Tuesday, 16 September 2014

ನೀನೆಂದರೆ ನಾನು

ಬಯಸಿ ಬಯಸಿ ಹಿಂದೆ ಬಿದ್ದ
ರದ್ದಿ ಕಾಗದದೊಳಗೆ
ನನ್ನ ಪ್ರೀತಿಭರಿತ ಸಂದೇಶಗಳು
ಮೊಣಕೈ-ಕಾಲು, ಮೂಗು ತರಚಿ
ಕೆಸರು ಮೆತ್ತಿ ವಿಕಾರವಾಗಿ ಕಾಣಬಹುದು;
ಅದಕ್ಕಾಗಿಯೇ ಖಾಲಿ ಉಳಿಸಿದ್ದೆ!!

ನಿನಗೆ ನಾ ತೋಚಿದಂತೆ ಬರೆದುಕೋ
ನನಗೆ ನೀ ತೋಚಿದಂತೆ ಬರೆದುಕೊಳ್ಳುತ್ತೇನೆ;
ನನ್ನವು ನನ್ನಲ್ಲೇ, ನಿನ್ನವು ನಿನ್ನಲ್ಲೇ
ಅರ್ಥಾತ್
ನನ್ನವು ನಿನ್ನಲ್ಲಿ, ನಿನ್ನವು ನನ್ನಲ್ಲಿ ಉಳಿದುಬಿಡಲಿ!!

ಏಸು ಬಾರಿ ಓದಿಕೊಂಡರೂ ತೃಪ್ತಿಯಿಲ್ಲ,
ಅಕ್ಷರ ದೋಷಗಳೆಡೆಗೆ ಮುಗ್ಧ ಕರುಣೆ,
ತಿದ್ದುವ ಗೋಜಲಿಗಿಲ್ಲದ ಸಮಯ;

ಮುಂದೆ ತೆರೆದಿಟ್ಟುಕೊಂಡಾಗ
ನೀನೇ ನಿರೂಪಕಿಯಂತೆ ಸಿಂಗಾರಗೊಂಡು
ಅಚ್ಚುಕಟ್ಟಾಗಿ ಒಪ್ಪಿಸುವ ಭಾವನೆಗಳಿಗೆ
ಮರುಳಾಗಿ ಹಾಳೆ ಮೇಲೆ ಉರುಳಿ ಬೀಳುವ
ಹೃದಯಕ್ಕೆ ಪೆಟ್ಟಾದರೂ ಸೊಗಸು!!

ಯಾವ ಗಾಳಿ ಸುದ್ದಿ ಕಿವಿ ಹೊಕ್ಕರೂ
ನಿನ್ನ ಮೇಲಿನ ಅಭಿಮಾನ ಕದಲದಷ್ಟು ದಿಟ,
ಎದೆಯಲ್ಲಿ ನಿನ್ನದೇ ಚಿತ್ರ ಪಟ,
ಜೀವಕೆ ನೀ ಮೋಹಕ ಚಟ....

ಎಂದಾದರೂ ಒಮ್ಮೆ ಸಮಯ ನೋಡಿಕೊಂಡು-
ಸಿಗೋಣ, ಕಾಲ ಮಿಂಚುವ ಮುನ್ನ;
ಬಹುಶಃ ನಾ ನಿನ್ನ, ನೀ ನನ್ನ ಧ್ಯಾನದಲ್ಲಿ
ನಾವು ನಮ್ಮನ್ನೇ ಮರೆತಿದ್ದರೆ ಅತಿಶಯೋಕ್ತಿ ಅಲ್ಲ!!
ನಾನೇನೆಂಬುದ ನೀ ತಿಳಿಸು
ನೀನೇನೆಂಬುದ ನಾ ತಿಳಿಸುತ್ತೇನೆ!!

                                            -- ರತ್ನಸುತ

ನನ್ನೊಳಗೊಬ್ಬನ ಸ್ವಗತಗಳು

ಹಾಳೆ ಸೋಕುವ ಮುನ್ನ
ನೆನ್ನೆಗಳ ಮನ್ನಿಸಿ
ಸುಕ್ಕುಗಟ್ಟಿದ ಮೇಲೆ
ನಾಳೆಗಳ ಜ್ಞಾಪಿಸಿ
ಒಂದು ಕವಳದ ನೆನೆಪು
ಒಂದು ಬಳಪದ ಗೀಟು
ಕಪ್ಪು ಹಲಗೆಯ ಬಾಧೆ
ನೋಡಿ ಸಾಯದೆ ಹೋದೆ!!

ಕುರಿ ಕಂಬಳಿಯ ಉಚ್ಚೆ
ಸುಡುಗಾಡು ಕರಿ ಮೋಡ
ಹೆಸರಿಟ್ಟು ಕೂಗುವೆನು
ಓ ರವಿಯೇ ಬರಬೇಡ
ಬೂದಿಯೊಳಗಣ ಕೆಂಡ
ಕೆಂಡದೊಳಗಣ ಮೌನ
ಮೌನದಾಹುತಿ ಬೆಂಕಿ
ನೀರು ಬೆಂಕಿಯ ಬಾಯಿ!!

ಕೊಟ್ಟಿಗೆಯ ಗಂಜಲ
ಬಿಟ್ಟ ಎಲೆ ಎಂಜಲು
ಕಲೆಗುಂದದ ಗೆಜ್ಜೆ
ದಣಿವಾರದ ಕೊರಳು
ಕೊಂಬಿಗೊಂದು ಗಿಲಕಿ
ಬಾಲಕೊಂದು ಕಣ್ಣು
ಹಿಂದೆ ಉಳಿದ ಸಮಯ
ಬೆನ್ನ ಹತ್ತಿ ನಾನು!!

ಕೋಳಿ ಕೆದಕೋ ತಿಪ್ಪೆ
ತುರಿದ ತೆಂಗಿನ ಚಿಪ್ಪು
ಹರಿದ ತೇಪೆ ಅಂಗಿ
ಬಾಯಿ ಬಿಟ್ಟ ಗೋಡೆ
ಒಂದು ಒಲವಿನ ಪತ್ರ
ಅಜ್ಜ ಬಳಸಿದ ಛತ್ರಿ
ದೊಂಬರಾಟದ ನೆರಳು
ನೀರ ಮೇಲಿನ ಗುಳ್ಳೆ!!

ಪಾದದಡಿ ಬಿರುಕು
ರಕ್ತ ಸ್ರಾವದ ಸೊಗಡು
ಮಾಗಿ ಮಂಜಿನ ಬರಹ
ಕೋಮು ವ್ಯಾಘ್ರದ ಉಗುರು
ರೆಪ್ಪೆ ತೆರೆಯದ ಬಣ್ಣ
ಬಿದ್ದು ಸತ್ತಿರೋ ಸೊಳ್ಳೆ
ಮೂಗು ಸೊಟ್ಟಗೆ ಆಯ್ತು
ನೇರ ಕಾಣದೆ ದಾರಿ!!

ನಾನೂ ಒಬ್ಬ ತಿರುಕ
ನಾನೇ ಬೇಯಿಸೋ ತನಕ
ಹೆಜ್ಜೆ ಗುರುತಿಗೆ ಇಲ್ಲ
ಯಾವ ಅಂಜಿಕೆ ತವಕ
ದೇಹ ಮಣ್ಣಿನ ಆಸ್ತಿ
ಜಾಗ ಹುಡುಕುವ ಜನ್ಮ
ಚಿಟಿಯಷ್ಟಿದೆ ಸಾಕು
ಮನದ ಮೂಲೆಯ ಪ್ರೇಮ!!

                  -- ರತ್ನಸುತ

ಭ್ರಮೆ

ತುದಿಗಣ್ಣ ಕೋಪಕ್ಕೆ
ಬಣ್ಣಗಳ ಕೂಪಕ್ಕೆ
ರಂಗೇರಿದ ಕೆನ್ನೆ ಬಿಡಿಸಲೇನು?
ಬಂಗಾರವ ತೇದು
ಬೆಳದಿಂಗಳ ಕದ್ದು
ಸಿಂಗಾರಕೆ ಸಜ್ಜುಗೊಳಿಸಲೇನು?

ಮಂಜೂರು ಆದಂತೆ
ನಕ್ಷತ್ರವನ್ನಿಳಿಸಿ
ಮೋಂಬತ್ತಿಗೆ ಬಿಡುವು ನೀಡ ಬೇಕು;
ಒಂಚೂರು ಬೆವರುತ್ತ
ಹತ್ತಾರು ತೊಳಲಾಟ
ಮೊದಮೊದಲು ಹೀಗೇನೆ ಸೋಲಬೇಕು!!

ಕಿರುಪಾದ ಬೆರಳೊಮ್ಮೆ
ತಂತಾನೆ ಹೆಬ್ಬೆರಳ
ಹಿಂದಿಂದೆ ಸರಿದಾಗ ಒಂದು ರೇಖೆ;
ತುಟಿ ಮೇಲೆ ಬೆರಳಿಟ್ಟು
ಚಟವೊಂದು ಪುಟಿದಾಗ
ಪುಟಗಟ್ಟಲೆ ಪದ್ಯ ಬರೆಯಲೇಕೆ?

ಕತ್ತಿಂದ ಶುರುವಾಗಿ
ಮತ್ತೆಲ್ಲೋ ಕೊನೆಯಾಗಿ
ಅತ್ತಿತ್ತ ತಿರುಗೋಕೂ ಸಮಯವಿಲ್ಲ;
ಎಷ್ಟೆಲ್ಲ ಗೀಚಿದರೂ
ಇಷ್ಟಿಷ್ಟೇ ಉಳಿದಂಥ
ಸೂಕ್ಷ್ಮಾತಿ ಸೂಕ್ಷ್ಮಗಳು ಎಟುಕಲಿಲ್ಲ!!

ಈಗಷ್ಟೇ ಹೊಸತೊಂದು
ಹನಿಯುದ್ಭವಿಸಿತೆಂದು
ಆಕಾಶವಾಣಿಯಲಿ ಕೇಳಿ ಬಂತು;
ನಾನೊಬ್ಬನೇ ಅಲ್ಲ
ಆ ಮೋಡಕೂ ಮನಸು
ಆಕಾಶದ ದೋಸೆ ಕೂಡ ತೂತು!!

ಹಸಿ ಮಾತಿಗೆ ಒಂದು
ಬಿಸಿ ಒಪ್ಪಿಗೆ ಸಾಕು
ಮಸಿ ಕಸಿಯಲಿ ಕುಸುರಿ ಮೂಡಿ ಬರಲು;
ಎಲ್ಲಿದ್ದಳೋ ಆಕೆ
ಬಂದಿಳಿದಳೆನ್ನೆದೆಗೆ
ಬಲು ಭಾವುಕತೆಯಲ್ಲಿ ಭ್ರಮಿಸಿಕೊಳಲು!!

