Thursday 30 November 2017

ನನ್ನ ಕನಸು


ಪಕ್ಕದಲ್ಲೇ ನನ್ನ ಕನಸಿಗೆ ನಿದ್ದೆ ಹೊದಿಸಿ
ನಾ ಎಚ್ಚರಗೊಂಡಿರುತ್ತೇನೆ
ತೂಗು ತೂಕಡಿಕೆಯಲಿ, ನಡು ರಾತ್ರಿ ಮಂಪರಲಿ...

ಪೂರ್ತಿ ಮೈ ಮರೆಯದೆ, ಗೊರಕೆ ಹೊಡೆಯದೆ
ಕೈ-ಕಾಲು ಬೀಸದೆ, ಕೆಮ್ಮದೆ
ಒಮ್ಮೊಮ್ಮೆ ಏದುಸಿರು ಬಂದರೂ
ಎಚ್ಚರಿಕೆಯಿಂದ ಉಸಿರಾಡುತ್ತೇನೆ
ನನ್ನ ಕನಸು ತುಸು ಅಲುಗಿದರೂ ವಿಚಲಿತನಾಗಿ!!



ಕನಸು ಹುಟ್ಟಿದ ದಿನ ನಾನೂ ಹುಟ್ಟಿದೆ
ತಾನು ನನಗೆಷ್ಟು ಪರಿಚಿತನೋ, ಅಂತೆಯೇ ನಾನೂ
ಹಾಗಾಗಿ ನಮ್ಮಿಬ್ಬರಿಗೂ ಒಂದೇ ವಯಸ್ಸು
ಗಾತ್ರದಲ್ಲಿ ಏರುಪೇರಾದರೂ
ಪಾತ್ರದಲ್ಲಿ ಮಾತ್ರ ಇಬ್ಬರೂ ಸಮಾನರು
ಆಟದಲ್ಲಿ ತಾ ನನ್ನ ಗುರು, ಪಾಠದಲ್ಲೂ..



ಕೆಲವೊಮ್ಮೆ ಕನಸು ಕೈಜಾರಿ ಪೆಟ್ಟಾಗುತ್ತದೆ, ನನಗೆ
ಎಲ್ಲಿದ ಕಣ್ಣೀರು ಒಳಗೆ ಬುಗ್ಗೆಯಾಗಿ
ಮತ್ತೆ ತಣ್ಣಗಾಗುತ್ತದೆ, ಹೊರಗೆ ಕನಸು ಆಗಾಗಲೇ
ಯಥಾ ಸ್ಥಿತಿಗೆ ಮರಳಿ ನಲಿಯುತ್ತ
ನಕ್ಕು ಗೇಲಿ ಮಾಡುತ್ತಲೇ.. ಸೋಲುತ್ತೇನೆ!



ಕನಸಿಗೆ ಈಗ ಕಾಲು ಬಂದಿದೆ
ಮಂಡಿ ಚಿಪ್ಪು ಗಟ್ಟಿಯಾಗಿ ಅಚಲ ನಿಲುವು
ಹೆಜ್ಜೆ ಇಟ್ಟ ಕಡೆ ದಾರಿ ಸಿಕ್ಕು
ಹತ್ತು ದಾಟುವಷ್ಟರಲ್ಲಿ ಮತ್ತೆ ನಾಲ್ಕು ಕಾಲು
ಕನಸಿಗೆ ಓಡುವ ಬಯಕೆ
ಅದಕ್ಕಿನ್ನೂ ಬೆಳೆಯಬೇಕು, ಬಲಿಯಬೇಕು



ಬೇರೆ ಕನಸುಗಳ ಕಂಡರೆ ಕೆಂಡಾ-ಮಂಡಲ
ಕಿಚ್ಚು ಹಾದು ಬಂದು ಸುಡುವಷ್ಟು ಕೋಪ
ಸ್ವಾರ್ಥದಲ್ಲೂ ಹಠದಲ್ಲೂ ಅಮಿತ ಹಾಗೂ ಹಿತ,
ಕನಸು ನಮ್ಮ ನಿಯಂತ್ರಿಸುವುದೇ ವಿನಃ, ನಾವು?
ಎಷ್ಟಾದರೂ ಕಣ್ಣಲ್ಲಿಟ್ಟು ಉಕ್ಕುವ ಉತ್ಸಾಹಕ್ಕೆ ಮಣಿದು
ಒಲುಮೆ ಇಮ್ಮಡಿಗೊಂಡಷ್ಟೂ ಹತ್ತಿರವಾದೆವು..



ದಿನಾಲೂ ಇದೇ ಕನಸು, ಇನ್ನು ಮುಂದಕ್ಕೂ
ದೊಡ್ಡದಾಗಿ ನನ್ನ ಹಿಡಿತಕ್ಕೆ ಸಿಗದಿದ್ದಾಗ
ಸ್ವತಂತ್ರವಾಗಿ ಹಾರಲು ಬಿಟ್ಟು ಬಿಡುತ್ತೇನೆ
ಆದರೂ ನಿದ್ದೆಗೆಡುವುದನಂತೂ ಬಿಡಲಾರೆ
ಕೆಲ ಕನಸುಗಳೇ ಹಾಗೆ, ನಿದ್ದೆಗೆಡಿಸುತ್ತವೆ...



                                                 - ರತ್ನಸುತ

ಮಕ್ಕಳಿಗೆ ಗೊಂಬೆಗಳು ಇಷ್ಟ


ಮಕ್ಕಳಿಗೆ ಗೊಂಬೆಗಳು ಇಷ್ಟ, ಮುಖವಾಡಗಳೂ
ಜಾತ್ರೆಯಿಂದ ತಂದ ಕೋತಿಯ ನಕಲು
ಅವಕ್ಕೆ ಎಲ್ಲಿಲ್ಲದ ಖುಷಿ ಕೊಟ್ಟದ್ದು
ಕಳಚಿದಲ್ಲಿಗೆ ಹಾಗೇ ಕಮರಿ ಹೋಯಿತು


ಅನಿಮೇಟಡ್ ಚಿತ್ರಗಳಿಗೆ ಅವು ಸ್ಪಂದಿಸುವಷ್ಟು
ನಿಜ ಮುಖಗಳ ಪೊಳ್ಳು ಭಾವನೆಗಳ ಒಪ್ಪುವುದಿಲ್ಲ
ಅಲ್ಲಿ ಸತ್ಯವನ್ನ ಹೇರುವ ಸುಳ್ಳುಗಳ ನಂಬದ ಜಾಣ್ಮೆಯಿದೆ
ಸುಳ್ಳುಗಳ ಸುಲಭಕ್ಕೆ ಸ್ವೀಕರಿಸುವ ಮುಗ್ಧತೆಯಿದೆ



ಮಕ್ಕಳು ಪ್ರಚೋದನೆಗೊಳ್ಳಲಿಕ್ಕೆ ಕಾರಣಗಳಿರುತ್ವೆ, ಅಂತೆಯೇ ಧಿಕ್ಕರಿಸಲಿಕ್ಕೂ
ಸಾವಿರಕ್ಕೆ ಖರೀದಿಸಿದ ಬಾರ್ಬಿಗಿಂತ
ಅಡುಗೆ ಪಾತ್ರೆಗಳೇ ಆಪ್ಯಾಯಮಾನವೆನಿಸಿಕೊಳ್ಳುವುದು
ನಮ್ಮಂಥ ದೊಡ್ಡೋರ ಯೋಚನೆಗೆ ನಿಲುಕದ ವಿಷಯ
ಅದಕ್ಕೇ ಅವು ಯಾವುದಕ್ಕೂ ಸಮರ್ಥನೆ ನೀಡುವುದಿಲ್ಲ



