಗೆ
ಸಿಟ್ಟಾಗು ನಸು ನಗುತ ಮಗುವಿನಂತೆ!!

                              -- ರತ್ನಸುತ

Comments

  1. 5*
    ಮನಸು ಎಲ್ಲೋ ಕಳೆದು ಹೋಯಿತು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