                                 -- ರತ್ನಸುತ

ಅವಳು ಮತ್ತು ನಾನು

ಅವಳ ಕೈಯ್ಯ ಚೆದುರಿದ ಗೋರಂಟಿ
ನನ್ನ ಬೆರಳಿಗೆ ತಿಳಿದ ಗುಟ್ಟು
ಅವಳ ಕಣ್ಣಿನ ಒಟ್ಟಾರೆ ಕನಸುಗಳು
ನನ್ನ ಈ ತನಕ ಗಳಿಕೆ ಸ್ವತ್ತು

ಅವಳ ತುದಿ ಉಗುರ ನಳಿನ ನರ್ತನಕೆ
ನನ್ನ ಬೆನ್ನಿದೋ ಪ್ರತ್ಯಕ್ಷ ಸಾಕ್ಷಿ
ಅವಳ ಕಿರು ನಗೆಯ ಕಾಡು ನೆರಳಿನಲಿ
ರಕ್ಷೆ ಪಡೆದ ನಾ ಚಾತಕ ಪಕ್ಷಿ

ಅವಳ ಗುಂಡಿಗೆಯ ಒಂದು ಗೊಂದಲಕೆ
ನನ್ನ ಎದೆಯಲ್ಲಿ ಸಾವಿರ ಕಂಪನ
ಅವಳ ಮೌನವನು ಓದುವಾತುರದಿ
ನನ್ನದಾಯಿತು ಧನ್ಯತಾ ಜೀವನ

ಅವಳ ಚಾರಣಕೆ, ಮಧುರ ಗಾಯನಕೆ
ನನ್ನ ನೆರಳ, ಕೊರಳ ಕಾವಲು
ಅವಳ ಮಾನ್ಯತೆ ನನ್ನ ಪೂರ್ಣತೆ
ಅಲ್ಪನಾಗುವೆ ಬಿಟ್ಟು ಬಾಳಲು

ಅವಳ ನೆನೆಯಲು ಒಂದು ಅಮಲು
ಯುದ್ಧವಾದರೂ ಅವಳ ಸಲುವೇ
ಅವಳು ಹವಳಕೆ ಸಂಧ ಉಪಮೆ
ಚಂದ್ರನಾದರೂ ರದ್ದಿ ಕಸವೇ

ಅವಳು ಅಮೃತವೀವ ಕಡಲ ಶಕ್ತಿ
ಅನುಕರಿಸಲಾಗದಚ್ಚರಿ ಕವನ
ಅವಳ ಹೋಲುವವಳೊಬ್ಬಳು ಅವಳೇ
ಕ್ಷಣವೂ ನಿಲ್ಲದ ಆತ್ಮದ ಮನನ!!

                             -- ರತ್ನಸುತ

ಇದೊಂದು ಪದ್ಯ

ಪದ್ಯ ಹೊಳೆಯದಿದ್ದಾಗ
ಹೊಳೆಯಲಾರದ್ದೇ ಪದ್ಯವಾಗಿದ್ದು
ಪದ್ಯದ ವೈಶಿಷ್ಟ್ಯತೆಯೋ
ಅಸಹಾಯಕತೆಯೋ ಗೊತ್ತಿಲ್ಲ;
ಆದರೆ ಪದ್ಯ ಮಾತ್ರ ಹುಟ್ಟಿತು!! //ಊಹೆ//

ಹಸಿವಿಲ್ಲದಿದ್ದರೂ ಹೊತ್ತೊತ್ತಿಗೆ
ಹಿಟ್ಟು ತೊಳೆಸಿಕ್ಕುವ ತಾಯಿಯಂತೆ,
ಭೂಮಿ ಕರೆಯದಿದ್ದರೂ ಹುಟ್ಟುವ ಬೆಳಕಂತೆ,
ಕಾಲ ಕಲಕ್ಕೆ ಭೋರ್ಗರೆವ ಮಳೆಯಂತೆ
ಕವಿತೆ ತನ್ನಲ್ಲೇ ಒಬ್ಬ ಕವಿಯನ್ನ ಎಚ್ಚರಿಸುತ್ತ
ತಾನಾಗೇ ಹೊರಹೊಮ್ಮುವ ಸ್ವಯಂ ಚೇತನವೋ?
ಅಥವ ಕೇವಲ ಬರಹಗಾರನ ಭ್ರಮೆಯೋ?
ಊಹೆಗೆ ನಿಲುಕದ ವಸ್ತುವಾಗುತ್ತದೆ ಒಮ್ಮೊಮ್ಮೆ!!

ಹೇಗೆ ಬರೆಯಬಹುದು
ಹೇಗೆ ಬರೆಯಬಾರದು ಎಂಬ
ಕಟ್ಟುಪಾಡಿನಾಚೆಯೂ
ಒಂದು ವಿಕಲ ಚೇತನ ಕಾವ್ಯದ ಜನನ
ಮತ್ತದರ ಅಪೂರ್ಣತೆಯ ಅಳಲು
ಕಣ್ಣಿಗೆ ಸಾಗರವನ್ನೇ ಪರಿಚಯಿಸುತ್ತದೆ;
ಅದು ಹೀಗೆ ಬಂದೆಲ್ಲವನ್ನೂ ಕೊಚ್ಚಿ
ಹಾಗೆ ಮುಗ್ಧವಾಗುವ ಸುನಾಮಿಯಂತೆ!!

ತಲೆ, ಬುಡ, ಆಕಾರವಿಲ್ಲದವು
ಶಪಿಸಿದ ಫಲವೋ ಎಂಬಂತೆ
ಕೆಲ ಬಾರಿ ಬಣ್ಣದ ಗರಿ ತಾಳುವ ಕವಿತೆಗಳು
ಕೆಲವೇ ಕ್ಷಣಗಳ ಬಳಿಕ ಬೋಳಾಗಿ ನಿರ್ಜೀವವಾದಾಗ
ಶೀರ್ಷಿಕೆ ಗೋರಿ ಕಲ್ಲಿನ ಹೆಸರಂತನಿಸುವುದು,
ನಗು ಮೆತ್ತಿದ ಹೆಣ
ಮನಸಲ್ಲಿ ಹುದುಗಿ ಹೋಗಲು
ಸ್ಥಳವಿಲ್ಲದ ಸ್ಥಳದಲ್ಲಿ ಗುಣಿ ತೋಡಿದಂತನಿಸುವುದು!!

ಇದಿಷ್ಟನ್ನೂ ಕೂಡಿಸಿ ಬರೆದರೆ
ಗದ್ಯಕ್ಕೂ ಹುಚ್ಚು ಹಿಡಿಸಬಲ್ಲ ಪದ್ಯದಂತೆ ಕಾಣುವ-
ಅಲ್ಲದ ಪದ್ಯಕ್ಕೆ ಹೆಸರಿಡದಿದ್ದರೆ
ಇದು ಪದ್ಯವೇ ಎಂದು ವಾದಿಸುವ
ನನ್ನ ಅಹಂ ಇನ್ಯಾವತ್ತೂ
ನನ್ನ ನಾನಾಗಿಸಲೊಲ್ಲದು;
ಅದಕ್ಕಾಗಿಯೇ ಇದನ್ನ ಪದ್ಯ/ಕವಿತೆ/ಕವನ ಇತ್ಯಾದಿ ವರ್ಗಕ್ಕೆ ಸೇರಿಸುತ್ತೇನೆ;
ಸಾಧ್ಯವಾದರೆ ಮುಂದೊಮ್ಮೆ
ನಿಧಾನವಾಗಿ ಆತ್ಮಾವಲೋಕನವಾದೀತು.. //ಊಹೆ//

                                                                        -- ರತ್ನಸುತ

ತೊದಲು ಹೆಜ್ಜೆ

ಕಣ್ಣ ರೆಪ್ಪೆ ಮೇಲೆ ಕನಸ
ಮರೆತು ಬಿಟ್ಟು ಹೋದ ನಿನ್ನ
ಎಲ್ಲಿ ಅಂತ ಹುಡುಕ ಬೇಕೋ
ತಿಳಿಯದಲ್ಲೇ ರೂಪಸಿ;
ಒಂಟಿಯಾಗಿ ಎಷ್ಟು ದಿವಸ
ನಂಟ ಊಹೆಗೈಯ್ಯುತಿರಲಿ?
ಬೆಸೆದುಕೊಳ್ಳ ಬೇಕು ಈಗ
ಉಳಿಯಬೇಡ ಕಾಯಿಸಿ!!

ಕಪ್ಪು ಕುರುಳಿಗೊಪ್ಪುವಂಥ
ಕೇಶಬಂಧಿ ಕೊಂಡು ತರುವೆ
ಗಲ್ಲವನ್ನು ಇನ್ನು ಮುಂದೆ
ಯಾರೂ ಕೂಡ ಕೆಣಕರು;
ಕೆಣಕುವಾತನೊಬ್ಬ ನಾನು
ಉಳಿಯಲಾರದಷ್ಟು ದೂರ
ನನ್ನ ಈ ಗೋಳು ಕಥೆಯ
ಯಾರು ತಾನೆ ಬಲ್ಲರು?!!

ಸಂತೆ ಬೀದಿಯಲ್ಲಿ ನೀನು
ಹಾದು ಹೋದ ಸುದ್ದಿಯನ್ನು
ಸೋಕಿ ಬಿಟ್ಟ ಸೋರೆಕಾಯಿ
ಸಾರಿ ಸಾರಿ ಹೇಳಲು;
ಯಾವ ಮರದ ನೆರಳು ಕೂಡ
ಹಿತವ ನೀಡುವಂತೆ ಇಲ್ಲ
ಇದ್ದ ದುಃಖವೆಲ್ಲವನ್ನು
ಹಂಚಿ ಒರಗಿಕೊಳ್ಳಲು!!

ಸೀಮೆ ಹಾಕಿಕೊಳ್ಳಲಿಲ್ಲ
ಬಾಗಿಲನ್ನೂ ಇರಿಸಲಿಲ್ಲ
ಮನದ ಮಾರು ದೂರದಲ್ಲಿ
ಒಂದು ಮಲ್ಲೆ ಗಿಡವಿದೆ;
ಅಡ್ಡಿ ಆಗಬಾರದೆಂದು
ಪಳೆಯುಳಿಕೆ ಗೆಳತಿಯರ
ನೆನಪುಗಳ ಬುಡ ಸಮೇತ
ಕಿತ್ತು ಹಾಕಿ ಕೆಡವಿದೆ!!

ಗಟ್ಟಿಯಾಗಿ ಇಟ್ಟು ಕರೆದೆ
ನಿನಗಿಟ್ಟ ಅಡ್ಡ ಹೆಸರ
ಕೇಳದಂತೆ ಸುಳ್ಳೆ ನೀನು
ನಟನೆ ಮಾಡ ಕೂಡದು;
ಉಸಿರುಗಟ್ಟಿದಾಗ ಕೂಡ
ನಿನ್ನ ನೆನಪ ಮಾಡಿಕೊಂಡೆ
ಯಾವ ದಿವ್ಯ ಶಕ್ತಿ ನಿನದು?
ಪ್ರಾಣ ಕೈಯ್ಯ ಮುಗಿವುದು!!

ದಿಂಬಿನಡಿಗೆ ಇಟ್ಟ ಕವನ
ನಿನ್ನ ಎಡೆಗೆ ಒಂದು ಹೆಜ್ಜೆ
ಸಾಲು ಸಾಲು ಗೀಚಿಕೊಂಡು
ನಿನ್ನ ಮನವ ತಲುಪುವೆ;
ಇನ್ನೂ ಹೆಚ್ಚು ಬರೆದುಕೊಳಲು
ಖಿನ್ನತೆ ಕಾಡಬಹುದು
ಇಷ್ಟು ಹೇಳಿ ನನ್ನ ಎರಡು
ಮಾತುಗಳನು ಮುಗಿಸುವೆ!!

