Saturday, 27 October 2012

ಪ್ರಣಯ ಹಾದಿಯಲಿ


ಸ್ಮರಣೆಯಲ್ಲೇ ಸೋಲುವ 
ವಿಚಿತ್ರ ಖಾಯಿಲೆಯ ಮನಸ್ಸು 
ಜಾಗರಣೆಯಲ್ಲೂ ಮೂಡುವ
ವಿಪರೀತ ಬಂಗಿಯ ಕನಸು 
ರೇಖೆಗಳಿಗಿಟ್ಟ ಗುಂಪು - ಗುಂಪಾದ,
ಆಕಾರ ಚಿತ್ರ
ಹಾಗೊಮ್ಮೆ- ಹೀಗೊಮ್ಮೆ ಗೀಚಿ,
ಮುಗಿಸಿದ ಪತ್ರ 

ಸೋತ ಗಾಳಿಗೂ ಸೋತ ಕಾಗದ 
ಗೆದ್ದೆನೆಂದಿತು ಹಾರುತ 
ಇಟ್ಟ ಪದಗಳ ಭಾವ ಬಾರವೂ 
ಗಾಳಿಯಲ್ಲಿ ಹಗುರಾಗುತ
ತೇಲಿ ಹೋಯಿತು ಸರಿ,
ಸರಿಯಾದ ದಿಕ್ಕಿನೆಡೆ ಸಾಗೀತೇ?
ಹೇಳಲಾಗದ ಕೋಟಿ ಮಾತಿಗೆ 
ನಿರಾಯಾಸವು ಒದಗೀತೇ?

ಹಾಗೇ ಕೆಡವಿದ ಮಣ್ಣ ರಾಶಿಯ 
ಶಿಲ್ಪಿ ಕಲೆಯೆಂದು ಕರೆದರು 
ಒರಟುತನದಲೂ ಮೃದುಲ ಮನಸಿಗೆ 
ಜಾಗವಿದೆ ಅಂತಂದರು 
ಹೀಗೆ ಅಂದವರು ಒರಟರಲ್ಲದೆ 
ಹೇಗೆ ಹೇಳಿಯಾರು ಪಾಪ?
ನನ್ನಂತವರ ಹುಚ್ಚನೂ
ಪ್ರೀತಿ ಎಂಬವರು ಅಪರೂಪ

ಹೆಣ್ಣು ಅಪ್ಸರೆ, ಗಂಡು ತಿರುಕನು 
ಹೆಚ್ಚೆಂದರೆ ಬೀರುವಳು ನೋಟದ ಬಿಕ್ಷೆ 
ಸಾಧ್ಯವಾದರೆ ಅಂತರಂಗಮಂದಿರದಲಿ 
ಪ್ರಣಯ ಪ್ರದರ್ಶಿಸುವಪೇಕ್ಷೆ
ಬಂದ ಲಾಭವೂ ಅವಳದ್ದೇ 
ಆದ ನಷ್ಟವೂ ಅವಳದ್ದೇ 
ರಂಗನಾಟಕೀಯ ಪ್ರಮುಖ ಪಾತ್ರ ಅವಳದ್ದೇ 
"ಅವಳೇ ರಂಗನಾಯಕಿಯು"

ಕಾಡಿಯಾಗಿದೆ, ಬೇಡಿಯಾಗಿದೆ 
ಕೊನೆಗೂ ಸಿಕ್ಕದ್ದು ಅರ್ಹ ಸೊನ್ನೆ 
ಒಲಿಸ ಬೇಕಿದೆ ದೇವಕನ್ಯೆಯ 
ರಾಕ್ಷಸ ರೂಪದಿ ಒಲಿಸುವೆನೇ?
ವೇಷ ಭೂಷಣ ತಕ್ಕ ಮಟ್ಟಿಗಿದೆ 
ಇನ್ನಾಗಬೇಕು ಮನಃ ಪರಿವರ್ತನೆ
ಕಲ್ಲು ಹೃದಯವ ಕರಗಿಸೋಕೆ
ದಿನ-ರಾತ್ರಿ ಕಲ್ಲಿಗೇ ಪ್ರಾರ್ತನೆ.........