ಹೊಂಗೆ ಎಲೆಯ ಪೀಪಿ ಸದ್ದು
ತುಟಿಗೆ ಕಚಗುಳಿ ಇಟ್ಟು ಕೊಡುವ ಮಜವನ್ನ
ಮಕ್ಕಳ ಕಣ್ಣಲ್ಲಿ ನೋಡಿ ಆಸ್ವಾದಿಸಬಹುದು
ಇತ್ತ ಬಟನ್ನೋತ್ತಿ ಮೂಡುವ ಇಂಗ್ಲಿಶ್ ಪದ್ಯಗಳು ಸಪ್ಪೆ ಅನಿಸುತ್ವೆ



ಇನ್ನೂ ಮಾತು ಬಾರದ ಹಸುಳೆಗಳ
ಚೀರಾಟ, ರಂಪಾಟಗಳಿಗೊಂದೊಂದು ಅರ್ಥ
ಅಂತೆಯೇ ಅವುಗಳ ಮೌನಕ್ಕೂ
ಇವ್ಯಾವುದನ್ನೂ ಕಾಂಪ್ಲಿಕೇಟ್ ಮಾಡಿಕೊಳ್ಳದೆ
ಆನಂದಿಸುವ ಬಿದ್ಧಿ ದೊಡ್ಡವರೆನಿಸಿಕೊಂಡವರಿಗೆ ಬರುವುದಾದರು ಯಾವಾಗ?



                                                           - ರತ್ನಸುತ 

ಹಂಗು ತೊರೆವುದರ ಅರಿವು ನನಗೂ ಇದೆ


ಹಂಗು ತೊರೆವುದರ ಅರಿವು ನನಗೂ ಇದೆ
ಆದರೆ ಅಂಜುತ್ತೇನೆ ಮರುಕ್ಷಣಗಳ ನೆನೆದು
ಕೈ ಹಿಡಿದ ನೆನಪುಗಳು ಕೈಜಾರುವ ಭಯ
ಒಬ್ಬಂಟಿತನ ನನ್ನ ಹೀಯಾಳಿಸಿಬಿಟ್ಟರೆ?


ಗಂಟು ಬಿದ್ದ ಮುಖವ ಬಿಡಿಸುವ ಪ್ರಮಾದ
ಕೋಪ ತುಂಬಿದವರ ಎದೆಗೆದೆ ತಾಕಿಸುವ ಹಸಿವು
ವಿಕೋಪ ಹಂತ ಹಂತವಾಗಿ ಬೇಟೆಯಾಡಿ
ಉಸಿರನ್ನೇ ಕಸಿಯುವಷ್ಟು ಕ್ರೌರ್ಯ ಉಂಟಾಗಬಹುದು


ಹೊಸಿಲು ದಾಟಿ ಬಂದವರು, ಮೆಟ್ಟಿ ನಡೆದಾರು
ತಣಿಗೆ ತುತ್ತಿನೊಳಗೆ ಲೋಪ ಹುಡುಕುವರು
ಕಳಚಿಟ್ಟ ಮೌಢ್ಯಗಳ ಮತ್ತೆ ಧರಿಸಿಯಾರೆಂಬ ಭಯ
ಶಬ್ಧಗಳ ವ್ಯಾಖ್ಯಾನ ಎಂದೂ ನೇರವಲ್ಲ


ಚಾವಣಿ ಚಕ್ಕೆಗಳಾಗಿ ಉದುರಿ ಬೀಳುವ ವೇಳೆ
ನೆಲವ ಸಾರಿಸಿಕೊಂಡ ಬುದ್ಧಿ ಯಾತಕ್ಕೆ
ಕೋಪಗಣ್ಣಿನ ನೋಟ ಈಟಿ ಮೀಟಲು ಆಗ
ನಗೆ ನೂಕು ನುಗ್ಗಲು ಮರಣ ಕೂಪಕ್ಕೆ


ಯಾವ ಸುಖಕಾಗಿ ಮನೆಯ ನಾಲ್ಕು ಗೋಡೆ?
ಬಯಲಾಗುವಾಗ ಗುಟ್ಟು ದಿಕ್ಕುಗಳಲಿ
ವಿಷಕಾರಿ ಕಹಿಯಿಂದ ಹೆಪ್ಪುಗಟ್ಟುವ ಮಾತು
ಒದ್ದಾಡಿವೆ ಜೀವ ಮನದ ಸಿಕ್ಕುಗಳಲಿ



ಹಿಂದೆ ಉಳಿದ ಚುಕ್ಕಿ ಹೆಸರಿಗೆ ಮಸಿಯಾಗಿ
ನಾಳೆಗಳ ಬರವಸೆಯ ಹುಸಿಯಾಗಿಸಬಹುದು
ಎಷ್ಟೇ ಆಳದ ಗಾಯವಾಗಿರಲಿ, ನಗುವನ್ನು
ಹೊಸೆದು ಅದಕೆ ಕಸಿ ಮಾಡಬಹುದು...



                                                - ರತ್ನಸುತ 

ಮೊದಲ ಬಾರಿ ಚಿಟ್ಟೆಯ ಹಿಡಿಯಲೆತ್ನಿಸಿದ


ಮೊದಲ ಬಾರಿ ಚಿಟ್ಟೆಯ ಹಿಡಿಯಲೆತ್ನಿಸಿದ
ಸಿಗದೆ ಹಾರಿ ಹೊರಟಾಗ
ಬೆರಳಿಗೆ ಸೋಕದ ಬಣ್ಣ ಕಣ್ಣ ತುಂಬಿತ್ತು
ಹನಿಯಾಗಿ ಜಾರಿ ಕೆನ್ನೆ ತುಂಬ ಪಸರು

ಕತ್ತಲನ್ನ ಬೆಳಕಲ್ಲಿ ನಿಂತು ದಂಡಿಸುವ
ಮಿಂಚು ಹುಳುವಿಗೆ ದೂರು ನೀಡುವ
ನೆರಳೊಟ್ಟಿಗೆ ಆಟವಾಡುತ್ತಲೇ ಹೌಹಾರಿ

ಕತ್ತಲಾವರಿಸಲು ಬಿಕ್ಕುವ.. ನೀರವ..

ಅತ್ತ ಮರುಗಳಿಗೆ ನಗು
ನಕ್ಕ ತರುವಾಯ ಕೋಪ
ಕೋಪಕ್ಕೆ ಹಲ್ಲು ಮಸೆದವನಿಗೆ
ಅನ್ನದ ಅಗಳು ಕಬ್ಬಿಣದ ಕಡಲೆ



ನಿದ್ದೆಯಲಿ ಮಿಂದೆದ್ದ ಕನಸುಗಳು ಅಸ್ಪಷ್ಟ
ಕಣ್ಣ ನೇವರಿಸುತ್ತ ಎದೆಗಾನಿಕೊಳ್ಳುವ
ಉಸಿರಲ್ಲಿ ಕಡಲ ದಾಟಿ ಬಂದ ದಣಿವು
ಖುಷಿ ಕೊಡುವ ಕೃಷಿಕನಿಗೆ ಹೊತ್ತು ಮೀರಿ ಹಸಿವು



ಅಕ್ಷರ ಗೊತ್ತಿರದ ಕೈ ಶಾಸನ ಗೀಚಲು
ಸಂಶೋಧಕನ ಸೋಗಲಿ ಅರ್ಥ ಹುಡುಕಾಟ
ಹಠ ಮಾಡಿದ ಪ್ರತಿಯೊಂದು ಗಳಿಗೆಯಲೂ
ಈ ಅಲ್ಪನ ಕಲ್ಪನೆಗೆ ಎಲ್ಲಿಲ್ಲದ ಪರದಾಟ



ತೆರೆ ಮರೆಯ ಗುಮ್ಮನಿಗೂ
ಅಕ್ಕರೆಯ ಅಮ್ಮನಿಗೂ ಇವನೇ ಮುದ್ದು
ಮೌನದ ಮಡಿಲಲ್ಲೂ ಇವನದ್ದೇ ಸದ್ದು
ಗಾಂಭೀರ್ಯದಲ್ಲೂ ಮುತ್ತಿಡುವೆ ಕದ್ದು!!