                  -- ರತ್ನಸುತ

ನಾನ್ವೆಜ್ ಲವ್ ಸ್ಟೋರಿ

ಬಿಸಿಲಲ್ಲಿ ಬೆವರುತ್ತ ಮೂಳೆ ಕಡಿವುದೂ
ಒಂದು ರೋಮಾಂಚಿತ ಅನುಭವ;
ಒಂದು ಕಡೆ, ಬೆವರ ಒರೆಸುವುದೋ?
ಮತ್ತೊಂದು ಕಡೆ, ತುಂಡ ಮುಗಿಸುವುದೋ? ಎಂಬಲ್ಲೇ
ಅದೆಷ್ಟೋ ದಿನದ ಹಸಿವ
ಬಾಕಿ ಉಳಿಸಿಕೊಂಡೇ ಹೊಟ್ಟೆ ತುಂಬಿತೆಂದು
ಎದ್ದು ಹೊರಡುವ ವೇಳೆ
"ಅಬ್ಬಬ್ಬಾ ಎಂಥ ಬಿಸಿಲು" ಎಂಬ ಉದ್ಗಾರ!!

ಇದೆಲ್ಲ ಒಂದು ದೊಡ್ಡ ವಿಷಯವೇ? ಅನ್ನುವ ಮೊದಲು
ಬಾಡಿಗೆ ಉಪ್ಪು-ಖಾರ ಹದವಾಗಿ ಬೆರೆತಿತ್ತೋ, ಇಲ್ಲವೋ?
ಎಂದು ಕೇಳುವ ಮಾನುಷ್ಯರಾಗಿ,
ಜಿಡ್ಡು ಕೈಗೆ ನೀರು ಕಾಯಿಸಿ,
ತಾಂಬೂಲ ಸಿದ್ಧಪಡಿಸಿ;
ಆನಂತರ ನಿಧಾನಕ್ಕೆ ಕೂತು ನಮ್ಮ ಮಾತು!!

ಹಲ್ಲ ಸಂದಿಗೆ ಚುಚ್ಚುಗಡ್ಡಿಯ ಗತಿಯಿಲ್ಲ,
ಮನೆಯಲ್ಲಿ ಪೊರಕೆಗೂ ಬಡತನವೇ?
ಈ ಹಾಳು ಗ್ಯಾಸು ಬೇರೆ
ಚಿಲ್ಲಿ ಚಿಕನ್ನಿಗೆ ಚಿಲ್ಲಿ ಹಾಕಿಲ್ಲವಾಗಿದ್ದರೆ ಚಂದಿತ್ತು!!

ಸುಣ್ಣ ಸುಟ್ಟ ನಾಲಗೆ ಈಗ
ಕೆಂಪು ಲಂಗ ತೊಟ್ಟ ಕನ್ನಿಕೆಯಂತೆ;
ಏನು ತುಟಿ ಮರೆಗೆ ಇಣುಕಿಸುವುದೋ
ಓರೆಗಣ್ಣಲಿ ಕಂಡು ನಾಚುವುದೋ!!
ಒಳ್ಳೆ ಕೆಂಪನೆ ಹೆಂಡತಿ ಸಿಗುತಾಳಂತೆ ನನಗೆ
"ಅಂದೋರ ಬಾಯಿಗೆ ಸಕ್ಕರೆ ಹಾಕ!!"

ಹಸಿ ಗರಿ ಚಪ್ಪರದ ಚಾವಣಿ,
ಒರಗಿ ಮಲಗೋಕೆ ಸುಣ್ಣದ ಗೋಡೆಯಾದರೇನಂತೆ?
ನಿದ್ದೆ ಸಂಪನ್ನವಾದರೆ
ಮಿಕ್ಕಿದ್ದೆಲ್ಲ ಎಚ್ಚರಗೊಂಡ ನಂತರಕೆ;
ಗೆಜ್ಜೆ ಸದ್ದಿಗೆ ಮಾತ್ರ ನಿದ್ರಾಭಂಗವಾಗದಿದ್ದರೆ
ಕನಸಿನಲ್ಲೇ ಕೈ ಮುಗಿಯುತ್ತೇನೆ ಕಾಲಿಗೆ!!

ಮೈ ಮುರಿದರೆ ನೂರು ಲಟಿಕೆ ಸದ್ದು
ಕಣ್ಣೆದುರು ಕೆಂಗುಲಾಬಿ ಹೂಗಳು;
ಮುಳ್ಳಿನಷ್ಟೇ ಸೊಕ್ಕು, ಪಕಳೆಯಷ್ಟೇ ಮೃದು
ನನ್ನ್ನಷ್ಟೇ ಮಾಂಸ ಪ್ರಿಯ ಲಲನೆಯರು!!

ಮಲ್ಲೆ, ಮಸಾಲೆ ಘಮಲು ಒಟ್ಟೊಟ್ಟಿಗೆ,
ಎರಡಕ್ಕೂ ಮನ ಸೋತಿತ್ತು;
ಆದರೂ ಮತ್ತೊಂದು ಸರತಿ ಸಾಲಿನ ಮೇಲೇ
ಗಮನ ತುಸು ಹಿಚ್ಚಿತ್ತು!!

                                      -- ರತ್ನಸುತ

ಮೆಟ್ರೋ ಸಿಟಿಯಲ್ಲಿ

ನಾಲ್ಕು ದಿಕ್ಕಿನಿಂದ ನುಗ್ಗಿ
ಜಾಮಾದ ರೋಡಿನಲ್ಲಿ
ಟ್ರಾಫಿಕ್ ದೀಪಗಳ 
ವಿರಾಗಮಾನ ವರ್ತನೆ;
ಝೀಬ್ರಾ ಕ್ರಾಸಿಗಿಷ್ಟೂ
ಬೆಲೆಯ ಕೊಡದ ಟ್ರಕ್ಕುಗಳು
ಪಾದಚಾರಿ ಜಿಗಿಯ ಬೇಕು
ಬ್ಯಾರಿಕೇಡ ಮೆಲ್ಲನೆ!!

ಲೆಫ್ಟು, ರೈಟು ಸಿಕ್ಕ ಸಿಕ್ಕ
ದಿಕ್ಕಿನಲ್ಲಿ ಓವರ್ಟೇಕು
ಕಿಲೋಮೀಟರ್ ದೂರದಲ್ಲಿ
ಆಕ್ಸಿಡೆಂಟು ಖಾತರಿ;
ಹೆಲ್ಮೆಟ್ಟು ಧರಿಸದವರ
ಫುಟ್ಪಾತು ಏರಿದವರ
ಡಾಕ್ಯುಮೆಂಟ್ಸು ಇಲ್ಲದವರ
ಜೇಬಿಗಿಷ್ಟು ಕತ್ತರಿ!!

ಎಲ್ಬೋರ್ಡ್ ಆಮೆ ಗತಿಯ
ಸಹಿಸಲಾಗದಂಥ ಗೋಳು
ಓವರ್ ಸ್ಪೀಡಿನಲೇ
ಅಂತ್ಯಗೊಂಡ ಬಾಳು;
ಆಟೋ ಹಿಂದೆ ಬರೆದ
ಚಂದ-ಚಂದ ಅಕ್ಷರ
ಆಂಬ್ಯುಲೆಂಸುಗಳ ಪಾಡು
ರೋಗಿ ಸ್ಥಿತಿ ಭೀಕರ!!

ಅನ್ಯ ರಾಜ್ಯ ನಂಬರ್ ಪ್ಲೇಟು
ನಮ್ಮ ಭಾಷೆ ನಮಗೆ ಗ್ರೇಟು
ಕನ್ನಡದಲಿ ಬರೆದುಕೊಂಡ್ರೆ
ರೂಲ್ಸು ಅಡ್ಡ ಬರ್ತವೆ;
ಫ್ಲೈ ಓವರ್ ಕಟ್ಟಿ ಆಯ್ತು
ಮೆಟ್ರೋ ರೈಲು ಓಡಿದ್ದಾಯ್ತು
ಆದ್ರೂ ನಮ್ಮ ಬೆಂಗಳೂರ
ಗೋಳು ತೀರಲಿಲ್ಲವೆ!!

ಹೊಗೆ ಧೂಳು ಮಿಕ್ಸಾಗಿ
ಖಾಯಿಲೆಗಳು ಫಿಕ್ಸಾಗಿ
ಆಸ್ಪತ್ರೆ ಸೆರ್ವಿಸ್ಸು
ಟೋಂಟಿಫೋರ್ ಬಾರ್ ಸೆವೆನ್;
ಎಗ್ಗಿಲ್ಲದೆ ಸೇಲಾದವು
ಮೆಡಿಕಲ್ಸಲಿ ಮಾತ್ರೆಗಳು
ಮುದ್ದೆ ಊಟ ಬಿಟ್ಟು ತಿಂದ್ರೆ
ಚೀಸ್, ಜಾಮ್, ಬಟರ್, ಬನ್!!

ಅಪಾರ್ಟ್ಮೆಂಟ್ಸ್ ತೆಲೆಯೆದ್ದವು
ಕೆರೆ-ಕುಂಟೆ ಲೇಯೌಟ್ಗಳು
ರಾಜ ಕಾಲುವೆಗಳಲೀಗ
ಚರಂಡಿ ನೀರ ಕೋಡಿ;
ರಿಯಲ್ ಎಸ್ಟೇಟು ದಾಳಿ
ಹೊಲ-ಗದ್ದೆ ಡೀಲೋ ಡೀಲು
ಇಂದು ರಾಜನಾಗಿ ಮೆರೆದು
ನಾಳೆ ಡೆಡ್ಡು ಬಾಡಿ!!

ನೂರೆಂಟು ಚಾನಲ್ಗಳು
ರಾಜಕೀಯ ನ್ಯೂಸೆಂಸ್ಗಳು
ಇನ್ನೊಂದೆಡೆ ಐ.ಟಿ ಕಂಪನಿಗಳ
ಮೆರೆದಾಟ;
ಮೊಬೈಲ್ ಸಿಕ್ಕ ಕೈಗಳಿಗೆ
ಸ್ಲೇಟು ಬಳಪ ಮರ್ತೋಯ್ತು
ಮೊಮ್ಮಕ್ಕಳ ಪ್ರೀತಿಗಾಗಿ
ಮುದುಕರ ಹೋರಾಟ!!

ಬೀದಿ ಬೀದಿ ದೇವರು
ಹಸ್ತ ನುಂಗುವವರ ನೂರು
ಜೋತಿಷ್ಯ, ಹಣೆ ಬರಹ
ಕೊಳೆತು ನಾರೋ ತಿಪ್ಪೆ;
ಇಂಜೆಕ್ಷನ್ ತರಕಾರಿ
ಹಣ್ಣು, ಮಾಂಸವೆಲ್ಲವೂ
ಶುಗರ್ ಬೆನ್ಹತ್ತಿದರೆ
ಬಾಳು ಕಬ್ಬ ಸಿಪ್ಪೆ!!