                                  --ರತ್ನಸುತ

Saturday, 13 October 2012

ಮೂರ್ಕಾಸು ಬೆಲೆಗಿಲ್ಲ ಪಗಾರ


ನಗುತಿವೆ ನೋಡುತ ನನ್ನ,  ನಾ ತಗೆದ ನಿರ್ಧಾರಗಳು
ತೊಟ್ಟ ಚಡ್ಡಿ ಉದುರುತಿದೆ, ಎಲ್ಲೋ ಬಿಗಿದಿರಲು ಉಡ್ದಾರಗಳು
ಬಾಗಿ ಪಡೆದದ್ದು ಸಾಕು, ಇನ್ನೂ ಬಗ್ಗಿಸುವ ಸರದಿ 
ಸಮಸ್ಯೆಯನ್ನು ದೂರಾಗಿಸಲೆಲ್ಲಿ ಬೇಕು ಪರಿಹಾರಗಳು 

ಅಂಗಲಾಚಿ ಬೇಡಿದವರು ಮೊದಲಿಗೆ ನಾವೇ ನಿಜ 
ನಮ್ಮ ನೆರಳಿನಡಿಯ ಜನರು ಮಾಡುತ್ತಿರುವರು ಮಜಾ
ಬೇಡಿ ಪಡೆದುದಕ್ಕೆ ನಮ್ಮ ಕಾಡಿಯಾಗಿದೆ ಸಮ
ಇನ್ನು ಎಲ್ಲಿ ಋಣದ ಪಾಲು, ಎಲ್ಲ ಆಗಿರಲು ವಜಾ 

ಇಟ್ಟು ಬೆವರು, ಪಟ್ಟು ನೋವು, ಕೆಟ್ಟ ಕೆಲಸಗಳನು ನಾವು 
ಸರಿಪಡಿಸಲು ಇಟ್ಟೆವಲ್ಲ ಗಾಯವಾಗದೆ ನೆತ್ತರ 
ಉರಿದು ಜ್ವಾಲೆಯಾಗಿ ಮೆರೆದು, ಹಾಗೆ ಆರಿ ಹೋದ ಬೆಳಕು 
ಹೇಗೆ ಅಲ್ಲಿ ನೊಂದಿರ ಬೇಕು ಕರಗಿ ಹೋದ ಕರ್ಪೂರ

ಮಾತುಗಳಿಗೆ ಬರುವ ಅಳಲು, ಸಮರ್ತನೆಗೆ ದಾರಿ ಮಾಡದೆ 
ನಡೆಯಬೇಕು ಮಾನ್ಯತೆಗಳ ದಾರಿಗೆ ತಡವಾಗದೆ 
ಯೋಗ್ಯತೆಗಳ ಅಳಿಯ ಹೊರಟ ಬಳ್ಳಕೆ ಎರಡು ತೂತು 
ಹೇಗೆ ಪ್ರತಿಭೆ ಅಳಿಯ ಬಹುದು ಕುರುದುತನಕೆ ಜೋತು

ಅಲೆ ತನ್ನ ಪಾಡಿಗೆ ಇರುವುದು, ಅಡಗನ್ನು ದಡ ಸೇರಿಸಿ ಬಿಡುವುದು 
ಉಂಟಲ್ಲವೇ ಕಡಲಿಗೂ ಒಂದು ಪ್ರಳಯದ ಪರಮಾವದಿ ?
ಹೇಗೆ ತಡೆಯಲಾದೀತು ಆಗ ಎದ್ದ ಅಲೆಗಳ 
ಕಿನಾರೆ ಮಸಣದ ದವಡೆ, ಮೀನುಗಾರನಿಗೆ ಬೇಗುದಿ 

ಮತ್ತೆ ಮೆಲ್ಲ ಉದಯಿಸಿದ ಅದೇ ಹಳೆ ನೇಸರ 
ಹೊಸ ಅಂಗಿ ತೊಟ್ಟು ನಗುತ ಎದುರಾದ ಸರಸರ 
ಬಿಟ್ಟು ಬಿಡೆ ಸಾಕು ರಶ್ಮಿ ಇನ್ನೆಷ್ಟು ಸಂಜಾಯಿಸುವೆ 
ನಾ ಹೊರಟೆ ಹೊಸ ದಾರೀಲಿ, ನೀನಾಗ ನೆನೆದು ಪರಿತಪಿಸುವೆ.........