                                    - ರತ್ನಸುತ 

ಅವ ಮತ್ತು ಕವಿತೆ


ಆಗಷ್ಟೇ "ಜೋ..." ಹಾಡಿ ಮಲಗಿಸಿ
ಹಿಡಿಗೆ ಎಡಗೈ ತೋರ್ಬೆರಳ ಕೊಟ್ಟು
ಇತ್ತ ಬಲಗೈ ಕವಿತೆ ಬಯಸುತಿದೆ...



ಎಡಗೈಯ್ಯ ಹಿಡಿ ತುಂಬಿ ಪದಗಳು
ಹೊರಚಲ್ಲಿದವುಗಳನ್ನ ಹೆಕ್ಕಿ ಹೆಕ್ಕಿ
ರೂಪುಗೊಳ್ಳುತ್ತಿದೆ ಸುಂದರ ಕವಿತೆ
ಮಗುವಿನ ಮುದ್ದು ಮೊಗವ
ನಕಲು ಮಾಡಲಾಗದಷ್ಟು ಸುಂದರ..!



"ಮಗು ಬೆಚ್ಚಿದರೆ ಬೆಚ್ಚುವುದು ಕವಿತೆ
ಎಚ್ಚರಗೊಂಡರೆ ಪೂರ್ಣವಿರಾಮ
ಮಗು ಅತ್ತರೆ ಬಿಕ್ಕುವುದು ಕವಿತೆ
ಕಣ್ಣೀರ ಪಸೆ ಕಾವ್ಯ ಬರಹಕ್ಕೂ ಸುಗಮ"



ಪಿಳಿ ಪಿಳಿ ಕಣ್ಣು ಬಿಟ್ಟ ಮಗು
ಓದುತ್ತ ಕುಳಿತಂತೆ ಕನಸು ಬಿದ್ದಾಗ
ಒಮ್ಮೆಲೆ ಚಕಿತನಾದವನಂತೆ ಎದ್ದೆ,
ಅವ ಬುದ್ಧನ ಮೌನ ತಾಳಿ ಮಲಗಿದ್ದ...
ಖಾಲಿ ಉಳಿದ ಹಾಳೆಗಳು ಚೆಲ್ಲಿಕೊಂಡಿದ್ದವು
ಕೆಲವೊಂದಷ್ಟು ಅಡಿಗೆ ಸಿಲುಕಿ ಸುಕ್ಕಾಗಿ
ಅಕ್ಷರಗಳು ನಲುಗಿಹೋಗಿದ್ದವು
ಇತ್ತ ಕವಿತೆ ಅರಳುತ್ತಲೇ ಇತ್ತು ಹಾಸಿಗೆಯ ತುಂಬ...



"ಕಿರುನಗೆಯು ಕೋಳದಲ್ಲಿಯ ಸಣ್ಣ ತರಂಗ
ಮನ ತಟ್ಟುವ ತನಕ ಹುಟ್ಟುತ್ತಲೇ ಬಂದು
ಮುಟ್ಟುತ್ತಲೇ ಮರೆಯಾಯಿತು ಶಬ್ಧ
ಸ್ವರದೊಂದಿಗೆ ಮೌನಕೋಶದ ಯುದ್ಧ"



ಹಿಡಿ ಸಡಿಲಿಸಿ ಹೊರಳುವ, ಮಂಚದಂಚಿನ ದಿಂಬು
ಕೊಂಚವಾದರೂ ಮುದ್ದಿಸದಿದ್ದರೆ ಹೇಗೆ?!
ಎಚ್ಚರ ಘಂಟೆ ಬಡಿದಂತೆ ಹಾಸಿಗೆಯೆಲ್ಲ ಸಾರಿಸಿ
ಸಿಕ್ಕವನನ್ನ ಪಕ್ಕಕ್ಕೆ ಎಳೆದು ನಿರಾಳನಾದೆ,
ಅಪ್ಪಳಿಸಬಹುದಾದ ಕವಿತೆ ಆಕಳಿಸುತ್ತಿದೆ ಮಡಿಲಲ್ಲಿ,
ಬಿಗಿದಿಟ್ಟೆ ಎದೆಗಪ್ಪಿ, ಸ್ಪಂದಿಸಿದ ಬರಲೊಪ್ಪಿ



ಸಂಕಲನಗಳ ಹೊರೆಯ ಹೊತ್ತ ಕಣ್ಣುಗಳವು
ಇಳಿಸುವ ಶಕುತಿ ಬೆರಳುಗಳಿಗಿಲ್ಲ
ಗೋಜಲಿನ ಸುಳಿಯಲ್ಲಿ ಸಿಗುವ ಮೋಜಿನ ಪದ್ಯ
ಪಟ್ಟು ಬಿಡದ ಗೀಟಿಗೆಲ್ಲಿ ಬುದ್ಧಿ?



                                                 - ರತ್ನಸುತ

ಕಥೆಗಳೇ ಹೀಗೆ


ಒಂದು ಸಣ್ಣ ಕಥೆಯೆಂದೇ ಮೊದಲಾಗಿ
ನಿದ್ದೆಗೆ ಜಾರುವ ತನಕ ಜಗ್ಗಿಕೊಂಡಿತು
ಅಲ್ಲಿ ಹುಟ್ಟಿದವರು ಸತ್ತರು, ಅವರಿಗೆ ಹುಟ್ಟಿದವರೂ
ಆದರೆ ಕಥೆ ಮಾತ್ರ ಮುಗಿದಿಲ್ಲ ಎಂದಿನಂತೆ


ಗೋರಿ ಕಟ್ಟಿದ ಜಾಗದಲ್ಲಿ ಬೆಳೆದ ಹಲಸು
ಎಷ್ಟು ರುಚಿಯಿತ್ತೆಂದರೆ ಊರಿನವರಿಗೆಲ್ಲ ಪ್ರಿಯ
ಬಿಟ್ಟ ಒಂದು ಕಾಯಿಗೆ ಕಾವಲಾಗಿ ನೂರು ಕಣ್ಣು
ಮಣ್ಣಾದ ಮುದುಕಪ್ಪನಿಗೆ ಕೊನೆಗಾಲದಲ್ಲಿ
ತೊಟ್ಟು ನೀರುಣಿಸಿದವರಿಲ್ಲ
ಈಗ ಕೊಳೆತು ಗೊಬ್ಬರವಾಗಿದ್ದಾನೆ
ಅವನ ಮಾಂಸ-ರಕ್ತದ ರುಚಿ ಸಸ್ಯಹಾರಿಗಳಿಗೇ ಹೆಚ್ಚು ಮೋಜು



ಕೆರೆಗೆ ಆನಿಕೊಂಡ ಜಮೀನಿನೊಳಗೆ
ಬೋರುಗಳು ಭೋರ್ಗರೆಯುತ್ತಿದ್ದರೆ
ಇತ್ತ ಊರಾಚೆ ಬೋರುಗಳಿಗೆ ಬೋರೋ ಬೋರು
ತುಟಿ ಸುಟ್ಟ ಬೀಡಿಗಳೆಷ್ಟಾದರೇನು
ಗಂಟಲು ಸುಡಬಾರದು, ಗುಟುಕು ನೀರು ಬೇಕು