ಡೇ ಮುಗಿದರೆ ನೈಟ್ ಲೈಫ್
ದುಡ್ಡಿದ್ದರೆ ನಾವ್ ಸೇಫ್
ಹಿಸ್ಟರಿ ಹಾಳೆಗಳು
ಓದುವಾಗ ಬಾರ;
ಚಾಪೆ ಅಷ್ಟಗಲ
ತೇಪೆ ಹಾಕಿದ ಬದುಕು
ನಾಳೆಯ ನೆನೆದರೆ ಕೆಡುವುದು
ಇಂದಿನ ಗ್ರಹಚಾರ!!

                   -- ರತ್ನಸುತ

ಗಣಪನ ಗುಂಗಲ್ಲಿ

ಮೂಲೆಯಲ್ಲಿ ಧೂಳು ಹಿಡಿದ
ಮೂರು ಕಾಲ ಕುರ್ಚಿ
ಹೊಸಗೆ, ಬಾಡು, ನಿಶ್ಚಿತಾರ್ಥ
ಮುಗಿಸಿ ಬಂದ ಪೆಂಡಾಲು
ಮದುವೆ ಮನೆ, ಊರ ಹಬ್ಬ
ಬೆಳಗಿದ ಸೀರ್ಯಲ್ ಸೆಟ್ಟು
ಹಾಡು ಯಾವುದಾದರೇನು
ಬಾಯಾಗುವ ಸ್ಪೀಕರ್ರು;

ನಾಲ್ಕು ಹಣ್ಣ ತಟ್ಟೆ ಮೇಲೆ
ನೂರು ನೊಣದ ರಾಶಿ
ಕಜ್ಜಿ ನಾಯಿ ಕೆರೆಯುತಿತ್ತು
ರಟ್ಟುಗಟ್ಟಿ ಗಾಯ
ದಾರಿ ಬಂದ್ ಎರಡೂ ಬದಿಯ
ಚಾಲಕರ ಪರದಾಟ
ಕದಿಯಲೇನು ಸಿಗುವುದೆಂದು
ಮಂಗನಿಣುಕು ನೋಟ!!

ಮಂಗಳಾರ್ತಿ ತಟ್ಟೆಯಲ್ಲಿ
ಪುಡಿಗಾಸಿನ ಪಾಡು
ತೊಳೆದು ಸ್ವಚ್ಛಗೊಂಡಿತ್ತು
ಬಿ.ಬಿ.ಎಂ.ಪಿ ರೋಡು
ಕಟ್ಟೌಟುಗಳಲ್ಲಿ ಸ್ಟಾರುಗಳ ನಡುವೆ
ಕಮಂಗಿಗಳು
ದೇವಸ್ಥಾನದ ತುಂಬ
ದಿಂಡು ಮುಡಿದ ಫಿರಂಗಿಗಳು!!

ಗಣಪನ ಕೊಂಡರೆ ಗೌರಿ ಫ್ರೀ
ವ್ಯಾಪಾರ-ವಹಿವಾಟು
ಹೂವು, ಹಣ್ಣು, ಕಾಯಿ, ಕಡ್ಡಿ
ಎಲ್ಲವೂ ಹೈ ರೇಟು
ಹೂರಣಕ್ಕೆ ಬೆಲ್ಲ ಕಡಿಮೆ
ಕಡುಬು ರುಚಿಸುತಿಲ್ಲ
ಖರ್ಚು ಮಾಡಲಿಕ್ಕೆ ತರುವ
ಕಾಸು ಸಾಲುತಿಲ್ಲ!!

ಮಣ್ಣ ಗಣಪ, ಬಣ್ಣ ಗಣಪ
ಸುಣ್ಣ ಗಣಪ, ಕಲ್ಲು ಗಣಪ
ಎಲ್ಲ ಗಣಪರಿಗೂ ಒಂದು
ದೀರ್ಘ ದಂಡ ನಮನ;
ಜಿಮ್ಮು ಸೇರಿ ಮಾಡು ಚೂರು
ಎಕ್ಸರ್ಸೈಸು-ಗಿಕ್ಸಸೈಸು
ಇನ್ನೂ ಹೆಚ್ಚು ಸೂರೆಗೊಳುವೆ
ಭಕ್ತೆಯರ ಗಮನ!!

                    -- ರತ್ನಸುತ

ಕೊನೆಯಲ್ಲದ ಕೊನೆಯಲ್ಲಿ

ನನ್ನ ಕನಸುಗಳ ಮೇಲೆ
ಮತ್ತಾರೋ ಸವಾರಿ ನಡೆಸುತ್ತಿದ್ದಾರೆ,
ಆಕೆಗೂ ಅದು ಇಷ್ಟವಿದ್ದಂತೆ
ಮನಸು ತುಂಬಿ ನಗುತ್ತಿದ್ದಾಳೆ;
ಅಲ್ಲಿ ನನ್ನ ಮಸಿಯಾದ ಬೆರಳುಗಳು
ಮುಖ ಮುಚ್ಚಿಕೊಳ್ಳುತ್ತಿದ್ದಂತೆ
ಬಿಗಿದ ಮುಷ್ಠಿ ನಿಶಕ್ತವಾಗಿತ್ತು,
ಇನ್ನೂ ಆ ಪಯಣ ಸಾಗುತ್ತಲೇ ಇತ್ತು!!

ಅದ ಗೆಳೆತನವೆಂದವರು
ಸಮರ್ಥನೆಗಳ ಕೊಡುತ್ತಿದ್ದಾರೆ;
ನನ್ನ ಸಮರ್ಥನೆಗಳೇ ಸೋತಿರುವಾಗ
ಮತ್ತಾರದ್ದನ್ನೋ ಹೇಗೆ ಒಪ್ಪಲಿ?

ಅವರು ಜೋಡಿಯಾಗಿ ಕಟ್ಟಿ
ಸಾಗಿಸುತ್ತಿದ್ದ ಹೂವ ಪಲ್ಲಕ್ಕಿ
ನನ್ನ ಮೂಗಿಗೆ ಬಡಿಸುತ್ತಿದ್ದದ್ದು
ನಂಜು ಮಿಶ್ರಿತ ಕಂಪು;
ಕುತ್ತಿಗೆ ಬಿಗಿದುಕೊಂಡರೂ ನಿಲ್ಲದೆ
ಹೃದಯಕ್ಕೆ ಸುದ್ದಿ ಮುಟ್ಟಿಸಿತು;
ಈಗ ಎಲ್ಲೆಲ್ಲೂ ಕಣ್ಣೀರು,
ಹಸ್ತಕ್ಕೆ ಚೂರು ಹೆಚ್ಚೇ ಕೆಲಸ!!

ಊಹೆಯಲ್ಲೂ ಧಿಕ್ಕರಿಸುತ್ತಿದ್ದ
ಅಗಲಿಕೆಯ ಸೂಕ್ಷ್ಮ ಭಾವಗಳು
ನಿಜ ಭಾರವಾಗಿ ಕುಗ್ಗಿಸುತ್ತಿವೆ;
ಈಗಲಾದರೂ ಎಲ್ಲವನ್ನೂ ಹೇಳಿಬಿಡಬೇಕು,
ಸಂವೇದನೆಗಳ ಮೂಟೆ ಬಿಚ್ಚಿಟ್ಟು;
ಆದರೆ ಮಾತು ಬಿಕ್ಕಳಿಸುತ್ತಿದೆ,
ಮತ್ತೆ ಆಕೆ ನಕ್ಕುಬಿಟ್ಟರೆ ಹುಚ್ಚನಾಗುತ್ತೇನೆ!!

ಕಣ್ಣು ಮೆಲ್ಲಗೆ ಚೆಲ್ಲಿದ
ಲವಣ ದ್ರವ್ಯವ ಚಪ್ಪರಿಸಿದ ನಾಲಗೆ
ತೊದಲು ನುಡಿಯಲ್ಲಿ
ಅವಳ ಹೆಸರ ಜಪಿಸುವಾಗ
ಕಾರ್ಮೋಡಕ್ಕೂ ಏನೋ ಭೀತಿ,
ಭೂಮಿ ತುಂಬೆಲ್ಲ ನನ್ನ ನೋವ ಗುರುತು!!

ಒಂಟಿ ಚಪ್ಪಲಿ ಧರಿಸಿ
ತುಂಬ ದೂರ ಓಡಿ ಬಂದಿದ್ದೇನೆ;
ಮತ್ತೆ ಹಿಂದೆ ಚಲಿಸುವ ಮನಸಿಲ್ಲದೆ
ಉಳಿದೊಂದನ್ನೂ ಬಿಸಾಡಿ
ಬರಿಗಾಲ ದಾಸನಾಗಿಬಿಡುತ್ತೇನೆ;
ಬರಿಗೈ ತುಂಬೆಲ್ಲ ಅವಳದ್ದೇ ನೆನಪು,
ನಾನದ ಹೊತ್ತು ನಡೆವ ಕತ್ತೆ!!

ನಾ ಕೊಳೆತ ಜಾಗದಲ್ಲಿ
ಒಂದು ಹೂವಾದರೂ ಅರಳಬೇಕು,
ಆಕೆಯ ಮುಡಿಯೇರಬೇಕು,
ಸಾವಲ್ಲಿ ಹಿತವಿರುವುದೇ ಆಗ!!
ಈಗ ಸತ್ತದ್ದು ಪದ ಕಟ್ಟಿಗೆ
ಮರು ಹುಟ್ಟಿಗೆ!!

                            -- ರತ್ನಸುತ

ತಾಮಸ ತಪನ

ಕತ್ತಲಿನಿಂದ ಬೆಳಕಿಗೆ ಬಂದ ನನ್ನ
ಮತ್ತೆ ಕತ್ತಲಿನತ್ತ ಸಾಗಿಸಲು ಸೂಚ್ಯವಾಗಿ
ಕಣ್ಣ ಕುಕ್ಕುವಂತೆ ಸಾರಿದ ಬೆಳಕಲ್ಲಿ
ನಾ ಕಂಡ ಅದಮ್ಯ ಚೇತನಾ ಚಿಲುಮೆಗಳು,
ಮೊಸ ಜಾಲಗಳು, ಪಾಪ ಪ್ರಜ್ಞೆಗಳ ಲೆಕ್ಕ
ಬೆರಳ ಮೀರುವಷ್ಟಿದ್ದರೂ
ಸುಮ್ಮನೆ ಲಕ್ಕೆ ತಪ್ಪಿದವನಂತೆ
ಕುಕ್ಕರಗಾಲಲ್ಲಿ ಕೂತು ಮತ್ತೆ-ಮತ್ತೆ ಎಣಿಸುತ್ತೇನೆ!!

ಅವನೋ? ಅವಳೋ? ಗೊತ್ತಾಗದ
ದೂರದ ಆಕೃತಿಯೊಂದು ಕೈ ಬೀಸಿದಂತೆಯೋ,
ಅತ್ತಂತೆಯೋ, ಸತ್ತಂತೆಯೋ ಕಂಡು
ಹತ್ತಿರ-ಹತ್ತಿರಕ್ಕೆ ಹೊರಟೂ ದೂರುಳಿದಂತಾಗಿ
ಇನ್ನೂ ಸಮೀಪಿಸುವ ಹಂಬಲದಿಂದ
ಕಾಲುಗಳು ಚಳುಕು ಹಿಡಿಸಿಕೊಂಡದ್ದು
ನೆರಳಿಗೂ ಅರ್ಥವಾಗಿಹೋಗಿತ್ತು!!

