ಕೊನೆಯಲ್ಲದ ಕೊನೆಯಲ್ಲಿ

ನನ್ನ ಕನಸುಗಳ ಮೇಲೆ
ಮತ್ತಾರೋ ಸವಾರಿ ನಡೆಸುತ್ತಿದ್ದಾರೆ,
ಆಕೆಗೂ ಅದು ಇಷ್ಟವಿದ್ದಂತೆ
ಮನಸು ತುಂಬಿ ನಗುತ್ತಿದ್ದಾಳೆ;
ಅಲ್ಲಿ ನನ್ನ ಮಸಿಯಾದ ಬೆರಳುಗಳು
ಮುಖ ಮುಚ್ಚಿಕೊಳ್ಳುತ್ತಿದ್ದಂತೆ
ಬಿಗಿದ ಮುಷ್ಠಿ ನಿಶಕ್ತವಾಗಿತ್ತು,
ಇನ್ನೂ ಆ ಪಯಣ ಸಾಗುತ್ತಲೇ ಇತ್ತು!!

ಅದ ಗೆಳೆತನವೆಂದವರು
ಸಮರ್ಥನೆಗಳ ಕೊಡುತ್ತಿದ್ದಾರೆ;
ನನ್ನ ಸಮರ್ಥನೆಗಳೇ ಸೋತಿರುವಾಗ
ಮತ್ತಾರದ್ದನ್ನೋ ಹೇಗೆ ಒಪ್ಪಲಿ?

ಅವರು ಜೋಡಿಯಾಗಿ ಕಟ್ಟಿ
ಸಾಗಿಸುತ್ತಿದ್ದ ಹೂವ ಪಲ್ಲಕ್ಕಿ
ನನ್ನ ಮೂಗಿಗೆ ಬಡಿಸುತ್ತಿದ್ದದ್ದು
ನಂಜು ಮಿಶ್ರಿತ ಕಂಪು;
ಕುತ್ತಿಗೆ ಬಿಗಿದುಕೊಂಡರೂ ನಿಲ್ಲದೆ
ಹೃದಯಕ್ಕೆ ಸುದ್ದಿ ಮುಟ್ಟಿಸಿತು;
ಈಗ ಎಲ್ಲೆಲ್ಲೂ ಕಣ್ಣೀರು,
ಹಸ್ತಕ್ಕೆ ಚೂರು ಹೆಚ್ಚೇ ಕೆಲಸ!!

ಊಹೆಯಲ್ಲೂ ಧಿಕ್ಕರಿಸುತ್ತಿದ್ದ
ಅಗಲಿಕೆಯ ಸೂಕ್ಷ್ಮ ಭಾವಗಳು
ನಿಜ ಭಾರವಾಗಿ ಕುಗ್ಗಿಸುತ್ತಿವೆ;
ಈಗಲಾದರೂ ಎಲ್ಲವನ್ನೂ ಹೇಳಿಬಿಡಬೇಕು,
ಸಂವೇದನೆಗಳ ಮೂಟೆ ಬಿಚ್ಚಿಟ್ಟು;
ಆದರೆ ಮಾತು ಬಿಕ್ಕಳಿಸುತ್ತಿದೆ,
ಮತ್ತೆ ಆಕೆ ನಕ್ಕುಬಿಟ್ಟರೆ ಹುಚ್ಚನಾಗುತ್ತೇನೆ!!

ಕಣ್ಣು ಮೆಲ್ಲಗೆ ಚೆಲ್ಲಿದ
ಲವಣ ದ್ರವ್ಯವ ಚಪ್ಪರಿಸಿದ ನಾಲಗೆ
ತೊದಲು ನುಡಿಯಲ್ಲಿ
ಅವಳ ಹೆಸರ ಜಪಿಸುವಾಗ
ಕಾರ್ಮೋಡಕ್ಕೂ ಏನೋ ಭೀತಿ,
ಭೂಮಿ ತುಂಬೆಲ್ಲ ನನ್ನ ನೋವ ಗುರುತು!!

ಒಂಟಿ ಚಪ್ಪಲಿ ಧರಿಸಿ
ತುಂಬ ದೂರ ಓಡಿ ಬಂದಿದ್ದೇನೆ;
ಮತ್ತೆ ಹಿಂದೆ ಚಲಿಸುವ ಮನಸಿಲ್ಲದೆ
ಉಳಿದೊಂದನ್ನೂ ಬಿಸಾಡಿ
ಬರಿಗಾಲ ದಾಸನಾಗಿಬಿಡುತ್ತೇನೆ;
ಬರಿಗೈ ತುಂಬೆಲ್ಲ ಅವಳದ್ದೇ ನೆನಪು,
ನಾನದ ಹೊತ್ತು ನಡೆವ ಕತ್ತೆ!!

ನಾ ಕೊಳೆತ ಜಾಗದಲ್ಲಿ
ಒಂದು ಹೂವಾದರೂ ಅರಳಬೇಕು,
ಆಕೆಯ ಮುಡಿಯೇರಬೇಕು,
ಸಾವಲ್ಲಿ ಹಿತವಿರುವುದೇ ಆಗ!!
ಈಗ ಸತ್ತದ್ದು ಪದ ಕಟ್ಟಿಗೆ
ಮರು ಹುಟ್ಟಿಗೆ!!

                            -- ರತ್ನಸುತ

Comments

  1. ತನ್ನೊಲವಿನಾ ಹೂವು ಯಾರ ಮುಡಿಗೋ?

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