ಬಿಳಿ ಕಾಗೆಯೊಂದು ಕಾಗೆಯಂತೇ ಕೂಗುತ್ತಿತ್ತು
ಎಂಥ ತಮಾಷೆ, ಇನ್ನೂ ಪ್ರಳಯವಾಗಿಲ್ಲ
ಆಗಿದ್ದರೆ ಸಾಹುಕಾರನ ಮನೆ ದೋಚುವ ಸಂಚು ಹೂಡಿದ್ದ
ಚಿಂದಿ ಹಾಯುವವನ ಕನಸಿಗೂ ತೂಕವಿಲ್ಲ



ಇರುಳ ಚಂದಿರನ ನೋಡಿ ವಿರಹಿಯೊಬ್ಬ
ಕಣ್ಣೀರು ಪೋಲಾಗದಂತೆ ಅಳುತ್ತಿದ್ದ
ಅದಕ್ಕೆ ತಾಳವಾಗಿ ಕಪ್ಪೆಗಳ ವಟರು
ಸಂಗಾತಿಯಿಲ್ಲದ ಬಾಳು ಒಂದೇ ತಕ್ಕಡಿಯ ಪಾಲು



ಕಥೆಗಳೇ ಹೀಗೆ
ಯಾವಾಗ ಎಲ್ಲಿಗೆ ಬೇಕಾದರೂ ಹೊರಳಬಹುದು
ಕೇಳುವ ಮನಸುಗಳು ಕ್ರಮವಾಗಿ ಪೋಣಿಸಿಕೊಳ್ಳಬೇಕಷ್ಟೇ
ಅಲ್ಲಿಗೆ ನಿದ್ದೆಗೆ ಕಾವಲಿದ್ದವನಿಗೂ ನಿದ್ದೆ
ರಗ್ಗಿನೊಳಗೆ ಗೊಣಗುತ್ತಿದೆ ಜೀರುಂಡೆ
ಮುಂದಿನ ಕಥೆಯಲ್ಲಿ ಅದಕ್ಕೂ ಒಂದು ಪಾತ್ರ ಕೊಡಬೇಕು...



                                                      - ರತ್ನಸುತ

ದುಃಖ ಹೆಚ್ಚಾದಾಗ ಪ್ರಸವಿಸುವುದು ಕವಿತೆ


ದುಃಖ ಹೆಚ್ಚಾದಾಗ ಪ್ರಸವಿಸುವುದು ಕವಿತೆ
ಪೋಲಿ ಪದಗಳ ಕೂಡಿ ಗಾಂಭೀರ್ಯತೆ ಬೇಡಿ
ಯಾವ ಯೋಚನೆಗೂ ನಿಲುಕದ ಒಂದು ಕವಿತೆ
ಯಾರದ್ದೋ ಮೆಚ್ಚುಗೆ ಪಡೆದು ಸ್ತಬ್ಧ



ಸೂಜಿ ಚುಚ್ಚಲು ಹೃದಯ ಚಿಮ್ಮಿಸಿತು ನೆತ್ತರ
ಇನ್ನೂ ಮುಂದಕ್ಕೆ ಬರೆದರೆ ಬಲು ಘೋರ
ರಾತಿ ಪಾಳಿಯ ಚಂದ್ರ ಹಿಡಿದ ಬುಡ್ಡಿ ದೀಪ
ಹತ್ತಿರತ್ತಿರ ಬರಲು ನೆರಳಿಗೆ ಎಚ್ಚರ



ಸುಂದರ ಸಂಜೆಯನು ಮೊದಲ ಪುಟದಲಿ ಕಟ್ಟಿ
ಅಕ್ಷರದ ಮೆಟ್ಟಿಲನು ಏರಿ ತಾರೆಯ ದಾಟಿ
ಪ್ರೇಮ ಕವಿತೆಗೆ ಚೂರು ಕೆಮ್ಮು ಜಾಸ್ತಿ
ಬೆತ್ತಲಾಗಿಸಲೆಲ್ಲ ಮುಳ್ಳು ತಂತಿ



ಬೆಟ್ಟ ಕರಗಿಸೋ ಆಸೆ ಚಿಟ್ಟೆ ಕನಸು
ನಿದ್ದೆ ಇಲ್ಲದ ಇರುಳ ದೀರ್ಘ ಪಯಣ
ಮಂಚದ ನಿಲುವಿಗೆ ಕಾಲುಗಳೇ ಇಲ್ಲ
ಇದ್ದ ಕಾಲಿನ ಪಾದ ಸದಾ ಒದ್ದೆ..



ಕೋಳಿ ಕಾಳಗದಲ್ಲಿ ಗೆದ್ದ ಕೋಳಿ ಸೋತು
ಸೋತ ಕೋಳಿ ಗೆದ್ದಿತು ನಾಲಗೆಯ
ಬುದ್ಧಿ ಇದ್ದವನಿಗೆ ಇಲ್ಲದವರ ಚಿಂತೆ
ಇಲ್ಲದವರೊಡಗೂಡಿ ಚಿಂತೆ ಬೀಟ್ಟೆ



ಮುಗಿಸುವ ಮುನ್ನ ಕೊನೆಯ ಮಾತು
ನಿಮ್ಮ ಪ್ರಶ್ನೆಗೆ ಇಲ್ಲಿ ಜಾಗವಿಲ್ಲ
ಹಣ್ಣು ತಿಂದು ಸಿಪ್ಪೆ ರಸ್ತೆಯಲೇ ಎಸೆದೆವು
ನಮ್ಮ ತಂಟೆಗೆ ದಾರಿ ಸುಲಭವಲ್ಲ..



                                           - ರತ್ನಸುತ 

ಬಣ್ಣ


ಬೆರಳೆಣಿಕೆಯಷ್ಟು ಬಣ್ಣಗಳ ತಂದು
ಬೆರೆಸಿ ಕೂತರೆ ಅಲ್ಲಿ ಅದೆಷ್ಟು ಬಣ್ಣಗಳು?
ಒಂದಕ್ಕೆ ಮತ್ತೊಂದು, ಮತ್ತೆರಡು, ಮತ್ತಷ್ಟು
ಬಣ್ಣದ ಅಂತ್ಯವಾದರೂ ಯಾವುದು?



ಕೊಂಚದಲ್ಲಿಯೇ ಕುಂಚ ಮೋಸಕ್ಕೆ ಸಿಲುಕಿತು
ಕಪ್ಪು ಹೆಚ್ಚಾಯಿತು ಕಗ್ಗತ್ತಲಿಗೆ
ಬಿಳುಪು ಹೆಚ್ಚಾಯಿತು ಹಾಲ್ಗಡಲಿಗೆ
ಹಸಿರು ಇನ್ನಷು ಹಸಿರು, ಕೆಂಪು ಕಡುಗೆಂಪು



ನೇರಳೆಯ ನೇರಕ್ಕೆ ಹಳದಿಯ ಹೂ ಅರಳಿ
ರೋಜಾ ಮುಳ್ಳಿಗೂ ಬಂತು ನಾಚಿಕೆ ಮೆರಗು
ಬೆರಳ ಗುರುತಿನ ಒಳಗೆ ಬಣ್ಣ ಬಣ್ಣದ ವ್ಯೂಹ
ಏಕಕ್ಕೆ ಸಾಲದೇ ಅನೇಕ ಸೋಗು!!