ಬೋಳು ಮರ ಸಂತೈಸುತ್ತಿರುವಂತೆ
ಉದುರಿದೆಲೆಗಳೆಲ್ಲ ಹುಟ್ಟಿಗೆ ಹಪಹಪಿಸಿ
ಸುರುಳಿ ಬೀಸಿದ ಗಾಳಿಯ ಬೆನ್ನು ಹತ್ತಿ
ಜನ್ಮಸ್ಥಳವ ಮುಟ್ಟಿದಾಗ
ಚಿಗುರಿಗೆ ದಿಢೀರ್ ಎಚ್ಚರಾದಂತೆ
ಪುಟಿದು ಕಣ್ಣರಳಿಸಿ
ನಾನೆಂಬ ಪಾಪಿ ಬುಡದಲ್ಲಿ ವಿರಮಿಸುವುದರ
ದರ್ಶನ ಪಡೆದದ್ದೇ ನೋವಿನ ವಿಚಾರ!!

ಆ ಆಕೃತಿ ಇನ್ನು ಅಲ್ಲೇ ಉಳಿದಿತ್ತು,
ನಾನೆಷೇ ಮುಂದರಿದರೂ
ಇದ್ದಲ್ಲೇ ಉಳಿದಷ್ಟು ಅಂತರ ಕಾಯ್ದುಕೊಂಡಿತ್ತು;
ಹಿಂದೆ ಯಾವ ದಾರಿಯೂ ಕಾಣಲಿಲ್ಲ,
ಹಾಗಿದ್ದರೆ ನನಗೆ ನಾನೇ ಮೋಸ ಎಸಗಿದೆನೇ?
ಎಲ್ಲವನ್ನೂ ವಿಶ್ಲೇಷಿಸುವ ವ್ಯವಧಾನವಿಲ್ಲ,
ಮುಂದೆಂಬುದೂ ತೋಚುತ್ತಿಲ್ಲ!!

ಕತ್ತಲ ಏಕ ಮುಖವ ತಿರಸ್ಕರಿಸಿದವನಲ್ಲಿ
ಬಹು ಮುಖಿ ಬೆಳಕು ಅಜೀರ್ಣವಾದಾಗ
ಬದುಕ ಇನ್ನೆತ್ತ ಸಾಗಿಸಬೇಕೋ ಗೊತ್ತಾಗದೆ
ಹಣತೆಯ ಬತ್ತಿಯಾಗಿ ಉಳಿದು ಬಿಟ್ಟೆ;
ಹೊತ್ತಿಸಿದರೆ ಬೆಳಕು,
ಇಲ್ಲವಾದರೆ ಇದ್ದಂತೇ!
ಎಲ್ಲಕ್ಕೂ ಪರಾವಲಂಬಿತನಾಗಿದ್ದೇನೆ!!

ಕೊನೆಗೂ ಆ ದೂರದ ಆಕೃತಿ
ತಾನೇ ಮುಂದಾದಂತೆ ಗೋಚರಿಸಿತು;
ಅವಲಂಬಿತ ಆಧಾರ ಅದಾಗಿರಬಹುದೆಂದು
ಕೌತುಕದಲ್ಲಿ ದಿಟ್ಟಿಸಿದೆ;

ಹತ್ತಿರವಾಗತೊಡಗುತ್ತಲೇ
ಕಣ್ಣು ಹಾಯ್ದಷ್ಟೂ ದೂರ
ಆವರಿಸಿದ ತಾನು
ವಿಚಲಿತಗೊಳ್ಳುವುದಕ್ಕೂ ಮುನ್ನ
ನನ್ನ ಹೊದ್ದುಕೊಂಡಿತು!!

ನಾನೀಗ ಮತ್ತೆ ಕತ್ತಲ ಪಾಲಾದೆ,
ಬೆಳಕು ನನ್ನೊಳಗೆ ನೆನಪಾಗಿ ಉಳಿಯಿತು!!

                                     -- ರತ್ನಸುತ

ಬಜಾರು ಹುಡುಗಿ

ಒಂದಿಷ್ಟು ದರ್ಪದ ಕೊರತೆಯಿದೆ;
ರಸ್ತೆ ಬದಿಯಲ್ಲಿ ಬಿಸಾಡಿದ
ಬಾಳೆ ಸಿಪ್ಪೆಯಂತೆ ಬಾಳಲಿಕ್ಕಲ್ಲ
ಒಣ ಹುಲ್ಲಿನ ತುರಿಕೆಯ ನಡುವೆ ಮಾಗಿದ್ದು;

ಬೆತ್ತಲಾಗಿಸಿದವರಿಗೆ
ಬಟ್ಟೆ ಕಳಚಿದಾಗಿನ ನಾಜೂಕುತನ
ಹೊದಿಸುವಾಗ ಭಾರವಾದಂತೆ
ಹಗುರಾಗುತ್ತಾರನಿಸುತ್ತೆ!!

ದಣಿವಾರಿದಮೇಲೆ
ನನ್ನಲ್ಲೊಬ್ಬ ಅಕ್ಕಳನ್ನೋ, ಅಮ್ಮಳನ್ನೋ
ಕಂಡಂತೆ ಮುಖ ಮರೆಸಿ
ಕೈಗಿರಿಸುವ ಹಸಿ ನೋಟ ತಡವಿದಾಗ
ಚಿಕ್ಕಂದಿನಲ್ಲಿ ಕದ್ದ ಅಪ್ಪನ ಜೇಬು
ನೆನಪಾಗಿ ಬಿಕ್ಕಲಾರಂಭಿಸುತ್ತಲೇ
ಗಿರಾಕಿ ಗಾಬರಿಗೊಂಡು ಕಾಲ್ಕೀಳುತ್ತಾನೆ!!

ಯಾವುದೂ ಹೊಸತಲ್ಲ ಬಿಡಿ;
ಎಲ್ಲವೂ ಹಳೆ ರದ್ದಿ ಕಾಗದದಂತೆ
ಮಳೆ ನೀರ ದೋಣಿಗಳಂತೆ
ದಡ ಸೇರದ ನೀರ ಗುಳ್ಳೆಗಳಂತೆ
ರೂಢಿಯಾಗಿ ಹೋಗಿವೆ!!

ಬರುವವರು ಪಾಪ ಅರೆ ಮನಸಿನವರು,
ನೆಂಟಸ್ತಿಕೆ ಬೆಳೆಸಲು ತಡವರಿಸುತ್ತಾರೆ;
ಅಲ್ಲೇ ಅವರ ಮುಗ್ಧತೆ ತೆರೆದುಕೊಂಡು
ನಾನೂ ಚೂರು ಅವರ ಸಮಕ್ಕೇ ತೂಗುತ್ತೇನೆ;
ಮುಂದೆ, ನಾ ಕಲಿಸುವ ಬೇಟೆಯಾಟದಲ್ಲಿ
ನಾನೇ ಮಿಕ ಆಗುತ್ತೇನೆಂಬುದು ತಿಳಿದರೂ ಸಹ!!

ನನ್ನ ನಗುವಿನಿಂದ ಮುಜುಗರಕ್ಕೀಡಾದವರು
ನನ್ನ ಕಣ್ಣೀರೆದುರು ಕರಗಿದವರು
ಇನ್ನೆಂದೂ ನನ್ನ ಬಯಸಲಾರದು;
ಆದ್ದರಿಂದಲೇ ನಾ ನಿರ್ಭಾವುಕಳಾಗಿದ್ದೇನೆ
ವೃತ್ತಿ ನಿಷ್ಠೆ ನನ್ನ ಪರಮ ಧ್ಯೇಯ!!

ಪ್ರಾಯ ಚೂರು ಮಂಕಾದಂತೆ
ನನ್ನ ಮೃದುತ್ವ ತೃಣವಾಗತೊಡಗಿದಂತಿದೆ;
ಹೌದು,
ನನ್ನಲ್ಲಿ ಒಂದಿಷ್ಟು ದರ್ಪದ ಕೊರತೆಯಿದೆ
ರಸ್ತೆ ಬದಿಯಲ್ಲಿ ಬಿಸಾಡಿದ
ಬಾಳೆ ಸಿಪ್ಪೆಯಂತೆ ಬಾಳಲಿಕ್ಕಲ್ಲ
ಒಣ ಹುಲ್ಲಿನ ತುರಿಕೆಯ ನಡುವೆ ಮಾಗಿದ್ದು;

                                   -- ರತ್ನಸುತ

ಅಂಗಿ ಹರಿದಾಗ

ಹೊಸದೊಂದು ಅಂಗಿ ಕೊಂಡುಕೊಂಡೆ
ನಡುವೆ ಒಂದು ಗುಂಡಿ ಇಲ್ಲದಾಗಿತ್ತು,
ಕೋಪಕ್ಕೆ ಮುದುರಿ ಮೂಲೆಗೆಸೆದೆ
ಮಿಕ್ಕ ಗುಂಡಿಗಳೆಲ್ಲ ಅಳ ತೊಡಗಿದವು;
ಆ ಅನಾಥ ಭಾವ ನನ್ನ ಮನ ಮುಟ್ಟಲಿಲ್ಲ!!

ಅಷ್ಟಿರಲಿ, ಪಾಪ ಆ ಕಳೆದ ಗುಂಡಿಗೆ
ಇಲ್ಲಿಯ ಸ್ಥಿತಿಯ ಅರಿವಾದರೆ ಎಷ್ಟು ಮರುಗುವುದೋ!!
ಆ ಪ್ರಜ್ಞೆ ಉಳಿದ ಗುಂಡಿಗಳಿಗೂ ಇಲ್ಲವಾಗಿ
ತೋಚಿದಂತೆ ಶಪಿಸುವಾಗ
ಅಂಗಿ ಗಾಂಭೀರ್ಯ ಮೆರೆದದ್ದೇ ಸೋಜಿಗ!!

ಇಸ್ತ್ರಿ ಪೆಟ್ಟಿಗೆಯ ಇದ್ದಲಿಗೆ
ಹೊಸ ಗೆಳೆಯನ ಸುಕ್ಕು ಬಿಡಿಸುವ ಬೇನೆ,
ನಾ ಅದಕೆ ಅವಕಾಶ ಮಾಡಿಕೊಟ್ಟರೆ ತಾನೆ?
ಕಪಾಟಿನ ಮುಸುರೆ ಮೂಲೆಗುಂಪಾದುದಕೆ
ನನ್ನ ಕ್ರೌರ್ಯ ಅರ್ಥವಾಗಿತ್ತು
ಮಿಕ್ಕಾವುದರ ಮುಗ್ಧತೆಯ ಅಂದಾಜೂ ಇರದಂತೆ!!

ಒಂದು ಕಡೆ ಇನ್ನೂ ಅಳಿಯದ ಹೊಸತನದ ಕಂಪು,
ಮತ್ತೊಂದೆಡೆ ಮೊದಲ ಸರತಿಯಲ್ಲೇ ಬೆಸೆದ
ಕಂಕುಳಿನ ಬೆವರ ಬಂಧ;
ಎರಡರ ನಡುವೆ ನಿರೀಕ್ಷೆಯಲ್ಲೇ ಜೋಮು ಹಿಡಿಸಿಕೊಂಡು
ಮೈ ಮುರಿದಾಗ ಬಿಡಿಯಾದ ಹೊಲಿಗೆ,
ಮತ್ತದರ ಕಸೂತಿ ಬಣ್ಣ!!

