ನಾನ್ವೆಜ್ ಲವ್ ಸ್ಟೋರಿ

ಬಿಸಿಲಲ್ಲಿ ಬೆವರುತ್ತ ಮೂಳೆ ಕಡಿವುದೂ
ಒಂದು ರೋಮಾಂಚಿತ ಅನುಭವ;
ಒಂದು ಕಡೆ, ಬೆವರ ಒರೆಸುವುದೋ?
ಮತ್ತೊಂದು ಕಡೆ, ತುಂಡ ಮುಗಿಸುವುದೋ? ಎಂಬಲ್ಲೇ
ಅದೆಷ್ಟೋ ದಿನದ ಹಸಿವ
ಬಾಕಿ ಉಳಿಸಿಕೊಂಡೇ ಹೊಟ್ಟೆ ತುಂಬಿತೆಂದು
ಎದ್ದು ಹೊರಡುವ ವೇಳೆ
"ಅಬ್ಬಬ್ಬಾ ಎಂಥ ಬಿಸಿಲು" ಎಂಬ ಉದ್ಗಾರ!!

ಇದೆಲ್ಲ ಒಂದು ದೊಡ್ಡ ವಿಷಯವೇ? ಅನ್ನುವ ಮೊದಲು
ಬಾಡಿಗೆ ಉಪ್ಪು-ಖಾರ ಹದವಾಗಿ ಬೆರೆತಿತ್ತೋ, ಇಲ್ಲವೋ?
ಎಂದು ಕೇಳುವ ಮಾನುಷ್ಯರಾಗಿ,
ಜಿಡ್ಡು ಕೈಗೆ ನೀರು ಕಾಯಿಸಿ,
ತಾಂಬೂಲ ಸಿದ್ಧಪಡಿಸಿ;
ಆನಂತರ ನಿಧಾನಕ್ಕೆ ಕೂತು ನಮ್ಮ ಮಾತು!!

ಹಲ್ಲ ಸಂದಿಗೆ ಚುಚ್ಚುಗಡ್ಡಿಯ ಗತಿಯಿಲ್ಲ,
ಮನೆಯಲ್ಲಿ ಪೊರಕೆಗೂ ಬಡತನವೇ?
ಈ ಹಾಳು ಗ್ಯಾಸು ಬೇರೆ
ಚಿಲ್ಲಿ ಚಿಕನ್ನಿಗೆ ಚಿಲ್ಲಿ ಹಾಕಿಲ್ಲವಾಗಿದ್ದರೆ ಚಂದಿತ್ತು!!

ಸುಣ್ಣ ಸುಟ್ಟ ನಾಲಗೆ ಈಗ
ಕೆಂಪು ಲಂಗ ತೊಟ್ಟ ಕನ್ನಿಕೆಯಂತೆ;
ಏನು ತುಟಿ ಮರೆಗೆ ಇಣುಕಿಸುವುದೋ
ಓರೆಗಣ್ಣಲಿ ಕಂಡು ನಾಚುವುದೋ!!
ಒಳ್ಳೆ ಕೆಂಪನೆ ಹೆಂಡತಿ ಸಿಗುತಾಳಂತೆ ನನಗೆ
"ಅಂದೋರ ಬಾಯಿಗೆ ಸಕ್ಕರೆ ಹಾಕ!!"

ಹಸಿ ಗರಿ ಚಪ್ಪರದ ಚಾವಣಿ,
ಒರಗಿ ಮಲಗೋಕೆ ಸುಣ್ಣದ ಗೋಡೆಯಾದರೇನಂತೆ?
ನಿದ್ದೆ ಸಂಪನ್ನವಾದರೆ
ಮಿಕ್ಕಿದ್ದೆಲ್ಲ ಎಚ್ಚರಗೊಂಡ ನಂತರಕೆ;
ಗೆಜ್ಜೆ ಸದ್ದಿಗೆ ಮಾತ್ರ ನಿದ್ರಾಭಂಗವಾಗದಿದ್ದರೆ
ಕನಸಿನಲ್ಲೇ ಕೈ ಮುಗಿಯುತ್ತೇನೆ ಕಾಲಿಗೆ!!

ಮೈ ಮುರಿದರೆ ನೂರು ಲಟಿಕೆ ಸದ್ದು
ಕಣ್ಣೆದುರು ಕೆಂಗುಲಾಬಿ ಹೂಗಳು;
ಮುಳ್ಳಿನಷ್ಟೇ ಸೊಕ್ಕು, ಪಕಳೆಯಷ್ಟೇ ಮೃದು
ನನ್ನ್ನಷ್ಟೇ ಮಾಂಸ ಪ್ರಿಯ ಲಲನೆಯರು!!

ಮಲ್ಲೆ, ಮಸಾಲೆ ಘಮಲು ಒಟ್ಟೊಟ್ಟಿಗೆ,
ಎರಡಕ್ಕೂ ಮನ ಸೋತಿತ್ತು;
ಆದರೂ ಮತ್ತೊಂದು ಸರತಿ ಸಾಲಿನ ಮೇಲೇ
ಗಮನ ತುಸು ಹಿಚ್ಚಿತ್ತು!!

                                      -- ರತ್ನಸುತ

Comments

  1. ಗೆಳೆಯ. ಹೀಗೆಲ್ಲ ಬಾಯಲ್ಲ ನೀರೂರಿಸುವ ಬದಲು ಆಯೋಜಿಸಬಹುದಿತ್ತಲ್ಲ ಒಂದು ಭಾನುವಾರ ಬಾಡೂಟ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