ತೊಗಲ ಬಣ್ಣವ ಎಂದು ಲೆಕ್ಕಿಸಿತು ಹಾಳೆ?
ಬಿಡಿ ರೇಖೆಗಳೇ ಹೊರಡಿಸಲಿ ಸುತ್ತೋಲೆ
ಗೀಚಿಕೊಂಡವರೆದೆಯ ಬಡಿತಗಳೇ ಏರಿಳಿತ
ಆತ್ಮ ಸ್ವರೂಪವೇ ಒದಗುವ ಚಿತ್ರ



ಇಲ್ಲದ ಬಣ್ಣದಲೂ ಇದೆ ನೂರು ಬಣ್ಣ
ತೆರೆದು ಕಂಡರೆ ಮಾತ್ರ ಒಳಗಣ್ಣ
ಬಣ್ಣ ಎಲ್ಲವ ಕೂಡಿ ಸಮವಾದ ತಾಣ
ನಿಜ ಬಣ್ಣವೆಂಬುದೇ ಇಲ್ಲ ಕಾಣ...



                            - ರತ್ನಸುತ 

ಕಲ್ಲಾಗಿ ಉಳಿದ ನನಗೆ

ಕಲ್ಲಾಗಿ ಉಳಿದ ನನಗೆ
ನೂರೆಂಟು ಉಳಿ ಪೆಟ್ಟು ಕೊಟ್ಟೆ
ಕಡೆಗೊಂದು ಹೂವನಿಟ್ಟೆ
ತಪ್ಪುಗಳ ಕ್ಷಮಿಸೆಂದು ಪೂಜೆಗೈದೆ...


ತೊರೆಯಲ್ಲಿ ಹರಿದ ನನ್ನ
ಬೊಗಸೆಯೊಡ್ಡಿ ಸೆರೆಹಿಡಿದೆ
ಕಣ್ಣಿಗೊತ್ತಿದೆ ಅಲ್ಲಿ ನಾ ಪುನೀತ
ತೀರ್ಥವಾಗಿಸಿಕೊಂಡು ನನ್ನ ಸವಿದೆ




ಕತ್ತಲಲ್ಲಿಯ ಹಣತೆಯಾಗುಳಿದಿದ್ದೆ
ಅಟ್ಟದಲ್ಲಿಟ್ಟರೆನ್ನ ಮೂಟೆ ಕಟ್ಟಿ
ಬಿಡಿಸಿ ಬಂಧನವ ವಿಮುಕ್ತನಾದೆ
ಬೆಳಗಿದೆ ನನ್ನ, ನಿನ್ನ ಅಸ್ತಿತ್ವಕ್ಕಾಗಿ




ಬೆಳಕಿನ ಆಕಾರ ನಾನೆಂದೆ
ಒಲವಿನ ಸೂತ್ರ ನನದೆಂದೆ
ನನಗಾವ ಹೆಸರಿಲ್ಲವೆಂದೆ
ಹೆಸರಿಟ್ಟೇ ನನ್ನೊಲಿಸಿಕೊಂಡೆ ಎಂದೆ




ನೀ ಮಾನವ, ನಾ ದೇವರು
ನೀನೆಟ್ಟ ಅಂತರವೇ ನಮ್ಮ ನಡುವೆ
ನೀ ನನ್ನೊಳು, ನಾ ನಿನ್ನೊಳು
ಹೊರಗಿಟ್ಟು ನೋಡುವುದೇ ನಿನ್ನ ಗೊಡವೆ




ನಾನು ನಾನಾಗಿರದೆ
ನೀನು ನೀನಾಗಿರದೆ
ನಾನೂ ಕಲ್ಲು
ನೀನೂ ಕಲ್ಲು...!!


                       - ರತ್ನಸುತ 

Tuesday 17 October 2017

ಕಣ್ಣೂ, ಕನಸೂ


ಒಂದು ಕಣ್ಣ ಕಿತ್ತಿಟ್ಟು
ಮತ್ತೊಂದು ನೋಡುತಿದೆ
ಒಂದ ಬಿಟ್ಟು ಮತ್ತೊಂದು
ಕಂಡ ಕನಸ ಕೆದಕುತಿದೆ
ಮೋಸವಿಲ್ಲ ನೋವಿಗೆ...

ಪಸೆಯೊಂದು ಕಣ್ಣೀರಿಗೆ



ಅನುಮಾನದ ಕಣ್ಣು ಅದು
ಸ್ವಚ್ಛಗಣ್ಣ ಅನುಮಾನಿಸಿ
ರಕ್ತದ ಮಡುವಿನಲಿ ತನ್ನ ತಾನೇ
ಹೆಣವಾಗಿಸಿದೆ
ರೆಪ್ಪೆ ಬಡಿತಕರ್ಥವಿಲ್ಲ
ಪಸೆಯೊಂದು ನೆತ್ತರಿಗೆ



ಆ ಕೆನ್ನೆಯೂ, ಈ ಕೆನ್ನೆಯೂ
ಮೊದಲಿಂದಲೂ ಎಂದೂ ತಾವು
ಮುಖಾ-ಮುಖಿ ಆಗಿರದೆ
ತಮ್ಮ ತಮ್ಮ ಬಾಷ್ಪಗಳ
ಹೊಂದಿಸಿಕೊಳುತಿದ್ದವು
ವಿಮುಖದಲ್ಲೇ ನಿಟ್ಟುಸಿರು



ನೆತ್ತರು ಹರಿದ ಕೆನ್ನೆ
ಕಣ್ಣೀರು ಅಂಟಿದ್ದಕ್ಕೆ
ಕಣ್ಣೀರು ಹರಿದ ಕೆನ್ನೆ
ನೆತ್ತರು ಅಂಟಿದ್ದಕ್ಕೆ
ಅಲ್ಪದೂರದಲ್ಲೇ ಪಾಪ
ಸೂಚಿಸಿವೆ ಸಂತಾಪ



ಕನಸಿನ ವಿಚಾರದಲ್ಲಿ
ಸ್ಪಷ್ಟವಾಯ್ತು ಇದ್ದ ಕಣ್ಣಿಗೆ
ಬೇರೆ ಬೇರೆಯಲ್ಲ
ಕನಸೊಂದೇ ಕಣ್ಣಿಗೆ...
ಸತ್ತ ಕಣ್ಣು ಮರುಗಿತು
ಇದ್ದ ಕಣ್ಣು ಕರಗಿತು



ಆ ರಾತ್ರಿ ಬೀಳದ ಕನಸಿಗೆ
ನಿದ್ದೆಗೆ ಜಾರಿತು ಕಣ್ಣು
ಮತ್ತೆ ತೆರೆಯದಂತೆ
ಅತ್ತು, ಅತ್ತು ಹಣ್ಣಾಗಿ
ರೆಪ್ಪೆಯೊಳಗೆ ಮಣ್ಣಾಗಿ...



                    - ರತ್ನಸುತ

ಬಿಡಿಗವಿತೆ

ನೀ ಕಚ್ಚದ ಕೆನ್ನೆ ಮೇಲೊಂದು ಮೊಡವೆ
ನೀ ಬಾರದ ಕನಸ ತುಂಬೆಲ್ಲ ಗೊಡವೆ
ಕಣ್ಣಲ್ಲೇ ಕಣಿ ಹೇಳು ನಾ ಕುಣಿದು ಬರುವೆ
ಅಲ್ಲೆಲ್ಲೋ ಹುಡುಕದಿರು ನಿನ್ನಲ್ಲೇ ಇರುವೆ!!

                                   
                                         - ರತ್ನಸುತ 










ಘೋರ ಕನಸು


ಮೊನ್ನೆ ಕನಸಲ್ಲಿ ತುಂಬ ಅತ್ತಿದ್ದೆ
ಕಂಬನಿ ಕಣ್ಣ ದಾಟಿ ಹೊರ ಬರಲಿಲ್ಲ
ಬಿಕ್ಕಳಿಸಿದ್ದು ಎದೆಗೊರಗಿ ಮಲಗಿದ್ದ
ನನ್ನ ಮನದನ್ನೆಗೂ ತಿಳಿದಿರಲಿಲ್ಲ...