ಬೆಲೆ ಕೊಂಡಿಯನ್ನೂ ಕಿತ್ತಿರದ
ಹೊಸತರಲ್ಲೇ ಹಳಸಾದ ಅಂಗಿಯ
ಶಾಶ್ವತವಾಗಿ ದೂರ ಮಾಡಿಕೊಳ್ಳವಾಗ
ಕೊನೆಯದಾಗಿ ಬೆಲೆಯನ್ನೊಮ್ಮೆ ನೋಡಿ
ಬೆರಗಾಗಿ, ಬೇಸರದಲ್ಲೇ ಹೇಳಿಕೊಂಡೆ
"ಹೊಸ ಗುಂಡಿ ಹೊಸೆದುಕೊಂಡಿದ್ದರೆ
ಹೀಗಾಗುತ್ತಿರಲಿಲ್ಲವೇನೋ ಬಹುಶಃ"!!

-- ರತ್ನಸುತ

ನಾನು ನಾನಾಗಿ

ಬೆವರ ಹಿಡಿದು ಗೀಚಿಕೊಂಡೆ,
ಗೆರೆ ಇದ್ದಲ್ಲೇ ಹಿಂಗಿ ಹೋಯಿತು;
ಕವಿತೆ ಎಲ್ಲಿ? ಎಂದು ಕೇಳಿದವರು
ಮೂಗು ಮುಚ್ಚಿಕೊಂಡಾಗ
ಓದಿಸಿಕೊಳ್ಳಲು ಅಸಮರ್ಥವಾಯಿತೆಂದು
ಬೇಸರದಲ್ಲಿ ಮತ್ತೆ ನಾನೇ ಓದಲು ಮುಂದಾದೆ;
ನನ್ನ ಕಂಪು ನನ್ನನ್ನೇ ಛೇಡಿಸುವಂತೆ
ಅಕ್ಷರಗಳ ಮರೆಸಿಟ್ಟಿತು!!

ನೀರ ಮೇಲೆ ಬರೆದೆ;
ಯಾವ ಹರಿವಿನ ಹಂಗೂ ಇಲ್ಲದ
ಸ್ತಬ್ಧ, ತಟಸ್ಥ ಭಾವವ ತೊರೆದು
ತರಂಗಗಳ ಮೇಲೆ ತೇಲಿ
ಆ ದಡ, ಈ ದಡ ಮುಟ್ಟುಗೋಲು ಹಾಕಿ
ಅಲೆಮಾರಿಗಳಂತಾದ ತುಂಡಕ್ಷರಗಳು
ಕೊನೆಗೆ ನನ್ನ ಕಾಲನ್ನೇ ಮುಟ್ಟಿದಾಗ
ಕುಸಿದು ಬಿದ್ದೆ!!

ಯಾರೋ ಸೂಚಿಸಿದಂತೆ
ಕಣ್ಣೀರ ಬಸಿದೂ ಬರೆದದ್ದಾಯ್ತು;
ಪದ್ಮ ಪತ್ರೆಯ ರೀತಿ
ಹಾಳೆ ಅಂಟಲುಗೊಡದೆ
ತಾನೂ ಕಣ್ಣೀರಿಟ್ಟಂತೆ
ಎಲ್ಲವನ್ನೂ ಕೈ ಚೆಲ್ಲಿ ನಿಂತಿತು;
ಓದುಗರ ಎದುರುನೋಟಕ್ಕೂ
ಎಳ್ಳು-ನೀರೆರೆದು!!

ಗುರುತು ಉಳಿಯಬೇಕಾದರೆ
ನೆತ್ತರೇ ಸರಿ ಶಾಯಿಯೆಂದುಕೊಂಡೆ,
ಎಗ್ಗಿಲ್ಲದೆ ಹರಿಸುತ್ತಿದ್ದ ಕಸಾಯಿಗಳ ಮೊರೆ ಹೋದೆ;
ಹೆಗ್ಗುರುತಾಗಿ ಎದ್ದೆದ್ದು ಕುಣಿಯುತ್ತಿದ್ದ ಸಾಲುಗಳು
ಒಮ್ಮೊಮ್ಮೆ ನನ್ನನ್ನೇ ಬೆಚ್ಚಿ ಬೀಳಿಸುತ್ತಿದ್ದವು;
ಮಸಿ ಮೆತ್ತಿದ ಕೈ ತೊಳೆದು
ಎಲ್ಲವನ್ನೂ ಬಿಟ್ಟು ದೂರ ಸಾಗಿ ಬಂದೆ!!

ಅಂದು ನಾ ಓದಿಸಬೇಕಿದ್ದವರಿಗೆ
ಓದಿಸಲಾಗದೆ ಕುಗ್ಗಿ ಹೋಗುತ್ತಿದ್ದೆ,
ಇಂದು ಎಲ್ಲವನ್ನೂ ಓದುವಂತವರಾಗಿದ್ದಾರೆ
ಆದರೆ ನಾ ಇನ್ನೂ ಏನನ್ನೂ ಬರೆದವನಲ್ಲ;
ಹಾಗಾದರೆ ಅವರು ಓದುತ್ತಿರುವುದು ನನ್ನನ್ನೇ?
ಇದ್ದರೂ ಇರಬಹುದು, ಯಾಕಂದರೆ
ಈಗ ನಾನು ನಾನಾಗಿದ್ದೇನೆ!!

                                     -- ರತ್ನಸುತ

ಚಿಗುರ ಹಬ್ಬ

ಕತ್ತರಿಸಿದ ಕರುಳಿಗೆ
ಕ್ಲಿಪ್ಪು ಹಿಡಿ ಸಿಕ್ಕಿದ್ದು
ಹಸಿದ ಹೊಟ್ಟೆಗೆ ಈಗ
ನಾಲಗೆಯ ಹಂಗು;
ತಾಯಿಗಿನ್ನೂ ಮಂಪರು,
ಎಳೆ ಬೆರಳ ಚೀಪುತ್ತ
ಹಸುಗೂಸಿನ ಅಳಲು;
ತಾಯೆದೆಯ ಜಿನುಗು!!

ಲೋಕಗಣ್ಣ ತಪ್ಪಿಸಿ
ಸುತ್ತಿಕೊಂಡ ಕೌದಿ
ಬೆತ್ತಲ ಸತ್ಯಗಳ
ಇನ್ನೆಷ್ಟು ಮರೆಸೀತು?
ಬಿಸಿ ಶಾಖದ ಹೊದಿಕೆ
ಇಟ್ಟು ಬೆಚ್ಚಗೆ ಚೂರು
ಹಳದಿ ಹರಡಲುಬಹುದು
ನೀಡದ ಹೊರತು!!

ಅಲುಗದ ಜನನಿ
ಹಾಸಿಗೆಯ ಸವರಿದಳು
ಅಲ್ಲೆಲ್ಲೋ ತಾಯ್ತನದ
ಹಳೆ ಜೋಜೋ ಲಾಲಿ;
ಅಮ್ಮಳಿಂದಮ್ಮಳಿಗೆ
ಮೊದಲ ಹಸ್ತಾಂತರ
ನೋವ ಮರೆತಳು ತಾನು
ತುಂಬು ನಗುವಲ್ಲಿ!!

ಕಣ್ಣು ಯಾರಂತೆ?
ಮೂಗು ಯಾರಂತೆ?
ಬಣ್ಣ ಕೆಂಪು
ಕಿವಿಯ ಆಲೆ ಇದ್ದಂತೆ;
ಸಣ್ಣ ಹುಟ್ಟು ಮಚ್ಚೆ
ಮೊದಲ ಹನಿ ಉಚ್ಚೆ
ಹಾಲು ಗಲ್ಲದ ಗಡಿಗೆ
ಪುಟಾಣಿ ಕವಿತೆಯಂತೆ!!

ಏರು ದನಿ ಅಳಲು
ಅದ ಮೀರಿ ನಿಂತ
ಮೌನ ಅಂಗಳವನ್ನೂ
ನಾಚಿಸುವ ಮೌನ;
ಕಣ್ಣ ಮಸಿ ತಡವಿ
ಅಲ್ಲಲ್ಲಿ ಬೆರಳು
ಗಾಳಿಯಲಿ ಎಡವಿ
ಹಣೆ ಚುಕ್ಕಿ ಬಣ್ಣ!!

ತೊಟ್ಟಿಲಿಗೆ ಸಿಂಗಾರ
ಕತ್ತಲಿಗೆ ಕರ್ಪೂರ
ಪ್ರತಿ ದಿನವೂ ಮನೆ ತುಂಬ
ತುಂಬು ಜಾತ್ರೆ;
ಕಾದ ಹಂಡೆ ನೀರು
ಕೆಂಡ ಆರದ ಒಲೆಯು
ಒಳಗೆ ಬೇಯಲು ಬಿಟ್ಟ
ಬೇವ ಪತ್ರೆ!!

ಸದ್ದೊಂದು ಹಾಡು
ಇರದಿದ್ದರೊಂದು
ಒಟ್ಟಾರೆ ಮನೆಯೊಂದು
ಗಂಧರ್ವ ಲೋಕ;
ಎಳೆ ಪಾದ ಸವರಿ
ಮೈ ಮರೆತ ಜೀವಕೆ
ಹಂತ ಹಂತಕೂ
ಲಭಿಸಿದಂತೆ ಮಧುರ ನಾಕ!!

                  -- ರತ್ನಸುತ

ಕಣ್ಣ ಹೊರಗಿನ ಕನಸುಗಳು

ಗುರುತಿನ ಚೀಟಿ ಮರೆತು ಬಂದ
ರಾತ್ರಿ ಪಾಳಿ ಕನಸುಗಳಿಗೆ
ಕಣ್ಣು ನಿಷೇಧ ಹೇರಿತ್ತು;
ಎಲ್ಲವೂ ಬಾಗಿಲಲ್ಲೇ ಕುಳಿತು
ಅಲ್ಲೇ ತುಸು ತೂಕಡಿಸಿ
ಸ್ಥಿತಿ ಪ್ರಜ್ಞೆ ಮರೆತು, ಮೈ ಹರಡಿಕೊಂಡು
ಕಣ್ಸುತ್ತಾಗಿ ಕಾಡುತ್ತಿವೆ!!

ರಾತ್ರಿಯೆಲ್ಲ ಬಿಡದ ಮಳೆ
ಇಳೆಯನ್ನೆಲ್ಲ ತಬ್ಬಿ ಹಸಿಯಾಗಿಸಿದರೂ
ದಣಿದ ನಾಲೆಗೆಗೆ ಎಲ್ಲವೂ ಅಪ್ರಸ್ತುತ;
ಕನಸಲ್ಲಿ ಮಾತಾಡಿಕೊಂಡದ್ದೆಲ್ಲ
ಕತ್ತಲಲ್ಲಿ ಲೀನವಾಗಿ ಹೋದದ್ದು
ಮಳೆ ನೀರು ಕೋಡಿಯಾಗಿ ಕೊಚ್ಚಿಹೋದದ್ದು
ಗೌಪ್ಯ ಸ್ಥಳಕ್ಕೆ!!