                                                            --ರತ್ನಸುತ  

Saturday, 6 October 2012

ಬಾ ತಾಯೆ ಕಾವೇರಿ!!!ಬಾ ತಾಯೆ ಕಾವೇರಿ!!!
ಕನ್ನಡತಿಯೋಬ್ಬಳು ಕಾದಿಹಳು, ಹೊತ್ತು
ಖಾಲಿ ಬಿಂದಿಗೆಯ ಬಿಸಿಲಲ್ಲಿ ನಿಂತು
ನೀರೊಡನೆ ಹೋಗದಿದ್ದರೆ ಇಲ್ಲ ಅಡುಗೆ
ಅತ್ತೆಯ ಬೈಗಳದ ಪೀಕಲಾಟ
ಬಳ್ಳಿಯಂತಿಹಳೀಕೆ ಎಷ್ಟೆಂದು ಕಾಯ್ವಳು
ಇನ್ನೆಷ್ಟು ಸಹಿಸಿಯಾಳು ಬಿಸಿಲಿನಾಟ

ಬಂದವಳು ಬಂದಂತೆ ಹಿಂದಿರುಗಿದ್ದೇಕೆ?
ಊಟಕ್ಕೆ ಕೂತವನು ಕಾಯ ಬೇಕೇ?
ನುಂಗಿದ ಮುದ್ದೆಯ ತುತ್ತು ಕಚ್ಚಿಕೊಂಡಿದೆ ಕೊರಳ
ಧಾವಿಸಿ ಬಾ ಬಿಕ್ಕಳಿಕೆಯ ದೂರಾಗಿಸೋಕೆ

ಅಗೋ ಪಾಪ ವೃಧರೊಬ್ಬರ ಒಂಟಿ ಪಾಡು
ಹೊರಡದ ನಾಲಿಗೆಯ ದಾಹವನು ನೋಡು
ಮೆಟ್ಟಿ ಬಾ ಬಂಡೆಗಳ ತುಂಡು ತುಂಡಾಗಿಸಿ
ನೀನಾಗು ಕಾಲುವೆ, ಅಮೃತದ ಜಾಡು

ನೋಡಲ್ಲಿ ಹಸಿರು ಮುನಿದಿದೆ ಕೆಂಪಾಗುತ
ಬೇರುಗಳು ಕಾಲ್ಕಿತ್ತಿವೆ ಒಣಗಿ ಬಳಲುತ
ನಿನ್ನ ಘಮದ ನಿರೀಕ್ಷೆಯಲ್ಲಿದೆ ಮಣ್ಣ ಮೂಗು
ಹುಸಿಯಾದರೂ ಸರಿಯೇ ಬಾ ಬಸೆದು ಹೋಗು!!

ಮೊಗ್ಗಿನ ಮುಚ್ಚು ಪರದೆಯೊಳಗೆ ಸಿಕ್ಕಿ
ಜಾರದ ಕಂಬನಿಯೊಡನೆ ಒಳಗೆ ಬಿಕ್ಕಿ
ಮೌನದ ಧನಿಯಲ್ಲಿ ಕೈಲಾದ ಪರಿಮಳ
ಸೂಸಿದೆ ನೋಡು ಬಡಪಾಯಿ ಹೂವು
ನೀ ಚಿಮ್ಮಿ ಜಿಗಿದು, ಸಿಂಪಡಿಸು ಹಾಗೆ
ಜೀವಕೆ ನೆರಳು ಕೊಟ್ಟು ಕೊನೆ ಗಳಿಗೆ
ಹೊತ್ತಾರ ಹೋಗು, ಉಳಿಸಾರ ಹೋಗು
ಸಂಪೂರ್ಣ ಉಡುಪಾಗು ಅಪೂರ್ಣತೆಗಳಿಗೆ

ಬರಡು ಹಾಳೆಯ ಮೇಲೆ ಗೀಚಿದ ಪದಗಳು
ಎಂದಾದರು ಉಳಿಯುವುದು ತಾನೇ ಹಾಗೆ
ನೀನೊಮ್ಮೆ ನೆರೆಯಾಗಿ ಎಲ್ಲವನು ಅಳಿಸು
ಆಗುವೆನು ಮತ್ತೊಂದು ಸೃಷ್ಟಿಗೆ ಯತ್ನ
ನೀನಿಟ್ಟ ಪರಿಚಯಕೆ ಎಲ್ಲವೂ ಅದ್ಭುತ
ನೀ ಸೋಕಿ ಹೋದ ದಾರಿಗಳೇ ಧನ್ಯ
ನಿನ್ನರಸಿ ನಾನಿಟ್ಟ ಜೋಡಿಕೆಯ ಪದಮಾಲೆ
ನಿನ್ನ ಮಹಿಮೆಗೆ ಮಣಿದು ತುಂಡಾದ ರತ್ನ......

                                      --ರತ್ನಸುತ

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...