ಗೆಳೆಯ ಕೈ ಜಾರಿ ಹೊರಟಿದ್ದಾನೆ
ಅವನಿಗೆ ಕೊಡಬೇಕಾದ ಬಾಕಿಯ
ಲೆಕ್ಕ ಹಾಕುತ್ತಲೇ ಅಳುತ್ತಿದ್ದೆ
ಒಮ್ಮೆಯಾದರೂ ತಡೆಯುತ್ತಾನೆಂದುಕೊಂಡು



ಚಟ್ಟ ಕಟ್ಟುವ ಬಿದಿರು ಸೀಳಿಗೆ
ಅವನ ಚರ್ಮ ಸಿಕ್ಕಿಕೊಂಡರೆ?
ಆ ಮೌನ ಯಾತನೆಯ ಶಂಖ-ಜಾಗಟೆ ಸದ್ದು
ನುಂಗಿ ಬಿಡಬಹುದೆಂಬ ಆತಂಕ



ಅವನಿಗೆ ಹೂವೆಂದರೆ ಪ್ರಾಣ
ಹಂಗಾಗಿ ಹೆಚ್ಚೆಚ್ಚು ಹೂವ ಎರಚಿ
ಹೋದ ಪ್ರಾಣ ಮತ್ತೆ ಬರಬಹುದು
ಅವನ ಬಣ್ಣನೆಗೆ ಮನಸೋಲಲು



ಗದ್ದಲದಲ್ಲಿ ಅವನಿರಲಾರ
ಸದಾ ಏಕಾಂತದೊಂದಿಗೇ ಪರಿಚಿತ
ಗೋರಿ ಕಟ್ಟುವ ಮುನ್ನ ಎಚ್ಚರ
ಸುತ್ತ ಒಂದು ಇರುವೆ ಗೂಡೂ ಸಲ್ಲ



ಗೆಳೆಯ ನಗುತ್ತಿದ್ದವ ಸತ್ತಿದ್ದಾನೆ
ಅಳಿದ ಹಣೆಬರಹಕ್ಕೆ ವಿಭೂತಿ ರಾಚಿ
ಕಂಪಿಸಿದ ಬೆರಳಚ್ಚು ಉಳಿಸಿದೆ
ಹಣೆ ಬೆಚ್ಚಗಾಗಿಸುವ ಆಸೆಯಿಂದ



ಎಚ್ಚರಗೊಳ್ಳದಷ್ಟೂ ವೇಳೆ
ಗೆಳೆಯ ಸತ್ತಿದ್ದ
ಈಗ ಉಸಿರಾಡುತ್ತಿದ್ದಾನೆ ನನ್ನ ಎಚ್ಚರಗೊಳಿಸಿ
ಕೆನ್ನೆ ಸವರಿದರೆ ಕಂಬನಿಯ ಕಾಣೆ...



ಛೇ..ಈ ಕನಸುಗಳು ನಿಜಕ್ಕೂ ಘೋರ
ನೂರು ಕಾಲ ಖುಷಿಯಿಂದ ಬಾಳು ಗೆಳೆಯ!!



                                         - ರತ್ನಸುತ 

ಎಡ-ಬಲ


ಎಡಗೈ ಹೊಲಸೆಂದ ಬಲಗೈ
ಸ್ವಾರ್ಥ ಬಲಗೈ ಎಂದ ಎಡಗೈ
ಕೈ ತಟ್ಟಿಕೊಂಡದ್ದ ಮರೆತಿತ್ತು
ಬೊಗಸೆ ಆಕಾರ ಮುರಿದಿತ್ತು
ಅಪ್ಪುಗೆಯ ಬಿಗಿ ಶಿಥಿಲಗೊಂಡಿತ್ತು

ಎಡಗಣ್ಣ ಬಲಗೈ, ಬಲಗಣ್ಣ ಎಡಗೈ
ತಾಕಿದ್ದು ಎಂದೋ ಜ್ಞಾಪಿಸಿಕೊಳ್ಳಿ
ತಾಕಿಲ್ಲವೆಂದಮಾತ್ರಕ್ಕೆ ತಪ್ಪೇ?
ಈಗಲೇ ತಾಗಿದರೆ ಮುಗಿಯಿತು
ನಿಷ್ಠುರ ಯಾರಿಗೆ ಒಳಿತು?

ತೋರ್ಬೆರಳುಗಳ ತಂದು ಸನಿಹ
ವಿಮುಖಗೊಳಿಸುವುದೆಂಥ ಮರುಳು
ಮನಸಲ್ಲಿ ಮನೆಯನ್ನು ಕಟ್ಟಿ
ಮನೆ ಬಾಗಿಲಲಿ ಬಿಡಲು ನೆರಳು,
ಅಳುವಾಗ ವ್ಯರ್ಥ ಗೋಳು

ದೂರುಳಿದ ಮಾತ್ರಕ್ಕೆ ಬೇಡೆಂದುಕೊಂಡು
ಹತ್ತಿರತ್ತಿರದಲ್ಲಿ ಛಿದ್ರಗೊಂಡು
ಉಳಿದ ಚೂರುಗಳಲ್ಲಿ ಕಂಡುಕೊಳ್ಳಲು ನಿಜವ
ಏನು ಹೇಳಬೇಕು, ಯಾರ ದೂರಬೇಕು

ಉಗುರ ಕಚ್ಚಿದ ಹಲ್ಲು ಲೆಕ್ಕಿಸಿತೇ ಬೆರಳನ್ನು
ಬಲಗೈಯ್ಯ ಹುಣ್ಣಿಗೆ ಎಡಗೈ ಕಣ್ಣು
ಕೆಂಡ ಬಿದ್ದ ಹಸ್ತ ಹಂಚಿಕೊಂಡಿತು ನೋವ
ಸಿಹಿಗಷ್ಟೇ ಬಲಹಸ್ತ ಸ್ವಹಿತ?

ಹೊಲಸು ಎಡಹಸ್ತವ ತಿಕ್ಕಲು ಬೇಕು ಬಲ
ಬೆನ್ನ ಮುಖಕೂ ತಾವೇ ಸಪ್ಪಳ
ವಿಭೂತಿಗೊಲಿದು ಮೈಥುನವ ಜರಿದರೆ ಹೇಗೆ?
ಕೇಸರ ಪೂಜೆಗೂ ಇರಲಿ ಬೆಂಬಲ!!

                                       - ರತ್ನಸುತ

Thursday 28 September 2017

ಬನ್ನಿ ನನ್ನ ಮನೆಗೆ


ಬಿಡುವು ಮಾಡಿಕೊಂಡು ಬನ್ನಿ ನನ್ನ ಮನೆಗೆ
ದಾರಿ ಹಿಡಿದು ಬನ್ನಿ ಮನದ ತುತ್ತ ತುದಿಗೆ
ಕಲ್ಲು ಮುಳ್ಳ ಮೆಟ್ಟಿ, ಗುಡ್ಡಗಾಡು ದಾಟಿ
ಸೋತ ಮೋರೆ ಬೀರದಿರಿ ನನ್ನ ಕಡೆಗೆ



ಇಗೋ ಇಲ್ಲೇ ತಿರುವು ಕಾಣಿ
ಅಗೋ ಅಲ್ಲೇ ಹಾಯಿ ದೋಣಿ
ಮಣ್ಣ ದಾರಿ, ನೀರ ದಾರಿ
ಇಲ್ಲ "ಇಂಥದೇ" ದಾರಿ ನನ್ನ ಮನೆಗೆ