ಮಂಪರುಗಣ್ಣ ತೆರೆದಾಗ
ಕನಸಿನ ಆ ಕೊನೆಯ ಚಿತ್ರಣ
ಕಣ್ಮುಂದೆ ಅರಳಿ, ಉದುರಿ ಬೀಳುತ್ತೆ
ಇದ್ದ ಗೊಂದಲಕ್ಕೆ ಮತ್ತೊಂದ ಸೇರಿಸಿ;
ಈಗ ಮತ್ತೆ ಎಲ್ಲವನ್ನೂ ಮರುಕಳಿಸುವ
ಪ್ರಯತ್ನ ಸಾಗಿದೆಯಾದರೂ
ಎಲ್ಲವೂ ಅಸ್ಪಷ್ಟವಾಗಿವೆ, ಕಷ್ಟವಾಗಿವೆ!!

ಕನಸ ಪಾತ್ರಧಾರಿಗಳ ಹೆಸರು
ಅಲ್ಲಲ್ಲಿ ಬಿಡಿ ಅಕ್ಷರಗಳಾಗಿ ಹೊಳೆಯುತ್ತವೆ;
ಜೋಡಿಸುತ್ತ ಕೂತರೆ ಕೆಲಸ ಸಾಗದು
ಮನಸಿಗೆ ಬಂದ ಹೆಸರಿಟ್ಟರೆ
ಪಾತ್ರಗಳು ಮುಂದಕ್ಕೇ ಸಾಗದೆ ನಿರ್ಲಿಪ್ತವಾಗುತ್ತವೆ;

ಕಣ್ಣು ತುಂಬಿ ಬಂದಾಗಲೆಲ್ಲ
ಹೊರಗೆ ಕಾದ ಕನಸುಗಳು ಎಚ್ಚೆತ್ತು
ಒಳಗೆ ಹೊಕ್ಕವೋ ಎಂಬಂತೆ
ದಿಢೀರ್ ತಲಣದ ಕ್ಷಣ;
ಹಿಂದೆಯೇ ನೀಳ ಮೌನ!!

ಹಾಸಿಗೆ ಎಲ್ಲವನ್ನೂ ಹೇಳಲಾಗದೆ
ನಿಸ್ಸಹಾಯಕವಾಗಿ ಚಾಚಿತ್ತು
ಅಂತೆಯೇ ತಲೆ ದಿಂಬೂ ಸಹ;
ಕನಸುಗಳ ಸರತಿಯಲ್ಲಿ
ಕಣ್ಣು ಪೊರೆಗಟ್ಟುವ ಮುನ್ನ
ಕರಗುವ ಉಮ್ಮಸ್ಸಿನಲ್ಲಿದೆ!!

                                             -- ರತ್ನಸುತ

ಮೌನ ಕವನ

ಮೌನವ ಕೆದಕುತ್ತ ಹೋದಂತೆ
ನೂರು ಮಾತುಗಳು ಮೈದುಂಬಿ
ಅರಳಿಕೊಂಡ ದಾರಿಯಲ್ಲಿ
ಹೆಜ್ಜೆ ಸಪ್ಪಳವೂ ಮೂಕವಾಗಿತ್ತು!!

ಇದೊಂದು ರೀತಿ ಜಾಡ್ಯ;
ನನ್ನೊಳಗಿನ ಅನಂತ ಮೌನವ
ಲೋಕದೆಡೆಗೆ ಜೋಡಿಸಿ
ಅಳತೆ ಮಾಡುವ ಕುಸುರಿಯೆಂಬಂತೆ!!

ಹುಡುಕುತ್ತ ಸೋತು ಕೂತಾಗ
ಥಟ್ಟನೆ ಸುಳುವು ನೀಡಿ
ಎಚ್ಚೆತ್ತ ಮನಸಿನ ಸಂಭ್ರಮಕ್ಕೆ
ಮತ್ತೂ ಕರಣ ಕೊಡುವ ಕಿಡಿಗೇಡಿ!!
ಒಮ್ಮೊಮ್ಮೆ ಮಾತು ಎಟುಕುತ್ತದೆ,
ಮೌನಕ್ಕೆ ಏಣಿಯೆಂಬುದೇ ಇಲ್ಲ;
ಒಬ್ಬಂಟಿತನಕ್ಕೆ ಉರಿ ಘಾಟು ಅಥವ
ಜೇನ ಕುಂಭದಂತೆ!!

ಮೌನವ ಪದಗಳಲ್ಲಿ ಕಟ್ಟಿಟ್ಟು
ನಿಟ್ಟುಸಿರು ಬಿಟ್ಟ ಕವಿಗಳು
ಬೆನ್ನಲ್ಲೇ ಬಿಡುಗಡೆಗೊಂಡ ಅವುಗಳ
ಹಿಡಿಯುವಲ್ಲಿ ಸೋತವರೇ!!

ಮೌನ ಈಗ ಮತ್ತಾರದ್ದೋ ಕಿವಿಯಲ್ಲಿ
ಗುಯ್ಗುಡುತ್ತಿದೆ, ನಿರಾಕಾರವಾಗಿ!!

ಎಲ್ಲರೊಳಗಿನ ಮೌನ ಮಾತಾಗುತ್ತೆ;
ಕಿವಿಗೊಡುವ ಔದಾರ್ಯತೆ ಇದ್ದರೆ
ಮಾತಿಗೂ ಮಿಗಿಲಾಗುವ ತಾನು
ನಿಘಂಟಿನರ್ಥವ ಕಾಲದಿಂದಲೂ
ಖಂಡಿಸಿತ್ತಾ ಬರುತ್ತಿದೆ, ಮೌನವಾಗಿ!!

                             -- ರತ್ನಸುತ

ಜುಮುಕಿ ಕೊಡಲು ಹೋಗಿ

ಇರುಳ ಸಂತೆಯ ನಡುವೆ
ಕಳೆದೆ ವಜ್ರದ ಜುಮುಕಿ
ಒಂಟಿ ಜುಮುಕಿಯ ಗೋಳು ಕೇಳದೇನೆ ?
ಕುಂಟು ನೆಪಕೆ ನನ್ನ
ಮನದಲ್ಲೇ ನೆನೆದವಳು
ಇಂಥ ಹೊತ್ತಲಿ ನೆನಪು ಬಾರೆನೇನೇ?


ನೆರಳ ಸದ್ದಿಗೆ ಬೆಚ್ಚಿ
ಮನದ ಕಣ್ಣನು ಮುಚ್ಚಿ
ಯಾವ ದೇವರ ಬೇಡಿ ಕೂತೆ ನೀನು;
ನಿನ್ನ ಹೆಜ್ಜೆಯ ಗುರುತು
ಮಾತು ಬಿಟ್ಟಿವೆ ಈಗ
ಯಾರ ಕೇಳಲಿ ನಿನ್ನ ಕುರಿತು ನಾನು?

ತುಂಬು ಹುಣ್ಣಿಮೆಯಲ್ಲ
ಲಾಂದ್ರ ತರಲೂ ಇಲ್ಲ
ಮೌನ ಜಾಡನು ಹಿಡಿದು ಏಷ್ಟು ದೂರ?
ಹೆಸರ ಜಪಿಸಿ ಜಪಿಸಿ
ಮರೆತೆ ಸುಳುವಿನ ತಿರುವು
ಮುಚ್ಚಿ ಹೋದವು ಎಲ್ಲ ದಿಕ್ಕು ದ್ವಾರ!!

ಎಷ್ಟು ಮುತ್ತುಗಳಲ್ಲಿ
ಪೋಲಾಗಿ ಹೋದವೋ
ರೆಪ್ಪೆಗೊಂದು ಲೆಕ್ಕೆ ಇಡಲು ಹೇಳು;
ತಡ ಮಾಡಿ ಬರುವೆ ನಾ
ತಲುಪಿ ಹೇಗಾದರೂ
ತುಟಿಯ ಒತ್ತಿ ನನ್ನ ಮಾತು ಕೇಳು!!

ಕಿಸೆಯಲ್ಲಿ ಬಚ್ಚಿಟ್ಟ
ಕಳೆದ ಜುಮುಕಿಯನು
ಕಿವಿಗೊಟ್ಟು ಏರಿಸಿಕೋ ಗುಟ್ಟಿನಂತೆ;
ಕಚ್ಚುವೆ ಕೆನ್ನೆಯನು
ಸವರಿ ಸಾರಿಸಿ ಹಾಗೆ
ಸಿಟ್ಟಾಗು ನಸು ನಗುತ ಮಗುವಿನಂತೆ!!

                              -- ರತ್ನಸುತ

ಜನ್ಮಾಷ್ಟಮಿ ಹನಿಗಳು

ಕೃಷ್ಣನೆಂಬಾತನು
ಮನೆ ತುಂಬ ಗುರುತ ಬಿಟ್ಟ;
ಬೈಗುಳ ತಿನ್ನುತ್ತಲೇ 
ಸಾರಿಸಿತು ಮುಸುರೆ ಬಟ್ಟೆ!!


ಶೋಕೇಸಿನಲ್ಲಿ
ಧೂಳಿಡಿದ ಕೊಳಲನ್ನು
ಊದುವ ಸಲುವಾಗಿ
ಕಿಟಕಿಯಿಂದ ಕದ್ದು
ಬೀಸಿ ಬಂತೊಂದು ಗಾಳಿ;
ಅಪ್ಪಿ ತಪ್ಪಿ
ಕರ್ಟನ್ನು ಹಾರಿತು ನೋಡಿ
ಕಿಟಕಿ ಬಾಗಿಲು ಮುಚ್ಚಿಕೊಂಡಿತು
ಕೊಳಲಿಲ್ಲ ಕೃಷ್ಣನ ಕೈಲಿ!!

ರೆಫ್ರಿಜಿರೇಟರಲ್ಲಿ ಇಟ್ಟ ಬೆಣ್ಣೆ
ಎಕ್ಸ್ಪಯರ್ ಆಗಿರುವುದನ್ನ ಗಮನಿಸದ
ತುಂಟ ಕೃಷ್ಣ
ಒಂದೇ ಬಾಯಿಗೆ ನುಂಗಿ
ಫುಡ್ ಪಾಯ್ಸನ್ ಆದ ಸುದ್ದಿ
ಫ್ಲ್ಯಾಷ್ ನ್ಯೂಸ್ ಆಯ್ತಂತೆ!!

ರಾಧೆಯರು ಓದುತ್ತಿರುವ ಶಾಲೆಗಳಲ್ಲಿ
ದುಶ್ಶಾಸನರಂಥ ಟೀಚರ್ಗಳು ಇದ್ದಾರಂತೆ;
ಎಲ್ಲಾ ಶಾಲೆಗಳಲ್ಲೂ
ಕೃಷ್ಣರಿಗೊಂದು ಸೀಟು ಮೀಸಲಿಡಬೇಕೆಂದು
ರಾಧೆಯರ ಹೆತ್ತವರ ಒತ್ತಾಯ!!