ವಿಳಾಸ ನನಗೂ ತಿಳಿದಿಲ್ಲ
ಪ್ರಯಾಸ ನಿಮಗೆ ತಪ್ಪಲ್ಲ
ಅಲ್ಲಲ್ಲಿ ಸಿಗಲುಬಹುದು ಕುರುಹು
ನನ್ನದೇ ಹುಡುಕಾಟದ ಹೆಜ್ಜೆ ಗುರುತು



ಸಿಕ್ಕರೋ ಸಂತೋಷ ಗುರುತಿಟ್ಟವರು
ದಾರಿ ತೋರುವವರು ಇಹರು ಈಗೆಲ್ಲೋ?
ಕಾಲು ದಾರಿ ಹಿಡಿದು ಬನ್ನಿ
ಮೇಲೆ, ಮೇಲೆ ಮತ್ತೂ ಮೇಲೆ ಹತ್ತಿ ಬನ್ನಿ
ನನ್ನ ಗುಡಿಸಲಾಚೆ ನಿಮಗೆ ಹೊಂಗೆ ಚಪ್ಪರ



ತಟ್ಟದಿರಿ ಇರದ ಬಾಗಿಲ
ಎಚ್ಚರ ಅದು ಹಸಿ ನೆಲ
ಹಚ್ಚಿಟ್ಟ ದೀಪವಿದೆ ಬೆಳಕ ಪಾಲಿಗೆ
ಗಡಿಗೆ ತುಂಬ ಸಿಹಿ ನೀರು ದಣಿದ ಕಣ್ಣಿಗೆ



ದಾರಿ ತಪ್ಪಿದವರೇ ಕ್ಷಮಿಸಿ
ಆದರೆ ಇನ್ನಷ್ಟು ಕ್ರಮಿಸಿ
ಅಲ್ಲೇ ಸಿಕ್ಕರೂ ಸಿಗುವೆ "ಅಲೆಮಾರಿ"
ಮನೆ ದೂರ, ಮರದಡಿಗೆ ಸರಿದಾಡಿ



ಬೆಂದು ಬಂದ ಬಾಂಧವರೇ
ನೊಂದು ಹಿಂದಿರುಗದಿರಿ
ನಿಮಗೂ ಪಾಲಿದೆ ಮನೆಯೊಳು
ಇದ್ದು ಬಿಡಿ ಅಲ್ಲೇ, ನೆನಪಿನ ಜೊತೆಯಲ್ಲೇ!!



                                     - ರತ್ನಸುತ

ಹ್ಯಾಪಿ ಮದುವೆ ಆನಿವರ್ಸರಿ ಹೆಂಡ್ತಿ 💑❤🎉🎊🎈


ಮಳೆಬಿಲ್ಲಿಗೆ ಆಸೆ ಪಟ್ಟವರು ಇರುಳಲ್ಲಿ
ಹೊಸ ಬಾಳಿಗೆ ಕನಸ ಕೊಟ್ಟವರು ಮಡಿಲಲ್ಲಿ
ಬಿಳಿ ಮೋಡದ ಮೇಲೆ ಗೀಚಿಟ್ಟ ಗುರುತೊಂದು...

ಹನಿಯಾಗಿದೆ ಕೆನ್ನೆ ಮೇಲೆ ಗುಟ್ಟಾಗಿ
ಖುಷಿಗೆಂದು ಬಿಡಿಸಿ ಹೇಳಬೇಕೆ?



ಬರಿಗಾಲಿಗೊಂದಿಷ್ಟು ಮುಳ್ಳುಗಳ ಗುರುತಿಟ್ಟು
ಅಂಗೈಯ್ಯಲಿ ಸಣ್ಣ ಪ್ರಣತಿಯನು ಬಚ್ಚಿಟ್ಟು
ಕಣ್ಣಂಚಲಿ ಮಿಂಚು ಮರೆಯಾಗದಂತಿರಿಸೆ
ನೆರಳೂ ನಾಚಿ ದೂರುಳಿದು ನಿಂತಾಗ
ಹತ್ತಿರ ನೀನಿದ್ದೆ ಅಂತನ್ನಬೇಕೆ?



ಮುನಿಸಲ್ಲೂ ಮನಸಲ್ಲೂ ನೀನಿದ್ದ ಹಿತವನ್ನು
ಜೊತೆಯಾಗಿ ನಿನ್ನಲ್ಲಿ ಹಂಚಿಕೊಳ್ಳೋ ಹಿತವ
ಅತಿಯಾಗಿ ಬಯಸುವುದು ಅಹಿತಕರವೆಂದೆನಿಸಿ
ಸ್ಥಿತಿಪ್ರಜ್ಞೆ ಕಳೆದಂತೆ ಮರುಳಾಗುವಾಗ
ಎಚ್ಚರಿಕೆಯ ಗುಳಿಗೆ ನೀಡಬೇಕೆ?



ದಾಟಿ ಬಂದವುಗಳಿಗೆ ನಮ್ಮ ನೆಪವಿಲ್ಲ
ಮೀಟಿ ನಿಂತವುಗಳಲಿ ನಾವೇ ಎಲ್ಲ
ಸೇತುವೆಯ ಕಟ್ಟಿದೆವು ದಾಟಲಷ್ಟಕೇ ಅಲ್ಲ
ಸೋತ ಮಾತುಗಳನ್ನು ಆಡಿಕೊಳಲು
ಜಾಹೀರಾತಿನ ಗೊಡವೆ ನಮಗೇಕೆ?



ಬೆನ್ನ ಹಿಂದಿನವೆಲ್ಲ ಬರಲಿ ಜೊತೆಗೆ
ಮುಂದೆ ಸಾಗುವ ನಾಳಿನೆಲ್ಲ ಕಥೆಗೆ
ರೆಪ್ಪೆ ಅಲುಗಿಸಬೇಡ ತಂಗುದಾಣವದು
ನಾ ಮರೆತ ನಗುವೊಂದರ ನಿಲುವಲ್ಲಿದೆ
ನಾ ಹಾರಲು ನೀ ಸಂದ ರೆಕ್ಕೆ!!



ಎಲ್ಲ ಕಾಲಕೂ ಸೊಲ್ಲು ಬೆಲ್ಲವಾಗಲೊಲ್ಲದು
ಬೇವಿಗೂ ಬೇಕು ಅದರಷ್ಟೇ ಪಾಲು
ಮೆಲ್ಲ ಜಾರುವೆ ನಿನ್ನ ಬಳಸಿ ಕೇಳುವೆ ಮುತ್ತು
ಎಲ್ಲವೂ ಮತ್ತೆ ಶೂನ್ಯಕ್ಕೆ ಮರಳಲು,
ಕಳುವಾದ ದಾರಿಯನು ಹುಡುಕಬೇಕೆ?