                               -- ರತ್ನಸುತ

ನನ್ನರಸಿ

ನಿನ್ನ ಮಾತಿಗೆದುರು ಮಾತು
ಕನಸಲೂ ಅಸಂಭವ
ನಿನ್ನ ಗೆದ್ದ ಅಸ್ಮಿತೆಗಳು
ಆದವು ಪರಾಭವ

ನಿನ್ನ ಮೌನ ವೀಣೆ ತಂತಿ
ನಾದ ನನ್ನ ಮನದಲಿ
ನಿನ್ನ ಪಾದ ಮಧುರ ಕಾವ್ಯ
ಗುರುತ ಬಿಟ್ಟೆ ಎದೆಯಲಿ

ನಿನ್ನ ಸಿಗ್ಗು ಜೊನ್ನ ಮಳೆಯು
ಹಿಡಿದ ನಾ ಸರೋವರ
ನಿನ್ನ ಮುನಿಸಿನಾಚೆ ನರಳೋ
ಭೀಕರತೆಯೂ ಸುಂದರ

ನಿನ್ನ ಜಡೆಯ ಬಿಂಕ ನಡೆಗೆ
ಟೊಂಕದಲ್ಲೇ ಉಳಿವೆ ನಾ
ನೆನ್ನೆ ಮೊನ್ನೆ ನಮ್ಮ ಬೇಟಿ
ಪ್ರೇಮವು ಪುರಾತನ

ನಿನ್ನ ಹಣೆಗೆ ನನ್ನ ಪ್ರತಿಮೆ
ತುಟಿಯ ಗಾಯವಾಗುವೆ
ನೀನು ಅಡಗಿಸಿಟ್ಟ ಗುಟ್ಟಿನೊಳಗೂ
ಭಾಗಿಯಾಗುವೆ

ನೀನು ಕಂಡ ಕನಸಿಗೆಲ್ಲ
ನನ್ನ ನಿತ್ಯ ಕಾವಲು
ಕಣ್ಣ ನೀರು ಹಿಡಿದು ನೋಡು
ಕಾಣ್ವೆ ನನ್ನ ಅದರಲೂ

ನಿನ್ನ ಬಿಸಿಲ ಮಾರ್ಗ ಮಧ್ಯೆ
ನಾನು ತಂಪು ಮಜ್ಜಿಗೆ
ನಿನ್ನ ತೂಕಡಿಕೆ ಬಯಸಿ
ಭುಜವ ಕೊಡುವೆ ಮೆಲ್ಲಗೆ

ನೀನು ಬಾಳಿನಾದಿ ಅಂತ್ಯ
ಮಧ್ಯಂತರ ಮಾಧುರಿ
ಜಾದು ಕೋಲಿನಿಂದ ನನ್ನ
ಸೆಳೆದುಕೊಂಡ ಕಿನ್ನರಿ!!

                -- ರತ್ನಸುತ

ಪ್ರೇಮ ಸ್ವಗತ

ನೆನಪು ಇಷ್ಟು ಘಾಡವಾಗಿ
ಕಾಡ ಬೇಕು ಅನಿಸಲಿಲ್ಲ
ಎಲ್ಲ ನೀನು ಬಿಟ್ಟು ಹೋದ
ಕಾಲುಗುಣದ ಮಹಿಮೆ;
ಮಾತಿನಲ್ಲಿ ತೊದಲಿಕೊಂಡ
ಗೀತೆ ನಿನ್ನ ಹೆಸರು ಮಾತ್ರ
ರಾಗಬದ್ಧವಾದರಲ್ಲಿ
ನನ್ನದೇನು ಹಿರಿಮೆ?!!ಕಣ್ಣಿನಲ್ಲೇ ಬಿಚ್ಚಿಕೊಂಡ
ನೂರು ಸಂಚಿ ಪ್ರೇಮ ಪತ್ರ
ಹಂಚಿಕೊಂಡ ಗಾಳಿಯಲ್ಲಿ
ಘಮಲಿನಂತೆ ಭಾಸ;
ನಿನ್ನ ಉಸಿರ ಬಿಟ್ಟುಗೊಡದೆ
ಗುಪ್ತವಾಗಿ ಮಡಗಿಕೊಂಡು
ಹೊಸತು ಉಸಿರ ಸೇರುತಿಲ್ಲ
ತುಂಟ ಶ್ವಾಸ ಕೋಶ!!

ಬುಗುರಿ ಮಾತು ಎದೆಯನೇರಿ
ಮೂಡಿ ಬಿಟ್ಟ ಅಕ್ಷರಕ್ಕೆ
ನಿನ್ನ ಸ್ಪರ್ಶದಿಂದ ಮತ್ತೆ
ಜೀವ ಬಂತು ನೋಡೆಯಾ?
ನೀನು ನಾನು ಕೂಡಿ ಮೊದಲು
ಮಾತನಾಡಿಕೊಂಡ ಜಾಗ
ಕೆಂಗುಲಾಬಿ ತೋಟವಾಯ್ತು
ಸುಳ್ಳ ನಂಬಲಾರೆಯಾ?

ಜೇನ ಹಿಂಡಿದಾಗ ನಿನ್ನ
ಕೆನ್ನೆ ಗುಂಡಿಯಲ್ಲಿ ಒಮ್ಮೆ
ಮಿಂದು ಎದ್ದ ಸುಖವ ಮತ್ತೆ
ಕಂಡೆ ನಾನು ಖಂಡಿತ;
ನಿನ್ನ ಅಮಲಿನೊಲುಮೆಯಲ್ಲಿ
ತೇಲಿದಷ್ಟೇ ನನ್ನ ಬದುಕು
ಅದರ ಆಚೆ ಉರುಳಿ ಬಿದ್ದ
ಕೋಟೆ ಮೇಲೆ ಬಾವುಟ!!

ಕೆತ್ತಲಲ್ಲ ನಾನು ಕಲ್ಲು
ಹಿಡಿಗೆ ಸಿಕ್ಕಿ ಬಿದ್ದ ಧೂಳು
ನಿನ್ನ ಒಡಲ ಒರಟು ಮೂಲೆ
ನನ್ನ ಕಳ್ಳ ಕಿಂಡಿ;
ನಿನ್ನ ಸೆರಗಿಗೊಂದು ಗಂಟು
ನಿನ್ನ ಒರಗಿಗೊಂದು ಮಾತು
ನಿನ್ನ ಕನಸಿನೂರ ಕರೆಗೆ
ನಾನು ಮೂಖ ಬಂಡಿ!!
               
                 -- ರತ್ನಸುತ

You n me

When I see you
And you see me
You fly away 
But I stay still
I wonder how
You feel so high
I can't reach you
Though can feel the sky
If you ask me
For what I want
I would rather ask
Your mighty wings
I would give you
My house in return
My old school bag
And music strings...
       -- Rathnasutha

ಕಡಲ ಹಸಿವು

ಗಡಿಯಾರ ಎಂದಿನ ಹುರುಪಿನಲ್ಲೇ
ಒಂದೊಂದೇ ಹೆಜ್ಜೆ ಮುಂದಿಕ್ಕುತ
ಎಲ್ಲೂ ತೊಡರದಂತೆ ಸಾಗುತ್ತಿತ್ತು;
ಅಲ್ಲಿ ನೆರೆದಿದ್ದವರೆಲ್ಲ ಕಂಠ ಪೂರ್ತಿ ಕುಡಿದು
ಕುಣಿದು, ಕುಪ್ಪಳಿಸಿ ಲೋಕವನ್ನೇ ಮರೆತಿದ್ದರು!!

ತಟವನ್ನೇ ಬಯಸದ ಹಡಗು
ಅಲೆಗಳ ಸ್ಪರ್ಶ ಸುಖದಲ್ಲಿ ಲೀನ;
ಕಣ್ಣು-ಕಣ್ಣು ಕೂಡಿದ ಬೆಳವಣಿಗೆ
ಮನಸು-ಮನಸುಗಳ ಬೆರೆಸಿ
ದೇಹ-ದೇಹಗಳ ಬೆಸೆದು
ಅಧರ-ಅಧರಗಳ ಒಗ್ಗೂಡಿಸಿದ್ದು
ಅದೇ ಮೈ ಮರೆತ ಹಡಗಿನ ಮೇಲೆ!!

ಹೃದಯಂಗಮ ಪ್ರೇಮಕ್ಕೆ ನೂರು ಅಡ್ಡಗಾಲು;
ಮಂಜುಗಡ್ಡೆಯ ಕೆಕ್ಕರುಗಣ್ಣು
ಹಡಗಿನ ಮೂಗು ಮುರಿಯಲೆಂದು
ಸಂಚು ರೂಪಿಸಿದ್ದೇ ಮೊದಲಾಯ್ತು;
ಅಲ್ಲಿಯವರೆಗೆ ನೇವರಿಸಿ ಮುದ್ದಾಡಿದ ಅಲೆ
ಅಪ್ಪಣೆಯಿಲ್ಲದೆ ಸೀಮೆ ದಾಟಿ
ಸಿಕ್ಕ ಸಿಕ್ಕಲ್ಲಿ, ಸಿಕ್ಕ ಸಿಕ್ಕಂತೆ ನುಸುಳಿದಾಗ
ಲಂಗರು ಹಣೆಗೆ ಹಸ್ತಿವಿಟ್ಟು
ಬಂದರನ್ನು ಎದುರು ನೋಡತೊಡಗಿತು!!

ಮೋಸದ ಹಲ್ಲು ಮಸೆದಾಗ
ಉಲ್ಬಣವಾದ ಶಾಖಕ್ಕೆ
ಜೋಡಿ ಹೃದಯಗಳು ಕುದಿಯುತ್ತಿದ್ದವು;
ಕಡಲ ರೌದ್ರತೆಗೆ ತುತ್ತಾಗದಂತೆ
ನಿದ್ದೆಗೆ ಜಾರಿದ ಕಣ್ಣುಗಳು ನಾಳೆಗಳನ್ನೆಣಿಸುತ್ತಿದ್ದರೆ,
ಎಚ್ಚರವಿದ್ದವು ಕೊನೆಗೊಮ್ಮೆ ಅಳುತ್ತಿದ್ದವು!!

ತುಂಡಾಗಿ ಮುಳುಗುತ್ತಿದ್ದ ಹಡಗಿನೊಳಗೆ
ಸಮಯ ಮಹತ್ತರವಾಯಿತು;
ಆಗಲೇ ಅದನ್ನು ನಿಲ್ಲಿಸಿ ದಾಖಲಿಸಲಾಯಿತು!!

"ಪ್ರೇಮ ದೋಣಿಯಲಿ ಒಬ್ಬರಿಗಷ್ಟೇ ಸ್ಥಾನ,
ಮತ್ತೊಂದು ಜೀವದ ಬಲಿದಾನ"
ಇದು ಯಾವ ಪ್ರೇಮ ಗ್ರಂಥದಲ್ಲೂ ಉಲ್ಲೇಖಿಸದ
ಹೊಸ ವ್ಯಾಖ್ಯಾನವಾಯಿತು!!
                                          -- ರತ್ನಸುತ

ಸೆಲ್ಫೀಗಳು

ತಲೆ ಎಡಕ್ಕಿಟ್ಟರೆ ಬಲಕ್ಕೆ
ಬಲಕ್ಕಿಟ್ಟರೆ ಎಡಕ್ಕೆ
ಕೈ ಚಾಚಿದಷ್ಟೇ ಜೂಮು
ಮುಖ ಕಾಣುವಷ್ಟೇ ಫ್ರೇಮು
ಸರಿ ಬರದಿರೆ ಡಿಲ್ಲೀಟು
ಮತ್ತೊಮ್ಮೆ ರಿಪ್ಪೀಟು
ಒಬ್ಬಂಟಿಗ ನಾವಲ್ಲ
ಅವಲಂಬಿತರಾಗಲ್ಲ!!

          -- ರತ್ನಸುತ

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...