                                          
                                             - ರತ್ನಸುತ

ಶೂನ್ಯದಿಂದಿಲ್ಲಿತನಕ

ಶೂನ್ಯದಿಂದಲೇ ಕಟ್ಟು ಸೇತುವೆ
ಮೌನದಾಚೆಗೆ ಬಂದ ಕೂಡಲೆ
ಮಾತನಾಡಿಸು ಮೆಲ್ಲೆ ಮನಸನು
ಒಮ್ಮೆ ಗಿಲ್ಲುತ, ಒಮ್ಮೆ ಸೋಲುತ


 ಬತ್ತಲಾರದು ಎದೆಯ ತಂಬಿಗೆ...
ಮತ್ತೆ ಚುಂಬಿಸು, ಮತ್ತೆ ತುಂಬಿಸು

ಕೊಟ್ಟ ಉತ್ತರ ತಪ್ಪು ಅಂದರೂ
ಅಂಕ ಕೊಟ್ಟರೂ ಸೊನ್ನೆ ಸುತ್ತುವೆ


ನಿನ್ನ ಕಣ್ಣಿನ ಕಾಲು ದಾರಿಯ
ನೋಟದೊಂದಿಗೆ ಹೆಜ್ಜೆ ಹಾಕುತ
ಮತ್ತೆ ಸಿಕ್ಕುವೆ ಕಳೆದ ಹಾದಿಲಿ
ನೆಟ್ಟು ನೋಟವ, ಬಿಟ್ಟು ಎಲ್ಲವ



ಹಿತ್ತಲಲ್ಲಿದೆ ಅರಳು ಮಲ್ಲಿಗೆ
ಕಟ್ಟಿ ಕೊಡುವೆನು ನಿನ್ನ ಕುರುಳಿಗೆ
ಬೆರಳಿಗಂಟಿದ ಘಮಲು ಮಾದಕ
ಲಜ್ಜೆ ಕಾಣಲು ಮುಗಿಲು ಉತ್ಸುಕ


ಪ್ರಾಣ ಮುಷ್ಟಿಯ ಹಿಡಿತದಲ್ಲಿದೆ
ಅತ್ತ ತಿರುಗಿ ಬಾ, ಜೀವಕೆರಗಿ ಬಾ

ಬುಡ್ಡಿ ದೀಪಕೆ ಸಡ್ಡು ಹೊಡೆದಿದೆ
ಎತ್ತ ನೋಡಲೂ ತುಂಬು ಕತ್ತಲು


 ಗೀಚಬೇಡವೇ ಸೋತ ಹೃದಯವ
ಹೊತ್ತು ಉರಿವುದು ನಿನ್ನ ಹೊರುತಲೇ
ಕತ್ತಲಲ್ಲಿಯೇ ಕಂಡುಕೊಳ್ಳುವೆ
ನಿನ್ನ ನನ್ನೊಳು, ನನ್ನ ನಿನ್ನೊಳು...



                                     - ರತ್ನಸುತ

Tuesday 25 April 2017

"ಮುಂದೇನಾಯಿತು?"


ಬೆರಗುಗಣ್ಣಿನ ಮುಗ್ಧ ಮುಖಗಳು
ಪುಣ್ಯಕೋಟಿಯ ಕಥೆ ನೋಡುತ
ಮತ್ತೆ ಮತ್ತೆ ಮಾರುಹೋದವು
ಸತ್ಯವಾಕ್ಯ ಪರಿಪಾಲನೆಗೆ


ಪುಣ್ಯಕೋಟಿ ತಾನು ತನ್ನ
ಕಂದನಿಗೆ ಹಾಲುಣಿಸುತಿರಲು
ನಾಲಗೆಯ ಚಪ್ಪರಿಸುತ ಅವು
ಹರ್ಷದಿಂದ ಕುಣಿದವು


ಹುಲಿಯ ಘರ್ಜನೆ, ಕ್ರೋಧ ಭಂಗಿ
ಅರಳಿಸಿದವು ಕಣ್ಣ ಚೂರು
ಹೆಜ್ಜೆ ಹೆಜ್ಜೆಗೆ ಕೌತುಕಕ್ಕೆ 
ನಾಂದಿ ಹಾಡಿತು ಹಾಡದು


ಪುಣ್ಯಕೋಟಿಯು ಹುಸಿಯನಾಡದೆ
ಹುಲಿಗೆ ತಾ ಶರಣಾಗುತಿರಲು
ಎಗರಿ ಇರಿದು ರಕ್ತ ಕುಡಿವುದು
ಎಂದು ಅವುಗಳು ಎಣಿಸಲು


ಹುಲಿಯು ಕಂಬನಿ ಹರಿಸಿ ಪ್ರಾಣವ
ಬಿಟ್ಟ ಕೂಡಲೆ ಕಥೆಯು ಮುಗಿಯಿತು
ಪುಣ್ಯಕೋಟಿಯ ಜೀವ ಉಳಿದಿದೆ
ಪ್ರಶ್ನೆ "ಮುಂದೇನಾಯಿತು?"


ಹುಲಿಗೂ ಇರಬೇಕಲ್ಲ ಮರಿಗಳು?
ಅವುಗಳಾರು ಸಲಹುವವರು

ಗಂಗೆ, ತುಂಗೆಯರಂತೆ ಅವಕೆ
ಉಣಿಸುವವರಾರು ಮಾಂಸವ?


ಮತ್ತೆ ಮೊಳಗಿತು ಅದೇ ಹಾಡು

ಮತ್ತೆ ಮತ್ತೆ ಹುಲಿಯೇ ಸತ್ತಿತು
ತಬ್ಬಲಿ ಹುಲಿ ಮರಿಗಳೆಷ್ಟೋ 
ಕಾಣದಾದವು ಕಣ್ಣಿಗೆ!!

                                - ರತ್ನಸುತ

Monday 2 January 2017

ಗರುಡ ಪ್ರಯತ್ನ ೩

ಇಳಿಸಂಜೆ ಮಳೆಯಲ್ಲಿ, ನೀನೊಂದು ಹನಿಯಾಗಿ
ಕೆನ್ನೆ ಮೇಲೆ ಮುತ್ತನಿಟ್ಟಂತೆ
ರೋಮಾಂಚನ.. ರೋಮಾಂಚನ..
ಬಿಳಿ ಹಾಳೆ ಮನದಲ್ಲಿ, ಹೊಂಬಣ್ಣವ ಸೋಕಿ
ನೀ ಭಾವ ರೇಖೆ ಗೀಚಿ ಹೋದಂತೆ
ರೋಮಾಂಚನ.. ರೋಮಾಂಚನ..


ನಿದಿರೆ ಕೊಡದ ಕನಸೊಂದು ಕವಿದಂತೆ
ಬಾ ನನ್ನನು ಆವರಿಸು ಬೇಗ
ತೊದಲೋ ಹೃದಯ ಹಾಡೊಂದ ನುಡಿದಂತೆ
ಮನಸಿಟ್ಟು ನೀ ಆಲಿಸು ಈಗ


ಎದೆ ಬಾಗಿಲು ತೆರೆಯುವೆ ನಿನಗೆ
ಬಾ ಸೇರಿಕೋ ನನ್ನುಸಿರೊಳಗೆ
ಸ್ಥಿರವಾಗು ಜೀವದಲ್ಲೂ ಜೊತೆಯಾಗಿ..


ರೋಮಾಂಚನ.. ರೋಮಾಂಚನ..

ಮಾತೆಲ್ಲ ಮರೆಯಾಗಿ ಮೌನಕ್ಕೆ ಶರಣಾಗಿ
ಕಣ್ಣಲ್ಲೇ ಮಾತನಾಡಿಕೊಂಡಾಗ..
ರೋಮಾಂಚನ.. ರೋಮಾಂಚನ..


ಬೇಕು ನಿನ್ನ ಸಹವಾಸ
ಎಲ್ಲ ಎಲ್ಲೆ ಮೀರೋಕೆ
ಸಾಲದಂತೆ ಆಕಾಶ
ನಿನ್ನ ಜೋಡಿಗೂಡಿ ಹಾರೋಕೆ


ಹಿತವಾದ ನಗುವಲ್ಲಿ ಹತನಾಗುವ ಮುನ್ನ
ಮಿತಿ ಮೀರುವಾಸೆ ತುಂಬಿ ಬಂದಾಗ
ರೋಮಾಂಚನ.. ರೋಮಾಂಚನ..


ಅನುಗಾಲ ನಿನಗಾಗಿ ನೆರಳಾಗಿ ಉಳಿದಾಗ
ತೋಳಿಗೂನು ಜೀವ ಬಂದಂತೆ
ರೋಮಾಂಚನ.. ರೋಮಾಂಚನ..


                                        - ರತ್ನಸುತ 

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...